ಶಾರ್ಜಾ ಹತ್ಯೆ: ಪ್ರಕಾಶ್ ಕುಂದರ್ ಮೃತದೇಹ ಭಾರತಕ್ಕೆ ತರಲು ಕ್ರಮ.ಪತ್ನಿ, ಮಗನ ಪತ್ತೆಗೂ ಪ್ರಯತ್ನ; ಪ್ರಕರಣದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಸಮಗ್ರ ತನಿಖೆಯಾಗಲಿ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಶಾರ್ಜಾದಲ್ಲಿ ಉಡುಪಿ ಮೂಲದ ಆಲ್ವಿನ್ ಪ್ರಕಾಶ್ ಕುಂದರ್ ಅವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೃತದೇಹವನ್ನು ಭಾರತಕ್ಕೆ ತರಲು ವಿದೇಶಾಂಗ ಇಲಾಖೆ ಹಾಗೂ ಶಾರ್ಜಾದ ರಾಯಭಾರಿ ಕಚೇರಿಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.


ಘಟನೆ ಗಮನಕ್ಕೆ ಬಂದ ತಕ್ಷಣ ವಿದೇಶಾಂಗ ಇಲಾಖೆಗೆ ಪತ್ರ ಬರೆದಿದ್ದು, ಶಾರ್ಜಾದ ರಾಯಭಾರಿ ಕಚೇರಿಯನ್ನೂ ಸಂಪರ್ಕಿಸಲಾಗಿದೆ. ವಿದೇಶಾಂಗ ಇಲಾಖೆ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ಪ್ರಕಾಶ್ ಕುಂದರ್ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ವ್ಯವಸ್ಥೆ ಮಾಡಲಾಗುತ್ತಿದೆ. ಇದೇ ವೇಳೆ ಅವರ ಪತ್ನಿ ಹಾಗೂ ಮಗನನ್ನು ಪತ್ತೆಹಚ್ಚುವ ಕಾರ್ಯವೂ ನಡೆಯಬೇಕಿದೆ ಎಂದು ತಿಳಿಸಿದರು.
ಆರೋಪಿತರ ಹೆಸರಿನಲ್ಲಿ ಪತ್ನಿ ಹಾಗೂ ಮಗನ ಹೆಸರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಅವರು ಅನಿವಾರ್ಯ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆಯೇ, ನಿರಪರಾಧಿಗಳಾಗಿದ್ದಾರೆಯೇ ಅಥವಾ ಪ್ರಕರಣದ ಸಂಚಿನಲ್ಲಿ ಅವರನ್ನು ಬಳಸಿಕೊಳ್ಳಲಾಗಿದೆಯೇ ಎಂಬುದನ್ನು ತನಿಖೆಯಿಂದ ತಿಳಿಯಬೇಕು. ಅವರು ಅಪಾಯದಲ್ಲಿದ್ದಾರೆಯೇ ಅಥವಾ ಕೃತ್ಯದ ಭಾಗವಾಗಿದ್ದಾರೆಯೇ ಎಂಬ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು. ಇದು ಅತ್ಯಂತ ಘೋರ ಕೃತ್ಯವಾಗಿದ್ದು, ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋಟ ಆಗ್ರಹಿಸಿದರು.


