ಬೆಂಗಳೂರು: ಉತ್ತರ ಪ್ರದೇಶದ ಹಿರಿಯ ನಾಯಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹರೀಶ್ ದ್ವಿವೇದಿ ಅವರನ್ನು ಕರ್ನಾಟಕ ಬಿಜೆಪಿ ಉಸ್ತುವಾರಿಯಾಗಿ ನೇಮಿಸಲಾಗಿದೆ. ಜತೆಗೆ ಅವರಿಗೆ ಬಿಹಾರ ರಾಜ್ಯದ ಪ್ರಭಾರಿಯ ಜವಾಬ್ದಾರಿಯನ್ನೂ ವಹಿಸಲಾಗಿದೆ. ಆಂಧ್ರ ಪ್ರದೇಶದ ಕಸಮ್ ವೆಂಕಟೇಶ್ವರಲು ಅವರನ್ನು ಕರ್ನಾಟಕ ಬಿಜೆಪಿ ಸಹ-ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

ಕರ್ನಾಟಕ ಸೇರಿದಂತೆ ದೇಶದ 17 ರಾಜ್ಯಗಳ ಬಿಜೆಪಿ ಉಸ್ತುವಾರಿ ಹಾಗೂ ಸಹ-ಉಸ್ತುವಾರಿಗಳನ್ನು ನೇಮಕ ಮಾಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಬುಧವಾರ ಪಟ್ಟಿ ಪ್ರಕಟಿಸಿದ್ದಾರೆ. ದಕ್ಷಿಣ ಭಾರತದ ಪ್ರಮುಖ ರಾಜ್ಯವಾಗಿರುವ ಕರ್ನಾಟಕಕ್ಕೆ ರಾಷ್ಟ್ರೀಯ ನಾಯಕತ್ವವು ಹೊಸ ಮುಖಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದೆ.
ಈ ಹಿಂದೆ ಕರ್ನಾಟಕದ ಉಸ್ತುವಾರಿಯಾಗಿದ್ದ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರಿಗೆ ರಾಜಸ್ಥಾನದ ಜವಾಬ್ದಾರಿ ವಹಿಸಲಾಗಿದೆ. ಕರ್ನಾಟಕದ ಹಿರಿಯ ನಾಯಕ ನಿರ್ಮಲ್ ಕುಮಾರ್ ಸುರಾನಾ ಅವರನ್ನು ತಮಿಳುನಾಡಿನ ಸಹ-ಉಸ್ತುವಾರಿಯಾಗಿ ನೇಮಿಸಲಾಗಿದೆ.

ಕೇರಳ ರಾಜ್ಯದ ಉಸ್ತುವಾರಿಯಾಗಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಪ್ರೊ. ಮಾ. ನಾಗರಾಜ ಅವರನ್ನು ನೇಮಿಸಲಾಗಿದ್ದು, ಎಂ. ವೆಂಕಟೇಶನ್ ಅವರನ್ನು ಸಹ-ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.
ತೆಲಂಗಾಣದ ಮುಖ್ಯ ಉಸ್ತುವಾರಿಯಾಗಿ ಸುನಿಲ್ ಬನ್ಸಲ್, ಸಹ-ಉಸ್ತುವಾರಿಗಳಾಗಿ ಅಭಯ್ ಪಾಟೀಲ್ ಹಾಗೂ ರೇಖಾ ಶರ್ಮಾ ಅವರನ್ನು ನೇಮಿಸಲಾಗಿದೆ.
ನೂತನವಾಗಿ ನೇಮಕಗೊಂಡಿರುವ ಉಸ್ತುವಾರಿಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.


