ಕೊಳ್ನಾಡು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವಿಟ್ಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಂಟ್ವಾಳ, ಕೊಳ್ನಾಡು ಗ್ರಾಮ ಪಂಚಾಯತ್, ಗ್ರಾಮೀಣ ಆರೋಗ್ಯ ಸೇವೆ ಮತ್ತು ಅಭಿವೃದ್ಧಿ ಕೇಂದ್ರ–ಯೆನೆಪೋಯ ಮೆಡಿಕಲ್ ಕಾಲೇಜು (ಡೀಮ್ಡ್ ಟು ಯೂನಿವರ್ಸಿಟಿ), ದೇರಳಕಟ್ಟೆ ಹಾಗೂ ಗ್ರಾಮ ಸ್ವರಾಜ್ ಪ್ರತಿಷ್ಠಾನ (ರಿ.), ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ “ಪೋಷಣ್ ಮಾಸಾಚರಣೆ” ಹಾಗೂ “ಪೌಷ್ಟಿಕ ಆಹಾರ ಸಪ್ತಾಹ” ಕಾರ್ಯಕ್ರಮವು ಕೊಳ್ನಾಡು ಗ್ರಾಮ ಪಂಚಾಯತ್ನ ಸೌಹಾರ್ದ ಭವನ, ಸಾಲೆತ್ತೂರಿನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗ್ರಾಮ ಸ್ವರಾಜ್ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು, ಅಂಗನವಾಡಿ ಕೇಂದ್ರಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿಯರು, ಬಾಣಂತಿಯರು ಮತ್ತು ಶಿಶುಗಳ ಪಾಲಿಗೆ ಎರಡನೇ ತಾಯಿ ಮನೆಯಿದ್ದಂತೆ ಕಾರ್ಯನಿರ್ವಹಿಸುತ್ತಿದ್ದಾರೆ.

ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ಸಂಬಂಧಿಸಿದ ಹಲವು ಯೋಜನೆಗಳು ಹಾಗೂ ಸೌಲಭ್ಯಗಳನ್ನು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಅರ್ಹ ಫಲಾನುಭವಿಗಳಿಗೆ ತಲುಪಿಸಲಾಗುತ್ತಿದೆ ಎಂದರು.
ಮನೆಯ ಅಡುಗೆಮನೆಯಿಂದಲೇ ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಮುನ್ನುಡಿ ಬರೆಯಬಹುದು. ತಾಯಂದಿರು ಆಹಾರದ ಗುಣಮಟ್ಟ, ಪೌಷ್ಟಿಕತೆ ಮತ್ತು ಮಕ್ಕಳ ಆಹಾರ ಪದ್ಧತಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದರೆ ಮಕ್ಕಳನ್ನು ಅಪೌಷ್ಟಿಕತೆಯಿಂದ ರಕ್ಷಿಸಬಹುದು. ಸಮತೋಲಿತ ಹಾಗೂ ಪೌಷ್ಟಿಕ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವ ಮೂಲಕ ಆರೋಗ್ಯವಂತ ಕುಟುಂಬ ಮತ್ತು ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಅವರು ಹೇಳಿದರು.

ಅದೇ ಸಂದರ್ಭದಲ್ಲಿ ಗ್ರಾಮ ಸ್ವರಾಜ್ ಪ್ರತಿಷ್ಠಾನವು ಆರೋಗ್ಯ ಮತ್ತು ಸಮಾಜಮುಖಿ ಸೇವೆಗಳಿಗೆ ಸದಾ ಆದ್ಯತೆ ನೀಡುತ್ತಿದ್ದು, ಈಗಾಗಲೇ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳೊಂದಿಗೆ ಸಹಯೋಗದಲ್ಲಿ ಮಂಗಳೂರು, ಮೂಡಬಿದಿರೆ ಹಾಗೂ ಸಾಲೆತ್ತೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ, ಕನ್ನಡಕ ವಿತರಣೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳಿಗೆ ಸಹಕಾರ ನೀಡಿದೆ. ಮುಂದೆಯೂ ಇಂತಹ ಜನಪರ ಹಾಗೂ ಆರೋಗ್ಯಪರ ಕಾರ್ಯಕ್ರಮಗಳಿಗೆ ಗ್ರಾಮ ಸ್ವರಾಜ್ ಪ್ರತಿಷ್ಠಾನದ ವತಿಯಿಂದ ಅಗತ್ಯ ಸಹಕಾರ ಮತ್ತು ಬೆಂಬಲ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.
ಮಹಿಳೆಯರು, ಮಕ್ಕಳು ಹಾಗೂ ಗ್ರಾಮೀಣ ಜನರ ಆರೋಗ್ಯ ಮತ್ತು ಪೌಷ್ಟಿಕತೆಯ ಕುರಿತು ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ಸಮಾಜದ ಆರೋಗ್ಯಕರ ಭವಿಷ್ಯಕ್ಕೆ ಅತ್ಯಂತ ಅಗತ್ಯವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಶ್ರೀದರ್,ಯನೇಪೊಯ ಮೆಡಿಕಲ್ ಕಾಲೇಜಿನ ಡಾ.ಅಜಿತ್ ,ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಕೃಷ್ಣಮೂರ್ತಿ,ಗ್ರಾಮ ಪಂಚಾಯತ್ ನಿಕಟಪೂರ್ವ ಅದ್ಯಕ್ಷರಾದ ಅಶ್ರಪ್ ಸಾಲೆತ್ತೂರು,CDPO ಶ್ರೀಮತಿ ಶಾರದ,ಕೊಳ್ನಾಡು ಮೇಲ್ವಿಚಾರಕಿ ಶ್ರೀಮತಿ ಸುಮನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


