ಪಶು ಪುನರ್ವಸತಿ ಚಿಕಿತ್ಸೆಯಲ್ಲಿ ವಿಶೇಷ ತರಬೇತಿ: ತುಂಬೆ ಮೆಡಿಕಲ್ ಯೂನಿವರ್ಸಿಟಿ–PEAP ಸಹಭಾಗಿತ್ವ

ಅಜ್ಮಾನ್ (ಯುಎಇ): ಪಶು ವೈದ್ಯಕೀಯ ಕ್ಷೇತ್ರದಲ್ಲಿ ಶಸ್ತ್ರಚಿಕಿತ್ಸೆ ಹಾಗೂ ಗಾಯಗಳ ನಂತರ ಪ್ರಾಣಿಗಳ ಪುನರ್ವಸತಿ ಚಿಕಿತ್ಸೆಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (GMU) ಅಧೀನದ ತುಂಬೆ ಕಾಲೇಜ್ ಆಫ್ ವೆಟರ್ನರಿ ಮೆಡಿಸಿನ್, ದುಬೈನ ಮೇಡಾನ್ ಮೂಲದ ಫಿಸಿಯೊ ಎವಲ್ಯೂಷನ್ ಅನಿಮಲ್ ಫಿಸಿಯೊಥೆರಪಿ ಎಲ್‌ಎಲ್‌ಸಿ (PEAP) ಸಂಸ್ಥೆಯೊಂದಿಗೆ ಐದು ವರ್ಷಗಳ ಅವಧಿಯ ತಿಳಿವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿದೆ.

ಈ ಸಹಭಾಗಿತ್ವದ ಮೂಲಕ ಡಾಕ್ಟರ್ ಆಫ್ ವೆಟರ್ನರಿ ಮೆಡಿಸಿನ್ (DVM) ಪದವಿ ಪಠ್ಯಕ್ರಮದಲ್ಲಿ ಪಶು ಫಿಸಿಯೊಥೆರಪಿ ತರಬೇತಿ ಹಾಗೂ ಆಯ್ಕೆಯಾಧಾರಿತ ವಿಶೇಷ ಕೋರ್ಸ್‌ಗಳನ್ನು ಪರಿಚಯಿಸಲಾಗುತ್ತಿದೆ. ಒಪ್ಪಂದಕ್ಕೆ ಕಾಲೇಜಿನ ಡೀನ್ ಸಹಿ ಹಾಕಿದ್ದು, ಈ ಸಂದರ್ಭದಲ್ಲಿ ತುಂಬೆ ಗ್ರೂಪ್‌ನ ಸ್ಥಾಪಕ ಹಾಗೂ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಮತ್ತು PEAP ಸಂಸ್ಥೆಯ ಸ್ಥಾಪಕಿ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಕರ್ಸ್ಟನ್ ಕ್ರಿಸ್ಟಿಯನ್ಸನ್ ಉಪಸ್ಥಿತರಿದ್ದರು.

DVM ವಿದ್ಯಾರ್ಥಿಗಳು ಅಜ್ಮಾನ್‌ನ GMU ಕ್ಯಾಂಪಸ್‌ನಲ್ಲಿ ಪೂರ್ವ-ವೈದ್ಯಕೀಯ ತರಬೇತಿ ಪೂರ್ಣಗೊಳಿಸಿದ ಬಳಿಕ, PEAPನ ವಿಶೇಷ ಚಿಕಿತ್ಸಾ ಕೇಂದ್ರದಲ್ಲಿ ಪ್ರಾಯೋಗಿಕ ತರಬೇತಿ ಪಡೆಯಲಿದ್ದಾರೆ. ಶಸ್ತ್ರಚಿಕಿತ್ಸೆ ಅಥವಾ ಗಾಯಗಳಿಂದ ಚೇತರಿಸಿಕೊಳ್ಳುತ್ತಿರುವ ಪ್ರಾಣಿಗಳು ಹಾಗೂ ವಯೋಸಹಜ ಸಮಸ್ಯೆಗಳನ್ನು ಎದುರಿಸುತ್ತಿರುವ ಪ್ರಾಣಿಗಳ ಆರೈಕೆಯಲ್ಲಿ ನೇರ ಅನುಭವ ಪಡೆಯಲಿದ್ದಾರೆ. ಪ್ರಾಣಿಗಳ ಪುನರ್ವಸತಿ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ PEAP ವೈದ್ಯರನ್ನು GMUನ ಸಹಾಯಕ ಬೋಧಕ ಸಿಬ್ಬಂದಿಯಾಗಿ ನೇಮಕ ಮಾಡಲಾಗುತ್ತದೆ.

