ಬಂಟ್ವಾಳ ಅಬ್ದುಲ್ ರೆಹಮಾನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್​​ಗೆ ನೋಟಿಸ್

ದಕ್ಷಿಣ ಕನ್ನಡ ಬಂಟ್ವಾಳ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆರ್​ಎಸ್​ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್​ಗೆ ನೋಟಿಸ್ ನೀಡಲಾಗಿದೆ. ಪೊಲೀಸ್ ಇಲಾಖೆಯಿಂದ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. 2025 ಮೇ 25 ರಂದು ಬಂಟ್ವಾಳದಲ್ಲಿ ಅಬ್ದುಲ್ ರೆಹಮಾನ್ ಹತ್ಯೆಯಾಗಿದ್ದನು. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್​ ಭಟ್​ಗೆ ನೋಟಿಸ್​ ನೀಡಲಾಗಿದೆ. ಪೊಲೀಸ್ ಇಲಾಖೆಯ ಕ್ರಮದ ವಿರುದ್ಧ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಆಕ್ರೋಶ ಹೊರಹಾಕಿದೆ. ಇದರ ಹಿಂದೆ ವ್ಯವಸ್ಥಿತ ಸಂಚು ಎಂದು ಕಿಡಿಕಾರಿದೆ.


ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾಕೋಡಿ (ಕುರಿಯಾಲ ಗ್ರಾಮ) ಬಳಿ 2025ರ ಮೇ 25ರಂದು ಅಬ್ದುಲ್ ರೆಹಮಾನ್​ ಎಂಬವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪಿಕ್‌ಅಪ್ ಟ್ರಕ್‌ನಿಂದ ಮರಳು ಇಳಿಸುತ್ತಿದ್ದ ವೇಳೆ ಅಬ್ದುಲ್ ರೆಹಮಾನ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಮೃತ ಅಬ್ದುಲ್​ ಜೊತೆ ಕಲಂದರ್ ಶಫಿ ಮೇಲೆ ಗಂಭೀರ ಹಲ್ಲೆ ನಡೆಸಲಾಗಿತ್ತು.
ಈ ಕೊಲೆ ಪ್ರಕರಣ ರಾಜ್ಯಾದ್ಯಂತ ದೊಡ್ಡ ಸಂಚಲನ ಸೃಷ್ಟಿಸಿತ್ತು. ಸುಹಾಸ್ ಶೆಟ್ಟಿ ಹತ್ಯೆಯಾದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದ್ದರಿಂದ, ಇದು ಪ್ರತಿಕಾರದ ಕೊಲೆ ಎಂಬ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ದಕ್ಷಿಣ ಕನ್ನಡದ ಜಿಲ್ಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.


ಮುಸ್ಲಿಂ ಯುವಕನ ಮರ್ಡರ್ ಕೇಸ್​ಗೆ ಸಂಬಂಧಪಟ್ಟಂತೆ ಕಲ್ಲಡ್ಕ ಪ್ರಭಾಕರ್​ ಭಟ್​ ಅವರಿಗೆ ನೋಟಿಸ್​ ನೀಡಿದ್ದಕ್ಕೆ ವಿಹೆಚ್​ಪಿ ಮುಖಂಡ ಶರಣ್ ಪಂಪ್ ವೆಲ್ ಕೆರಳಿ ಕೆಂಡವಾಗಿದ್ದಾರೆ. ಈ ಬಗ್ಗೆ ಮಂಗಳೂರಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಅಬ್ದುಲ್ ರೆಹಮಾನ್ ಹತ್ಯೆಗೂ ಕಲ್ಲಡ್ಕ ಪ್ರಭಾಕರ್ ಭಟ್ ಗೆ ಏನು ಸಂಬಂಧ? ಕಾಂಗ್ರೆಸ್ ರಾಜಕೀಯ ಪ್ರೇರಿತವಾಗಿ ಹಿಂದೂ ಸಂಘಟನೆಯನ್ನ ಟಾರ್ಗೆಟ್ ಮಾಡುತ್ತಿದೆ. ಯಾರನ್ನೋ ಮೆಚ್ಚಿಸಲು ಹಿಂದೂ ಸಂಘಟನೆಯನ್ನ ಟಾರ್ಗೆಟ್ ಮಾಡಿದೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮ ಅನುಭವಿಸುತ್ತಾರೆ. ನಮ್ಮ ಸಂಘಟನೆ ರಾಷ್ಟ್ರಕ್ಕೋಸ್ಕರ ಕೆಲಸ ಮಾಡುವ ಸಂಘಟನೆ. ನಮ್ಮನ್ನ ಮುಗಿಸುವ ಹುನ್ನಾರ ಮಾಡಿದ್ರೆ ಹಿಂದೂ ಬಾಂಧವರು ಉತ್ತರಿಸುತ್ತಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಎಸ್​ಪಿಯವರು ಈ ಕೇಸ್​ನಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ರನ್ನ ಸಿಲುಕಿಸಿದ್ರೆ, ಹಿಂದೂ ಸಂಘಟನೆಗಳು ರಸ್ತೆಗೆ ಇಳಿಯುತ್ತದೆ. ನಿಮ್ಮ ಎಸ್​ಪಿ ಕಚೇರಿ ಚಲೋ ಎಂಬ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ. ಅವರಿಗೂ ಈ ಪ್ರಕರಣಕ್ಕೂ ಏನು ಸಂಬಂಧವಿಲ್ಲ, ನ್ಯಾಯಾಲಯ ಕೋಕಾ ಕೇಸ್​ನಲ್ಲಿ ಜಾಮೀನು ಕೊಟ್ಟಿದೆ. ಆದರೂ ಪೊಲೀಸ್ ಇಲಾಖೆ ಗೂಂಡಾ ಕಾಯ್ದೆ ಹಾಕುತ್ತಾರೆ. ಇವರಿಗೆ ಒತ್ತಡ ಹಾಕುತ್ತಿರುವವರು ಯಾರು? ಕರಾವಳಿಯ ಹಿಂದೂ ಸಂಘಟನೆಯ ಕಾರ್ಯಕರ್ತರು ರಸ್ತೆಗೆ ಇಳಿಯುತ್ತೇವೆ. ಕೊಲೆಯಾಗಿ ಒಂದು ವರ್ಷ ಕಳೆದಿದೆ, ಎರಡೆರಡು ಚಾರ್ಜ್ ಶೀಟ್ ಆಗಿದೆ. ಕಲ್ಲಡ್ಕ ಪ್ರಭಾಕರ್ ಭಟ್ ಹಾಗು ಈ ಕೊಲೆಗೆ ಏನು ಸಂಬಂಧ ಇದೆ. ಈ ಹಿಂದೆ ಇದೆ ರೀತಿ ವಿಚಾರಣೆ ಎಂದು ಹೇಳಿ 9 ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಇದು ನೂರಕ್ಕೆ ನೂರು ಹಿಂದೂ ಸಂಘಟನೆಗಳನ್ನ ಟಾರ್ಗೆಟ್ ಮಾಡುವ ಹುನ್ನಾರ ಎಂದು ಶರಣ್ ಪಂಪ್ ವೆಲ್ ಆರೋಪಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!