ಮಂಗಳೂರು:ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಿರುವುದು ಸಂತಸದ ವಿಚಾರ. ತುಳು ಭಾಷೆಗೆ ಸೂಕ್ತ ಸ್ಥಾನಮಾನ ದೊರೆಯಬೇಕು ಎಂಬ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ತುಳು ಭಾಷೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ ಎಂದು ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ ಹೇಳಿದರು.

ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರೆಯಬೇಕು ಎಂಬ ಬೇಡಿಕೆಯನ್ನು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಸ್ತುತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮುಂದೆಯೂ ಸಲ್ಲಿಸಲಾಗಿತ್ತು. ಇದೀಗ ತುಳುವಿಗೆ ಮಾನ್ಯತೆ ದೊರೆತಿರುವುದು ಸಂತಸ ತಂದಿದೆ. ಈ ಹೋರಾಟದಲ್ಲಿ ಹಲವು ಸಂಘಟನೆಗಳು ಕೈಜೋಡಿಸಿದ್ದು, ಎಲ್ಲರ ಸಹಕಾರದಿಂದ ಈ ಬೇಡಿಕೆ ಯಶಸ್ವಿಯಾಗಿದೆ ಎಂದರು.

ತುಳು ಭಾಷೆ ಮಾತನಾಡುವವರು ತುಳುನಾಡಿಗೆ ಮಾತ್ರ ಸೀಮಿತರಾಗಿಲ್ಲ. ರಾಜ್ಯ, ದೇಶ ಹಾಗೂ ವಿಶ್ವದ ವಿವಿಧ ಭಾಗಗಳಲ್ಲಿ ತುಳು ಮಾತನಾಡುವವರು ಇದ್ದಾರೆ. ಬ್ಯಾರಿ, ಕೊಂಕಣಿ ಹಾಗೂ ಕ್ರಿಶ್ಚಿಯನ್ ಸಮುದಾಯಗಳಲ್ಲಿಯೂ ತುಳು ಭಾಷೆಯ ಬಳಕೆ ಕಂಡುಬರುತ್ತಿದ್ದು, ತುಳು ವಿವಿಧ ಸಮುದಾಯಗಳನ್ನು ಬೆಸೆಯುವ ಭಾಷೆಯಾಗಿದೆ ಎಂದು ಹೇಳಿದರು.

ತುಳು ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಪ್ರತ್ಯೇಕ ತುಳು ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂಬುದು ತುಳು ಪರಿಷತ್ತಿನ ಪ್ರಮುಖ ಬೇಡಿಕೆಯಾಗಿದೆ. ತುಳು ಅಕಾಡೆಮಿ ಸ್ಥಾಪನೆಯಿಂದ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ನೆರವಾಗಿದ್ದರೂ, ಅನುದಾನ ಸೇರಿದಂತೆ ಹಲವು ಸಮಸ್ಯೆಗಳಿವೆ. ತುಳು ಅಭಿವೃದ್ಧಿ ನಿಗಮ ಸ್ಥಾಪನೆಯಾದರೆ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ನೆರವು ದೊರೆಯಲಿದೆ ಎಂದರು.
ತುಳು ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಬೇಡಿಕೆಯನ್ನು ಈಡೇರಿಸುವ ಭರವಸೆ ದೊರೆತಿದೆ. ಇದರಿಂದ ತುಳು ಭಾಷೆಯ ಅಭಿವೃದ್ಧಿಯ ಕುರಿತು ಆಶಾಭಾವನೆ ಮೂಡಿದೆ. ತುಳು ಭಾಷೆಗೆ ಮಾನ್ಯತೆ ದೊರೆಯುವಲ್ಲಿ ಸಹಕರಿಸಿದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಿಗೆ ತುಳು ಪರಿಷತ್ ವತಿಯಿಂದ ಕೃತಜ್ಞತೆ ಸಲ್ಲಿಸುವುದಾಗಿ ಶುಭೋದಯ ಆಳ್ವ ಹೇಳಿದರು.


Fast access and no lagging. It’s refreshing to find a site that actually values the player’s time. Great job to the 5jililogin team.