‘₹32 ಸಾವಿರ ಕೋಟಿ ಘೋಷಣೆಗೆ ಹಣ ಎಲ್ಲಿಂದ?’: ಕೋಟ ಪ್ರಶ್ನೆ
ಆರ್ಥಿಕ ಇಲಾಖೆ ಎಚ್ಚರಿಕೆ ಹಿನ್ನೆಲೆಯಲ್ಲಿ ಕರಾವಳಿ ಯೋಜನೆಗಳ ಅನುಷ್ಠಾನದ ಬಗ್ಗೆ ಸ್ಪಷ್ಟತೆ ನೀಡಲಿ
ಉಡುಪಿ: ಮಂಗಳೂರಿನಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ₹32 ಸಾವಿರ ಕೋಟಿ ಮೊತ್ತದ ಕರಾವಳಿ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಮಂಗಳೂರಿಗೆ ಬಂದ ಸಂದರ್ಭದಲ್ಲಿ ₹32 ಸಾವಿರ ಕೋಟಿ ಮೊತ್ತದ ಯೋಜನೆಗಳನ್ನು ಘೋಷಿಸಲಾಗಿದೆ. ಆದರೆ, ಆರ್ಥಿಕ ಇಲಾಖೆ ಹೊಸ ಘೋಷಣೆಗಳನ್ನು ಮಾಡದಂತೆ ಎಚ್ಚರಿಕೆ ನೀಡಿದ್ದು, ಈಗಾಗಲೇ ಘೋಷಿಸಿರುವ ಯೋಜನೆಗಳಿಗೆ ಹಣ ಒದಗಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಸಾಲ ಪಡೆಯುವ ಪರಿಸ್ಥಿತಿಯೂ ಇಲ್ಲ ಎಂಬ ಮಾತು ಕೇಳಿಬರುತ್ತಿದೆ. ಹೀಗಿರುವಾಗ ಮಂಗಳೂರಿನಲ್ಲಿ ಘೋಷಿಸಿರುವ ₹32 ಸಾವಿರ ಕೋಟಿಯನ್ನು ಬಜೆಟ್‌ನಲ್ಲಿ ಹೇಗೆ ಒದಗಿಸಲಾಗುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದರು.
ಯೋಜನೆಗಳು ಯಾವಾಗ ಅನುಷ್ಠಾನಗೊಳ್ಳುತ್ತವೆ, ಆರಂಭದಲ್ಲಿ ಎಷ್ಟು ಕೋಟಿ ಬಿಡುಗಡೆ ಮಾಡಲಾಗುತ್ತದೆ, ಬಜೆಟ್‌ಗೂ ಮುನ್ನವೇ ಹಣ ನೀಡಲಾಗುತ್ತದೆಯೇ, ಯಾವ ಶೀರ್ಷಿಕೆಯಲ್ಲಿ ಅನುದಾನ ಒದಗಿಸಲಾಗುತ್ತದೆ, ಟೆಂಡರ್ ಯಾವಾಗ ಕರೆಯಲಾಗುತ್ತದೆ ಹಾಗೂ ಕಾಮಗಾರಿ ಯಾವಾಗ ಆರಂಭವಾಗಲಿದೆ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಸರ್ಕಾರ ಮುಂದಿನ ಹೆಜ್ಜೆ ಏನು ಇಡುತ್ತದೆ ಎಂಬುದನ್ನು ನೋಡಿಕೊಂಡು ಪ್ರತಿಕ್ರಿಯಿಸುವುದಾಗಿ ಕೋಟ ಹೇಳಿದರು.


ಕಸ್ತೂರಿರಂಗನ್: ಭೂ ಸರ್ವೇಗೆ ಕೋಟ ಸ್ವಾಗತ
ಕೇರಳದ ಉಮ್ಮರ್ ಸಮಿತಿ ಮಾದರಿಯಲ್ಲಿ ಕರ್ನಾಟಕದಲ್ಲೂ ಸಮಿತಿ ರಚಿಸಲಿ
ಉಡುಪಿ: ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಭೂ ಸರ್ವೇ ನಡೆಸಲು ಮುಂದಾಗಿರುವುದು ಸರಿಯಾದ ಕ್ರಮ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ವಿಧಾನ ಮಂಡಲದಲ್ಲಿ ಭೂ ಸರ್ವೇ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ. ತಾವೂ ಈ ಹಿಂದೆ ಭೂ ಸರ್ವೇ ನಡೆಸುವಂತೆ ಮನವಿ ಮಾಡಿದ್ದೆ. ಒಂದು ವರ್ಷದ ಕಾಲಾವಕಾಶದಲ್ಲಿ ಸಮಿತಿ ರಚಿಸಿ ಈ ಕುರಿತು ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆ ನಡೆಯಲಿದೆ. ಕೇರಳದಲ್ಲಿ ಅನುಸರಿಸಿರುವ ಉಮ್ಮರ್ ಸಮಿತಿ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಸಮಿತಿ ರಚಿಸುವುದು ಸೂಕ್ತ ಎಂದು ಅವರು ಹೇಳಿದರು.


