ಸ್ಕಾಲರ್‌ಶಿಪ್ ಮಾಸ್ಟರ್ ನಾರಾಯಣ್ ನಾಯಕ್‌ಗೆ 12ನೇ ಮೂಲತ್ವ ವಿಶ್ವ ಪ್ರಶಸ್ತಿ

ಮಂಗಳೂರು:ವಿದ್ಯಾರ್ಥಿಗಳಿಗೆ ನಿರಂತರವಾಗಿ ಶೈಕ್ಷಣಿಕ ನೆರವು ಹಾಗೂ ಸ್ಕಾಲರ್‌ಶಿಪ್‌ಗಳನ್ನು ದೊರಕಿಸಿಕೊಡುವ ಮೂಲಕ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ‘ಸ್ಕಾಲರ್‌ಶಿಪ್ ಮಾಸ್ಟರ್’ ಎಂದೇ ಖ್ಯಾತರಾದ ನಾರಾಯಣ್ ನಾಯಕ್ ಅವರನ್ನು 2026ನೇ ಸಾಲಿನ 12ನೇ ಮೂಲತ್ವ ವಿಶ್ವಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಪ್ರಕಾಶ್ ಮೂಲತ್ವ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.26ರಂದು ಬೆಳಗ್ಗೆ 10 ಗಂಟೆಗೆ ಬಲ್ಮಠದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಫಲಕದೊಂದಿಗೆ ₹1,00,001 ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ದೇವರಲ್ಲಿ ಮಾನವನನ್ನು, ಮಾನವರಲ್ಲಿ ದೇವರನ್ನು ಹಾಗೂ ಪರಸ್ಪರರಲ್ಲಿ ಮಾನವೀಯತೆಯನ್ನು ಕಾಣುವ ಆಶಯದೊಂದಿಗೆ ಮೂಲತ್ವ ಫೌಂಡೇಶನ್ ಕಳೆದ ಸುಮಾರು 20 ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದೆ. ಸಾಮೂಹಿಕ ಪ್ರಾರ್ಥನೆ, ಮಾನಸಿಕ ಆರೋಗ್ಯಕ್ಕೆ ಪೂರಕ ಕಾರ್ಯಕ್ರಮಗಳು, ಮಾಹಿತಿ ಶಿಬಿರಗಳು, ಸ್ವಚ್ಛತಾ ಅಭಿಯಾನ, ಉಚಿತ ವೈದ್ಯಕೀಯ ಶಿಬಿರ, ಬಡ ಮಕ್ಕಳಿಗೆ ಶೈಕ್ಷಣಿಕ ನೆರವು, ವೈದ್ಯಕೀಯ ಹಾಗೂ ವಿವಾಹ ನೆರವು ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದರು.

ಸಮಾಜದ ನೋವಿಗೆ ಸ್ಪಂದಿಸಿ ನಿಸ್ವಾರ್ಥ ಸೇವೆ ಸಲ್ಲಿಸುವ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಮೂಲತ್ವ ವಿಶ್ವಪ್ರಶಸ್ತಿಯನ್ನು ಆರಂಭಿಸಲಾಗಿದೆ. ಈ ಪ್ರಶಸ್ತಿಯನ್ನು ಅಕ್ಷರಸಂತ ಹರೇಕಳ ಹಾಜಬ್ಬ, ಪದ್ಮಶ್ರೀ ಸುಭಾಷಿನಿ ಮಿಸ್ತ್ರಿ, ಪದ್ಮಶ್ರೀ ಸಿಂಧುತಾಯಿ ಸಪ್ಕಾಲ್, ಆಟೋರಾಜ, ಪ್ರಕಾಶ್ ಆಯ್ಕೆ–ಮಂದಾಕಿಣಿ ಆಮೆ ದಂಪತಿ, ರವಿ ಕಟಪಾಡಿ, ಪದ್ಮಶ್ರೀ ಸುಕ್ರಿ ಬೊಮ್ಮಗೌಡ, ಪದ್ಮಶ್ರೀ ಸುನಿತಾ ಕೃಷ್ಣನ್, ಪದ್ಮಶ್ರೀ ಫುಲ್ಸನ್‌ಬಾಯಿ ಯಾದವ್, ಈಶ್ವರ್ ಮಲ್ಪೆ ಹಾಗೂ ನೆಲೆ ಫೌಂಡೇಶನ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಈ ಹಿಂದಿನ ವರ್ಷಗಳಲ್ಲಿ ನೀಡಲಾಗಿದೆ ಎಂದು ಅವರು ವಿವರಿಸಿದರು.

ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ಗಾಗಿ ನಿರಂತರ ಸೇವೆ

ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯ ಹಾಗೂ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಬಲ್ಮಠದ ಮಾಜಿ ಪ್ರಾಂಶುಪಾಲ ಡಾ. ಜಗದೀಶ್ ಬಾಳ ಮಾತನಾಡಿ, ನಾರಾಯಣ್ ನಾಯಕ್ ಅವರು ತಮ್ಮ ನಿವೃತ್ತಿ ವೇತನದ ದೊಡ್ಡ ಭಾಗವನ್ನು ಸಮಾಜ ಸೇವೆಗೆ ಮೀಸಲಿಟ್ಟು ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ದೊರಕಿಸಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕುಟುಂಬ ಹಾಗೂ ಆರ್ಥಿಕ ಹಿನ್ನೆಲೆಯನ್ನು ತಿಳಿದುಕೊಂಡು, ಸರ್ಕಾರಿ ಸ್ಕಾಲರ್‌ಶಿಪ್‌ಗೆ ಅರ್ಹರಲ್ಲದ ವಿದ್ಯಾರ್ಥಿಗಳಿಗೂ ಸಂಘ-ಸಂಸ್ಥೆಗಳ ಮೂಲಕ ನೆರವು ದೊರಕಿಸುವ ಪ್ರಯತ್ನ ಮಾಡುತ್ತಾರೆ. ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳನ್ನು ಗುರುತಿಸಿ, ಅಗತ್ಯವಿದ್ದರೆ ಅವರ ಮನೆಗಳಿಗೂ ತೆರಳಿ ಅರ್ಜಿ ಸಲ್ಲಿಸುವಂತೆ ಪ್ರೇರೇಪಿಸುತ್ತಾರೆ. ಅವರ ಈ ಸೇವೆಯಿಂದ ಅನೇಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ದೊರೆತಿದೆ ಎಂದರು.

2023ರಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಬಲ್ಮಠಕ್ಕೆ ಮೊದಲ ಪ್ರಯತ್ನದಲ್ಲೇ NAAC ‘A’ ಗ್ರೇಡ್ ದೊರಕುವಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಕಾಲರ್‌ಶಿಪ್‌ಗಳನ್ನು ದೊರಕಿಸಿಕೊಡುವ ಕಾರ್ಯವೂ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದರು.

ಆಯ್ಕೆ ಸಮಿತಿಯ ಸದಸ್ಯೆ ಆರ್.ಜೆ. ನಯನ ಶೆಟ್ಟಿ ಮಾತನಾಡಿ, ಸ್ಕಾಲರ್‌ಶಿಪ್‌ಗಳ ಮಾಹಿತಿ ಅಗತ್ಯವಿರುವ ವಿದ್ಯಾರ್ಥಿಗಳಿಗೆ ತಮ್ಮ ಸಂಪರ್ಕದ ಮೂಲಕ ವಿವರಗಳನ್ನು ಒದಗಿಸುವ ನಾರಾಯಣ್ ನಾಯಕ್ ಅವರ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವವರೆಗೆ ಅವರ ಬೆನ್ನುಹತ್ತಿ ಪ್ರಕ್ರಿಯೆ ಪೂರ್ಣಗೊಳಿಸುವ ಅವರ ಉತ್ಸಾಹ ಗಮನಾರ್ಹವಾಗಿದೆ. ಇಂತಹ ಸೇವೆ ಹೆಚ್ಚಿನ ಮಕ್ಕಳಿಗೆ ತಲುಪಬೇಕು ಎಂಬ ಉದ್ದೇಶದಿಂದ ಅವರಿಗೆ ಮೂಲತ್ವ ವಿಶ್ವಪ್ರಶಸ್ತಿ ನೀಡುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

ಗಣ್ಯರ ಮೆರುಗು

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್, ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಮನೋಜ್ ಕುಮಾರ್ ಎ., ಬಲ್ಮಠ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಗೋಪಾಲಕೃಷ್ಣ ಕೆ., ಪ್ರೊ. ಜಯಕರ ಭಂಡಾರಿ ಎಂ., ಡಾ. ಪಿ. ದಯಾನಂದ ಪೈ–ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರತಿನಿಧಿಗಳು, ಬಿಎಸ್‌ಎಫ್ ಕೆಮಿಕಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಆಶಿಮಾ ಸುಶೀಲ್ ಚಂದ್ರ, ಚಲನಚಿತ್ರ ನಿರ್ದೇಶಕ ಹಾಗೂ ನಟ ಜೆ.ಪಿ. ತುಮಿನಾಡು, ಶೈಕ್ಷಣಿಕ ಕಾರ್ಯತಂತ್ರ ನಿರೂಪಕ ಹಾಗೂ ಲೇಖಕ ಅಕ್ಷಯ್ ಕೆ. ಪಣಿಕರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ಕಲ್ಪನಾ ಕೋಟ್ಯಾನ್, ಶೈನಿ ಮೂಲತ್ವ, ಅಕ್ಷತ ಹಾಗೂ ಪ್ರೊ. ರಾಜ್ ಮೋಹನ್ ರಾವ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!