ಸತೀಶ್ ಜಾರಕಿಹೊಳಿ ಮೇಲಿನ ED ದಾಳಿ ಖಂಡಿಸಿ ಕಾಂಗ್ರೆಸ್ ಖಂಡನೆ

ಮಂಗಳೂರು: ಕರ್ನಾಟಕದ ಪ್ರಭಾವಿ ಕಾಂಗ್ರೆಸ್ ನಾಯಕ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸೇರಿದ ಮನೆ ಮತ್ತು ಕಚೇರಿಗಳ ಮೇಲೆ ಸೆಪ್ಟೆಂಬರ್ 9 ಮತ್ತು 10ರಂದು ಸುಮಾರು 36 ಗಂಟೆಗಳ ಕಾಲ 21 ಕಡೆಗಳಲ್ಲಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ನಡೆಸಿದ ದಾಳಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕ ತೀವ್ರವಾಗಿ ಖಂಡಿಸಿದೆ.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ದಿನೇಶ್ ಮೂಳೂರು, ವಿಪಕ್ಷ ನಾಯಕರ ಆತ್ಮವಿಶ್ವಾಸ ಕುಗ್ಗಿಸುವ ಉದ್ದೇಶದಿಂದ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಹಾಗೂ ಇತರ ವಿಪಕ್ಷ ನಾಯಕರ ವಿರುದ್ಧ ಈ ಹಿಂದೆ ನಡೆದಿರುವ ಹಲವು ED ದಾಳಿಗಳಿಂದ ಯಾವುದೇ ಆರೋಪಗಳು ಸಾಬೀತಾಗಿಲ್ಲ ಎಂದು ಅವರು ಹೇಳಿದರು.

ಸತೀಶ್ ಜಾರಕಿಹೊಳಿ ಅವರು ಕೇವಲ ರಾಜಕಾರಣಿಯಾಗಿರದೆ ಸಾಮಾಜಿಕ ಚಿಂತನೆ ಹೊಂದಿರುವ ನಾಯಕರು. ಶಿಕ್ಷಣ, ಉದ್ಯೋಗ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಯುವಕರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ, ತಂದೆ-ತಾಯಿ ಇಲ್ಲದ ಮಕ್ಕಳನ್ನು ದತ್ತು ಪಡೆದು ಶಿಕ್ಷಣ ನೀಡುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. UPSC, KPSC ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯುವಕರಿಗೆ ತರಬೇತಿ ಹಾಗೂ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದ್ದಾರೆ. ಇಂತಹ ಜನಪರ ಚಿಂತನೆಯ ನಾಯಕನ ಮೇಲೆ ED ದಾಳಿ ನಡೆಸಿರುವುದು ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟುಮಾಡುವ ಕ್ರಮ ಎಂದು ದಿನೇಶ್ ಮೂಳೂರು ಹೇಳಿದರು.

ನೆಹರೂ ಚಿಂತನಾ ವೇದಿಕೆಯ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ ಮಾತನಾಡಿ, 2021ರ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಸತೀಶ್ ಜಾರಕಿಹೊಳಿ ಅವರು ಅಂತಿಮ ಹಂತದವರೆಗೂ ಕಠಿಣ ಸ್ಪರ್ಧೆ ನೀಡಿದ್ದರು. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಅವರ ಪ್ರಭಾವ ಇತ್ತು ಎಂದು ಹೇಳಿದರು. ಶಿಗ್ಗಾವಿ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಯ ಗೆಲುವಿನಲ್ಲೂ ಜಾರಕಿಹೊಳಿ ಅವರ ರಾಜಕೀಯ ತಂತ್ರಗಾರಿಕೆ ಪ್ರಮುಖವಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಮಾಯಾವತಿ, ಲಾಲು ಪ್ರಸಾದ್ ಯಾದವ್ ಸೇರಿದಂತೆ ಹಲವು ವಿಪಕ್ಷ ನಾಯಕರ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿದ ನವೀನ್ ರೈ, ಮತ್ತೊಂದೆಡೆ ತನಿಖಾ ಸಂಸ್ಥೆಗಳ ಕ್ರಮಗಳ ನಡುವೆಯೇ ಕೆಲವು ವಿಪಕ್ಷ ನಾಯಕರು ಬಿಜೆಪಿಗೆ ಸೇರ್ಪಡೆಯಾದ ಬಳಿಕ ಪ್ರಮುಖ ಹುದ್ದೆಗಳನ್ನು ಅಲಂಕರಿಸಿರುವ ಉದಾಹರಣೆಗಳಿವೆ ಎಂದು ಹೇಳಿದರು. ಅಜಿತ್ ಪವಾರ್, ಅಶೋಕ್ ಚವಾಣ್, ಹಿಮಂತ ಬಿಸ್ವ ಶರ್ಮಾ ಹಾಗೂ ಸುವೇಂದು ಅಧಿಕಾರಿ ಅವರ ಹೆಸರುಗಳನ್ನು ಅವರು ಉಲ್ಲೇಖಿಸಿದರು. ಕರ್ನಾಟಕದಲ್ಲೂ ಇದೇ ರೀತಿಯ ರಾಜಕೀಯ ಬೆಳವಣಿಗೆಗಳಿಗೆ ಪ್ರಯತ್ನ ನಡೆದಿರುವುದಾಗಿ ಆರೋಪಿಸಿದ ಅವರು, ಸತೀಶ್ ಜಾರಕಿಹೊಳಿ ಅವರ ಮೇಲಿನ ED ದಾಳಿಯನ್ನು ಖಂಡಿಸುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನೆಹರೂ ಚಿಂತನಾ ವೇದಿಕೆಯ ಕಾರ್ಯದರ್ಶಿ ಅನ್ಸರುದ್ದಿನ್ ಸಾಲ್ಮರ, ಪ್ರಮುಖ ಸದಸ್ಯರಾದ ಕೆ.ಎಸ್. ಸತೀಶ್ ಕುಮಾರ್ ಹಾಗೂ ಜಯರಾಮ್ ಪೂಜಾರಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!