ಮಂಗಳೂರು, ಅ.1:ಒಂದೆಡೆ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದ ಭಾರೀ ಸ್ಫೋಟ… ಮತ್ತೊಂದೆಡೆ ವರ್ಷಗಳ ಹಿಂದಿನ ದೈವದ ನುಡಿ. ಈ ಎರಡೂ ಘಟನೆಗಳನ್ನು ಇದೀಗ ಕರಾವಳಿಯ ಜನರು ಪರಸ್ಪರ ಹೋಲಿಕೆ ಮಾಡುತ್ತಿದ್ದಾರೆ.
ಮಂಗಳೂರಿನ MRPL ಘಟಕದಲ್ಲಿ ಸಂಭವಿಸಿದ ಸ್ಫೋಟ ಹಾಗೂ ಅಗ್ನಿ ಅವಘಡದ ಬೆನ್ನಲ್ಲೇ ಬಜಪೆ ಸಮೀಪದ ನೆಲ್ಲಿದಡಿ ಗುತ್ತಿನ ‘ಕಾಂತೇರಿ ಜುಮಾದಿ’ ದೈವದ ನುಡಿ ಮತ್ತೆ ಚರ್ಚೆಯ ಕೇಂದ್ರವಾಗಿದೆ.

ಸುಮಾರು 800 ವರ್ಷಗಳ ಇತಿಹಾಸ ಹೊಂದಿದೆ ಎನ್ನಲಾಗುವ ನೆಲ್ಲಿದಡಿ ಗುತ್ತು, ದೈವಾರಾಧನೆ ಮತ್ತು ಕಾರ್ಣಿಕಕ್ಕೆ ಪ್ರಸಿದ್ಧವಾದ ಕ್ಷೇತ್ರ. MSEZ ಕೈಗಾರಿಕಾ ಪ್ರದೇಶಕ್ಕಾಗಿ ಭೂಸ್ವಾಧೀನ ನಡೆದಾಗ ಈ ಪ್ರದೇಶವೂ ವಿವಾದಕ್ಕೆ ಸಿಲುಕಿತ್ತು. ಸುತ್ತಮುತ್ತಲಿನ ಹಲವು ಭೂಮಿಗಳು ಕೈಗಾರಿಕಾ ಯೋಜನೆಗೆ ಒಳಪಟ್ಟರೂ, ನೆಲ್ಲಿದಡಿ ಗುತ್ತಿನ ದೈವಸ್ಥಾನದ ಜಾಗದ ವಿಚಾರ ಮಾತ್ರ ಹಲವು ವರ್ಷಗಳಿಂದ ಬಗೆಹರಿಯದ ವಿಷಯವಾಗಿ ಉಳಿದಿದೆ ಎಂದು ಸ್ಥಳೀಯರು ಹೇಳುತ್ತಾರೆ.

‘ಈ ಮಣ್ಣನ್ನು ಬಿಡುವುದಿಲ್ಲ’ ಎಂಬ ನುಡಿ
ಭೂಸ್ವಾಧೀನದ ಸಂದರ್ಭದಲ್ಲಿ ದೈವಸ್ಥಾನದ ಜಾಗಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾದಾಗ, ‘ಕಾಂತೇರಿ ಜುಮಾದಿ’ ದೈವವು ತನ್ನ ಸ್ಥಾನಕ್ಕೆ ಧಕ್ಕೆಯಾದರೆ ಪರಿಣಾಮ ಎದುರಾಗಲಿದೆ ಎಂದು ನುಡಿ ನೀಡಿತ್ತು ಎಂಬುದು ಸ್ಥಳೀಯರ ನಂಬಿಕೆ.
ಇತ್ತೀಚಿನ ವರ್ಷಗಳಲ್ಲಿ ದೈವಸ್ಥಾನಕ್ಕೆ ಪೂಜೆ ಸಲ್ಲಿಸಲು ನಿರ್ಬಂಧ ಎದುರಾದ ಸಂದರ್ಭದಲ್ಲೂ ದೈವದ ನುಡಿ ಮತ್ತೊಮ್ಮೆ ಕೇಳಿಬಂದಿತ್ತು ಎನ್ನಲಾಗಿದೆ.
“ನನ್ನ ಸ್ಥಾನವನ್ನು ಕೆಡವಲು ಬಂದವರಿಗೆ ಒಂದು ವರ್ಷದೊಳಗೆ ತೀರ್ಮಾನ ನೀಡುತ್ತೇನೆ. ಜಾಗವನ್ನು ದೈವಸ್ಥಾನದ ಹೆಸರಿಗೆ ನೀಡದಿದ್ದರೆ ಬೆಂಕಿ ಸುರಿಸುತ್ತೇನೆ” ಎಂಬ ನುಡಿಯನ್ನು ದೈವ ನೀಡಿತ್ತು ಎಂದು ದೈವಾರಾಧಕರು ಹಾಗೂ ಸ್ಥಳೀಯರು ಹೇಳುತ್ತಿದ್ದಾರೆ.

