ನಗೋಯಾ: ಏಷ್ಯನ್ ಕ್ರೀಡಾಕೂಟದ ಮಹಿಳಾ ಕಬಡ್ಡಿ ವಿಭಾಗದಲ್ಲಿ ಭಾರತ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ರೋಚಕ ಫೈನಲ್ ಪಂದ್ಯದಲ್ಲಿ ಇರಾನ್ ತಂಡವನ್ನು 37-34 ಅಂಕಗಳ ಅಂತರದಿಂದ ಮಣಿಸಿದ ಭಾರತೀಯ ಮಹಿಳಾ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಆರಂಭದಿಂದಲೇ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಕಂಡುಬಂದಿತು. ಅಂತಿಮ ಹಂತದಲ್ಲಿ ಇರಾನ್ ತಿರುಗೇಟು ನೀಡಲು ಪ್ರಯತ್ನಿಸಿದರೂ, ಭಾರತದ ರಕ್ಷಣಾ ವಿಭಾಗ ಪರಿಣಾಮಕಾರಿ ಟ್ಯಾಕಲ್‌ಗಳ ಮೂಲಕ ಎದುರಾಳಿಯ ಮುನ್ನಡೆಯನ್ನು ತಡೆದು ಗೆಲುವು ಖಚಿತಪಡಿಸಿತು. ಪಂದ್ಯದಲ್ಲಿ ಸಂಜು ದೇವಿ ಸೇರಿದಂತೆ ಭಾರತದ ಆಟಗಾರ್ತಿಯರು ಗಮನಾರ್ಹ ಪ್ರದರ್ಶನ ನೀಡಿದರು.

ಭಾರತದ ಚಿನ್ನದ ಪದಕ ಗೆದ್ದ ತಂಡದಲ್ಲಿ ಪೂಜಾ, ರಾಜ್ ರಾಣಿ, ಸೋನಾಲಿ ವಿಷ್ಣು ಶಿಂಗೇಟ್, ಪುಷ್ಪಾ, ಭಾವನಾ ದೇವಿ, ರಿತು, ಸಂಜು ದೇವಿ, ರಿತು ನೇಗಿ, ಮನೀಷಾ ಕುಮಾರಿ, ಪಿಂಕಿ ರಾಯ್, ಜ್ಯೋತಿ ಹಾಗೂ ನಿಖಿತಾ ಇದ್ದಾರೆ.

ಮಹಿಳಾ ಕಬಡ್ಡಿ ಏಷ್ಯನ್ ಕ್ರೀಡಾಕೂಟಕ್ಕೆ 2010ರಲ್ಲಿ ಸೇರ್ಪಡೆಯಾದ ಬಳಿಕ ಭಾರತ ತಂಡಕ್ಕೆ ಇದು ನಾಲ್ಕನೇ ಚಿನ್ನದ ಪದಕವಾಗಿದೆ. ಈ ಅವಧಿಯಲ್ಲಿ ನಡೆದ ಐದು ಫೈನಲ್‌ಗಳಲ್ಲಿ 2018ರಲ್ಲಿ ಇರಾನ್ ವಿರುದ್ಧ ಭಾರತ ಸೋತಿತ್ತು.

ಇದಕ್ಕೂ ಮುನ್ನ ಮಹಿಳಾ ಕ್ರಿಕೆಟ್ ಹಾಗೂ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲೂ ಭಾರತ ಚಿನ್ನ ಗೆದ್ದಿತ್ತು. ಮಹಿಳಾ ಕ್ರಿಕೆಟ್‌ನಲ್ಲಿ ಶ್ರೀಲಂಕಾವನ್ನು ಮಣಿಸಿದ ಭಾರತ ಪ್ರಶಸ್ತಿ ಪಡೆದರೆ, ಶೂಟಿಂಗ್‌ನಲ್ಲಿ ಕಮಲ್‌ಜೀತ್ ಮತ್ತು ಸುರುಚಿ ಸಿಂಗ್ ಜೋಡಿ ಚಿನ್ನದ ಪದಕ ಗೆದ್ದಿತ್ತು.
ಇದೇ ವೇಳೆ ಪುರುಷರ ಕಬಡ್ಡಿಯಲ್ಲೂ ಭಾರತ ಫೈನಲ್‌ಗೆ ಪ್ರವೇಶಿಸಿದ್ದು, ಪ್ರಶಸ್ತಿ ಪಂದ್ಯದಲ್ಲಿ ಇರಾನ್ ತಂಡವನ್ನು ಎದುರಿಸಲಿದೆ.
ಮಹಿಳಾ ಕಬಡ್ಡಿಯ ಚಿನ್ನದೊಂದಿಗೆ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಭಾರತ 3 ಚಿನ್ನ, 11 ಬೆಳ್ಳಿ ಹಾಗೂ 13 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ.