‘ವಂದೇ ಮಾತರಂ ಪೂರ್ಣ ಹಾಡದಿದ್ದರೆ ಬಿಜೆಪಿ ಪ್ರತಿರೋಧ’
ರಾಜ್ಯ ಸರ್ಕಾರದ ನಡೆ ಒಕ್ಕೂಟ ವ್ಯವಸ್ಥೆಗೆ ಗೌರವ ತರುವಂತದ್ದಲ್ಲ: ಕೋಟ
ಉಡುಪಿ: ವಂದೇ ಮಾತರಂ ಹಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ಚರ್ಚೆ ಅಪ್ರಸ್ತುತ ಎಂದು ಹೇಳಿರುವ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಪೂರ್ಣ ವಂದೇ ಮಾತರಂ ಹಾಡದಿದ್ದರೆ ಬಿಜೆಪಿ ತನ್ನ ಪ್ರತಿರೋಧ ಮುಂದುವರಿಸಲಿದೆ ಎಂದು ಹೇಳಿದರು.
ವಂದೇ ಮಾತರಂಗೆ ವಿರೋಧ ವ್ಯಕ್ತಪಡಿಸಿದ್ದವರು ಮಹಮ್ಮದ್ ಅಲಿ ಜಿನ್ನಾ. ಹಾಡಿನಲ್ಲಿ ದೇವಿಯ ಉಲ್ಲೇಖವಿದೆ, ಅದು ತಮ್ಮ ಧರ್ಮಕ್ಕೆ ಒಪ್ಪುವುದಿಲ್ಲ ಎಂಬ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಈ ವಿಚಾರ ಮುಂದಿಟ್ಟುಕೊಂಡೇ ದೇಶ ವಿಭಜನೆಯ ಸಂದರ್ಭದಲ್ಲಿಯೂ ವಿರೋಧ ವ್ಯಕ್ತವಾಗಿತ್ತು ಎಂದು ಕೋಟ ಹೇಳಿದರು.
ರಾಜ್ಯಪಾಲರು ನೀಡಿರುವ ನಿರ್ದೇಶನ ಸರಿಯಾಗಿದೆ. ವಂದೇ ಮಾತರಂ ಅನ್ನು ಅರ್ಧಕ್ಕೆ ಸೀಮಿತಗೊಳಿಸಿದರೆ ಬಿಜೆಪಿ ವಿರೋಧ ವ್ಯಕ್ತಪಡಿಸಲಿದೆ. ರಾಜ್ಯ ಸರ್ಕಾರದ ಕಾನೂನು ಅಥವಾ ನಿರ್ದೇಶನವನ್ನು ಗ್ರಾಮ ಪಂಚಾಯಿತಿ ವಿರೋಧಿಸಲು ಸಾಧ್ಯವಿಲ್ಲ. ಅದನ್ನು ನಿರಾಕರಿಸಿದರೆ ಬರ್ಕಾಸ್ತು ಮಾಡುವುದೊಂದೇ ಪರಿಹಾರ ಎಂಬ ನಿಲುವನ್ನು ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಕನ್ನಡ ವಿರೋಧಿ ನಿಲುವು ಹೊಂದಿದ್ದ ಮಹಾನಗರ ಪಾಲಿಕೆಯನ್ನು ಬರ್ಕಾಸ್ತು ಮಾಡಿರುವ ಉದಾಹರಣೆ ಇದೆ. ರಾಜ್ಯ ಸರ್ಕಾರದ ಪ್ರಸ್ತುತ ನಡೆ ಒಕ್ಕೂಟ ವ್ಯವಸ್ಥೆಗೆ ಗೌರವ ತರುವಂತದ್ದಲ್ಲ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಲ್ಲರನ್ನು ಒಟ್ಟಾಗಿ ಕರೆದೊಯ್ಯುವುದಾಗಿ ಹೇಳುತ್ತಾರೆ. ಆದರೆ, ಕಾಂಗ್ರೆಸ್‌ ಪಕ್ಷದೊಳಗಿನ ಕೆಲವರು ಹಿಂದೂ ಭಾವನೆಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ನೀಡುವ ಒತ್ತಡದಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಕೋಟ ಆರೋಪಿಸಿದರು.


