ಬಂಟ್ವಾಳ: ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ತಹಶೀಲ್ದಾರ್ ಮಂಜುನಾಥ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪುನಿತ್ ಕೆರೆಹಳ್ಳಿ ಅವರ ನ್ಯಾಯಸಮ್ಮತ ಬೇಡಿಕೆಗಳನ್ನು ಪರಿಶೀಲಿಸಿ, ಅವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹದ ಹಿನ್ನೆಲೆಯಲ್ಲಿ ತುರ್ತು ಮಧ್ಯಪ್ರವೇಶ ಮಾಡಬೇಕು. ಬಂಟ್ವಾಳದ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣದಲ್ಲಿ ಕಾನೂನಿನ ದುರುಪಯೋಗವಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಭರತ್ ಕುಮ್ಢೆಲು ಅವರ ವಿರುದ್ಧ ದಾಖಲಿಸಲಾಗಿರುವ ಗೂಂಡಾ ಕಾಯ್ದೆ ಪ್ರಕರಣವನ್ನು ರದ್ದುಪಡಿಸಬೇಕು. ವಯೋವೃದ್ಧ ಆರ್ಎಸ್ಎಸ್ ಪ್ರಮುಖ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರಿಗೆ ನೋಟಿಸ್ ನೀಡಿ ವಿಚಾರಣೆಯ ನೆಪದಲ್ಲಿ ತೊಂದರೆ ನೀಡುವ ಕ್ರಮ ಕೈಬಿಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ನೋಟಿಸ್ ನೀಡಿರುವುದು ಇತ್ತೀಚೆಗೆ ವರದಿಯಾಗಿತ್ತು. ಪ್ರಕರಣದ ಕೆಲವು ಸತ್ಯಾಂಶ ಹಾಗೂ ಸನ್ನಿವೇಶಗಳನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸ್ ಮೂಲದ ವರದಿಗಳಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಸಂಸ್ಕಾರ ಭಾರತಿ ಜಿಲ್ಲಾ ಗೌರವಾಧ್ಯಕ್ಷ ಅಶೋಕ್ ಶೆಟ್ಟಿ ಸರಪಾಡಿ ಮಾತನಾಡಿ, ಮನವಿಯಲ್ಲಿ ಉಲ್ಲೇಖಿಸಿರುವ ಬೇಡಿಕೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರ ಸೂಕ್ತವಾಗಿ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಶ್ರೀ ಶ್ರೀ ಶ್ರೀ ಶಿವಾನಂದ ಸರಸ್ವತಿ ಮುಳಿಯ, ಯಂ. ಸೋಮಪ್ಪ ಬಂಗೇರ ಬಿ.ಸಿ.ರೋಡು, ಶೇಖರ ಕೊಟ್ಟಾರಿ ಅಮ್ಟೂರು, ಪ್ರಣಾವ್ ಮಲ್ಯ, ಸದಾಶಿವ ಗೋಳ್ತಮಜಲು, ಪ್ರೀತನ್ ಗೋಳ್ತಮಜಲು, ಅಭಿಷೇಕ್ ಗೋಳ್ತಮಜಲು, ಶ್ರೀವತ್ಸ ಗೋಳ್ತಮಜಲು, ಮನೋಜ್ ಗೋಳ್ತಮಜಲು, ರಾಧಾಕೃಷ್ಣ, ವಿಜಿತ್, ರಂಜಿತ್, ಶಿವಶಂಕರ್, ರಾಧಾಕೃಷ್ಣ ಅಡ್ಯಂತಾಯ, ಗುರುರಾಜ್ ಬಂಟ್ವಾಳ, ಸೋಮನಾಥ ಬಂಟ್ವಾಳ, ಕೆ. ರಾಜರಾಮ್ ಐತಾಳ್ ಮತ್ತಿತರರು ಉಪಸ್ಥಿತರಿದ್ದರು.