ತುಂಬೆ ಕಾಲೇಜ್ ಆಫ್ ವೆಟರ್ನರಿ ಮೆಡಿಸಿನ್ ಡೀನ್ ಪ್ರೊ. ಮೊಹಮ್ಮದ್ ಎಸ್. ಖಲೀಫೆಹ್ ಮಾತನಾಡಿ, “ಆಧುನಿಕ ಪಶು ವೈದ್ಯಕೀಯ ಆರೈಕೆಯಲ್ಲಿ ಪುನರ್ವಸತಿ ಚಿಕಿತ್ಸೆಯು ಪ್ರಮುಖ ಭಾಗವಾಗಿದೆ. ಆದರೆ ಈ ಹಂತದಲ್ಲೇ ವಿದ್ಯಾರ್ಥಿಗಳಿಗೆ ಇಂತಹ ತರಬೇತಿ ದೊರೆಯುವುದು ಅಪರೂಪ. ಫಿಸಿಯೊ ಎವಲ್ಯೂಷನ್‌ನ ತಜ್ಞರೊಂದಿಗೆ ತರಬೇತಿ ಪಡೆಯುವುದರಿಂದ ವಿದ್ಯಾರ್ಥಿಗಳಿಗೆ ನೈಜ ವೈದ್ಯಕೀಯ ಅನುಭವ ಹಾಗೂ ಪದವಿ ಮುಗಿಸಿದ ದಿನದಿಂದಲೇ ಅವರ ವೃತ್ತಿಜೀವನಕ್ಕೆ ನೆರವಾಗುವ ವಿಶೇಷ ಕೌಶಲ್ಯ ದೊರೆಯಲಿದೆ” ಎಂದರು.

PEAP ಸಂಸ್ಥೆಯ ಸ್ಥಾಪಕಿ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಕರ್ಸ್ಟನ್ ಕ್ರಿಸ್ಟಿಯನ್ಸನ್ ಮಾತನಾಡಿ, “ಯುಎಇಯಲ್ಲಿ ಪರಿಣತ ಪಶು ಪುನರ್ವಸತಿ ಚಿಕಿತ್ಸೆಯ ಬೇಡಿಕೆ ಲಭ್ಯವಿರುವ ತಜ್ಞರಿಗಿಂತ ಹೆಚ್ಚಾಗಿದೆ. ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ಕೌಶಲ್ಯಗಳನ್ನು ರೂಪಿಸಿಕೊಳ್ಳುತ್ತಿರುವ ಹಂತದಲ್ಲೇ ತರಬೇತಿ ನೀಡುವುದು ಈ ಕೊರತೆಯನ್ನು ನೀಗಿಸುವ ಪರಿಣಾಮಕಾರಿ ಮಾರ್ಗವಾಗಿದೆ. GMU ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯ ಬಾಗಿಲು ತೆರೆಯುತ್ತಿರುವುದಕ್ಕೆ ಹೆಮ್ಮೆಪಡುತ್ತೇವೆ” ಎಂದು ಹೇಳಿದರು.