ನುಡಿ ಬಳಿಕ… ಈಗ MRPLನಲ್ಲಿ ಸ್ಫೋಟ!
ಆ ನುಡಿಯ ಬಳಿಕ ಇದೀಗ MRPL ಘಟಕದಲ್ಲಿ ಭಾರೀ ಸ್ಫೋಟ ಸಂಭವಿಸಿರುವುದು ಸ್ಥಳೀಯರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಘಟನೆಯ ಹಿನ್ನೆಲೆಯಲ್ಲಿ ನೆಲ್ಲಿದಡಿ ಗುತ್ತಿನ ದೈವದ ನುಡಿಯನ್ನು ನೆನಪಿಸಿಕೊಳ್ಳುತ್ತಿರುವ ಕೆಲವರು, “ಇದು ಕೇವಲ ಕಾಕತಾಳೀಯವೇ? ಅಥವಾ ದೈವದ ನುಡಿಗೂ ಘಟನೆಗೂ ಏನಾದರೂ ಸಂಬಂಧವಿದೆಯೇ?” ಎಂಬ ಚರ್ಚೆ ನಡೆಸುತ್ತಿದ್ದಾರೆ.
ಇದಕ್ಕೂ ಮೊದಲು 2021ರಲ್ಲಿ MSEZ ವ್ಯಾಪ್ತಿಯಲ್ಲಿದ್ದ ಕ್ಯಾಟಸಿಂಥ್ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿತ್ತು. ಇದೀಗ ಮತ್ತೊಂದು ದೊಡ್ಡ ಅಗ್ನಿ ಅವಘಡ ಸಂಭವಿಸಿರುವುದರಿಂದ ಹಳೆಯ ಘಟನೆಗಳೂ ಮತ್ತೆ ನೆನಪಾಗುತ್ತಿವೆ.
ಆದರೆ MRPL ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ. ದೈವದ ನಂಬಿಕೆ ಹಾಗೂ ಸ್ಥಳೀಯರ ವ್ಯಾಖ್ಯಾನಗಳು ಈ ಘಟನೆಗೆ ಸಂಬಂಧಿಸಿದ ಪ್ರತ್ಯೇಕ ಚರ್ಚೆಯಾಗಿ ಉಳಿದಿವೆ.

ದೈವಸ್ಥಾನದ ಜಾಗ ಮರಳಿ ನೀಡುವಂತೆ ಒತ್ತಾಯ
ಇದೀಗ ನೆಲ್ಲಿದಡಿ ಗುತ್ತಿನ ದೈವಸ್ಥಾನದ ಜಾಗವನ್ನು ದೈವಸ್ಥಾನದ ಹೆಸರಿಗೆ ಮರಳಿಸಬೇಕು ಎಂಬ ಬೇಡಿಕೆ ಮತ್ತೊಮ್ಮೆ ಬಲಗೊಂಡಿದೆ.
“ದೈವದ ಸ್ಥಾನಕ್ಕೆ ಧಕ್ಕೆ ತರಬಾರದು. ಶತಮಾನಗಳ ಇತಿಹಾಸ ಹೊಂದಿರುವ ಕ್ಷೇತ್ರದ ಪರಂಪರೆಯನ್ನು ಉಳಿಸಬೇಕು” ಎಂಬುದು ಸ್ಥಳೀಯರು ಹಾಗೂ ದೈವಾರಾಧಕರ ಒತ್ತಾಯವಾಗಿದೆ.
MRPL ಸ್ಫೋಟದ ತನಿಖೆ ಒಂದು ಕಡೆ ನಡೆಯುತ್ತಿರುವಾಗ, ಮತ್ತೊಂದೆಡೆ ನೆಲ್ಲಿದಡಿ ಗುತ್ತಿನ ‘ಕಾಂತೇರಿ ಜುಮಾದಿ’ ದೈವದ ಹಳೆಯ ನುಡಿ ಕರಾವಳಿಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.