ಕೆಪಿಎಸ್ಸಿ ಹಗರಣ: ‘ಹೈಕೋರ್ಟ್ ಸೂಚನೆಯಂತೆ ಎಸ್‌ಐಟಿ ರಚಿಸಿ’
ತಪ್ಪಿತಸ್ಥರು ಯಾರೇ ಇದ್ದರೂ ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಿ: ಕೋಟ
ಉಡುಪಿ: ಕೆಪಿಎಸ್ಸಿ ಹಗರಣದ ತನಿಖೆಗೆ ಸಂಬಂಧಿಸಿ ಹೈಕೋರ್ಟ್ ನೀಡಿರುವ ನಿರ್ದೇಶನವನ್ನು ರಾಜ್ಯ ಸರ್ಕಾರ ಅಂಗೀಕರಿಸಿ, ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.
ನ್ಯಾಯಾಲಯ ತನಿಖಾಧಿಕಾರಿಯನ್ನು ನೇಮಕ ಮಾಡಬಹುದೇ ಎಂಬ ಬಗ್ಗೆ ಮುಖ್ಯಮಂತ್ರಿ ಪ್ರಶ್ನಿಸುತ್ತಿದ್ದಾರೆ. ತನಿಖೆ ನಡೆಸುವ ಅಧಿಕಾರ ಸರ್ಕಾರಕ್ಕೆ ಇರಬೇಕು ಎಂಬುದು ಅವರ ವಾದ. ಆದರೆ ಸರ್ಕಾರ ತನಿಖೆಯಲ್ಲಿ ವಿಫಲವಾದಾಗ ನ್ಯಾಯಾಲಯ ತನಿಖಾಧಿಕಾರಿಯನ್ನು ನಿಯುಕ್ತಿಗೊಳಿಸುವ ಸಂದರ್ಭಗಳಿವೆ. ಹೀಗಾಗಿ ನ್ಯಾಯಾಲಯ ನೀಡಿರುವ ಸಲಹೆಯನ್ನು ಸರ್ಕಾರ ಅಂಗೀಕರಿಸಬೇಕು ಎಂದರು.
ಅಲೋಕ್ ಕುಮಾರ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ, ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ ಅವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ಕಾರಿ ಉದ್ಯೋಗ ವ್ಯವಸ್ಥೆ ಭ್ರಷ್ಟಾಚಾರ ಮತ್ತು ಲಂಚದ ಆರೋಪಗಳಿಂದ ಮುಕ್ತವಾಗಬೇಕು. ಚರ್ಚೆಗೆ ಸೀಮಿತವಾಗದೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಕೋಟ ಹೇಳಿದರು.
ಲೋಕಸೇವಾ ಆಯೋಗವನ್ನೇ ರದ್ದುಪಡಿಸುವುದು ಪರಿಹಾರವಲ್ಲ. ಅದಕ್ಕೆ ಬದಲಾಗಿ ಯಾವ ವ್ಯವಸ್ಥೆ ರೂಪಿಸಲಾಗುತ್ತದೆ ಎಂಬುದನ್ನೂ ಸರ್ಕಾರ ಸ್ಪಷ್ಟಪಡಿಸಬೇಕು. ನ್ಯಾಯಾಲಯ ನೀಡಿರುವ ಅವಕಾಶವನ್ನು ಬಳಸಿಕೊಂಡು ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಅವರು ಹೇಳಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!