ಪಶು ವೈದ್ಯಕೀಯ ಶಿಕ್ಷಣಕ್ಕೆ ಸಮಗ್ರ ವ್ಯವಸ್ಥೆ

ತುಂಬೆ ಕಾಲೇಜ್ ಆಫ್ ವೆಟರ್ನರಿ ಮೆಡಿಸಿನ್ ಈಗಾಗಲೇ ರೂಪಿಸಿಕೊಂಡಿರುವ ವಿಸ್ತೃತ ವೈದ್ಯಕೀಯ ಜಾಲಕ್ಕೆ PEAP ಸಹಭಾಗಿತ್ವ ಮತ್ತಷ್ಟು ಬಲ ನೀಡಿದೆ. DVM ಪದವಿ ಕಾರ್ಯಕ್ರಮಕ್ಕೆ ಯುಎಇ ಉನ್ನತ ಶಿಕ್ಷಣ ಮತ್ತು ವೈಜ್ಞಾನಿಕ ಸಂಶೋಧನಾ ಸಚಿವಾಲಯದ ಶೈಕ್ಷಣಿಕ ಮಾನ್ಯತಾ ಆಯೋಗದಿಂದ (CAA) ಸೆಪ್ಟೆಂಬರ್ 2025ರಲ್ಲಿ ಪ್ರಾಥಮಿಕ ಮಾನ್ಯತೆ ದೊರೆತಿದೆ.

ವಿದ್ಯಾರ್ಥಿಗಳಿಗೆ ತುಂಬೆ ವೆಟರ್ನರಿ ಕ್ಲಿನಿಕ್ಸ್, ತುಂಬೆ ವೆಟರ್ನರಿ ಕ್ಲಿನಿಕಲ್ ಸ್ಕಿಲ್ಸ್ ಲ್ಯಾಬ್ ಸೇರಿದಂತೆ ಲಂಡನ್‌ನ ರಾಯಲ್ ವೆಟರ್ನರಿ ಕಾಲೇಜ್, ಶಾರ್ಜಾ ಈಕ್ವೈನ್ ಆಸ್ಪತ್ರೆ, ಶಾರ್ಜಾ ಫಾಲ್ಕನ್ ಆಸ್ಪತ್ರೆ ಹಾಗೂ ಉಮ್ಮ್ ಅಲ್ ಕುವೈನ್ ಕ್ಯಾಮೆಲ್ ಆಸ್ಪತ್ರೆಗಳ ಸಹಯೋಗದಲ್ಲಿ ತರಬೇತಿ ನೀಡಲಾಗುತ್ತದೆ.

ಇದಲ್ಲದೆ, ಯುಎಇಯ ಮೊದಲ ಖಾಸಗಿ ಪಶು ವೈದ್ಯಕೀಯ ಬೋಧನಾ ಆಸ್ಪತ್ರೆಯನ್ನು ಅಜ್ಮಾನ್‌ನ ತುಂಬೆ ಮೆಡಿಸಿಟಿಯಲ್ಲಿ 2027ರಲ್ಲಿ ಆರಂಭಿಸುವ ಉದ್ದೇಶದಿಂದ ತುಂಬೆ ಗ್ರೂಪ್ ಕಾಮಗಾರಿ ಪ್ರಾರಂಭಿಸಿದೆ.

ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಐದು ವರ್ಷಗಳ ಡಾಕ್ಟರ್ ಆಫ್ ವೆಟರ್ನರಿ ಮೆಡಿಸಿನ್ (DVM) ಪದವಿ ಕಾರ್ಯಕ್ರಮಕ್ಕೆ ಇದೀಗ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳೊಂದಿಗೆ 12ನೇ ತರಗತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಮಾನವ, ಪ್ರಾಣಿ ಹಾಗೂ ಪರಿಸರ ಆರೋಗ್ಯದ ಪರಸ್ಪರ ಸಂಬಂಧವನ್ನು ಒತ್ತಿಹೇಳುವ ವಿಶ್ವ ಆರೋಗ್ಯ ಸಂಸ್ಥೆಯ (WHO) ‘ಒನ್ ಹೆಲ್ತ್’ ಪರಿಕಲ್ಪನೆಯನ್ನು ಆಧರಿಸಿ ಈ ಪಠ್ಯಕ್ರಮ ರೂಪಿಸಲಾಗಿದೆ.

ಅರ್ಜಿ ಸಲ್ಲಿಸಲು: gmu.ac.ae/admissions

ಇಮೇಲ್: admissions@gmu.ac.ae

ಸಂಪರ್ಕ: +971 6 7030691 (ಇಂಗ್ಲಿಷ್) | +971 6 7030692 (ಅರೇಬಿಕ್)

SHARE
Loading spinner

Leave a Reply

Your email address will not be published. Required fields are marked *

error: Content is protected !!