ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ಕುರಿತು ಸರ್ಕಾರ ಸ್ಪಷ್ಟನೆ ನೀಡಲಿ: ವಿವೇಕಾನಂದ ಸಾಲಿನ್ಸ್

ಮಂಗಳೂರು: ಸರ್ಕಾರಿ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (ಪಿಎಚ್‌ಸಿ) ಖಾಸಗಿ ವೈದ್ಯಕೀಯ ಕಾಲೇಜುಗಳ ನಿರ್ವಹಣೆಗೆ ನೀಡುವ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಆಗ್ರಹಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣದ ಕುರಿತು ಸರ್ಕಾರ ಖಾಸಗಿ ವೈದ್ಯಕೀಯ ಕಾಲೇಜುಗಳೊಂದಿಗೆ ಒಪ್ಪಂದ (ಎಂಒಯು) ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆಯಾದರೂ, ಅದರ ವಿವರಗಳನ್ನು ಸಾರ್ವಜನಿಕ ವಲಯದಲ್ಲಿ ಪ್ರಕಟಿಸಿಲ್ಲ. ಯಾವ ಆಸ್ಪತ್ರೆಗಳು ಹಸ್ತಾಂತರವಾಗಲಿವೆ, ಬಡವರಿಗೆ ಸಿಗುವ ಸೇವೆಗಳೇನು ಹಾಗೂ ಸರ್ಕಾರದ ಷರತ್ತುಗಳೇನು ಎಂಬ ಬಗ್ಗೆ ಪಾರದರ್ಶಕ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಸ್ವಚ್ಛತೆ ಮತ್ತು ಮೂಲಸೌಕರ್ಯದ ಸಮಸ್ಯೆಗಳು ಮುಂದುವರಿದಿದ್ದು, ಅವುಗಳನ್ನು ಸುಧಾರಿಸುವ ಬದಲು ಖಾಸಗೀಕರಣಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಅವರು ಹೇಳಿದರು. ಆರೋಗ್ಯ ಇಲಾಖೆಯಲ್ಲಿ ಶಾಶ್ವತ ವೈದ್ಯರ ನೇಮಕಾತಿ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಹಾಗೂ ಸಾರ್ವಜನಿಕ ಆರೋಗ್ಯ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ತೀರಾ ಹದಗೆಟ್ಟಿದ್ದು, ಸ್ವಚ್ಛತೆ, ಮೂಲಸೌಕರ್ಯ, ತಜ್ಞ ವೈದ್ಯರ ಕೊರತೆ ಮತ್ತು ಅಗತ್ಯ ವೈದ್ಯಕೀಯ ಸೌಲಭ್ಯಗಳ ಅಭಾವದಿಂದ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡುವುದೇ ಕಡಿಮೆಯಾಗಿದೆ ಎಂದು ಆರೋಪಿಸಲಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಬದಲು ಖಾಸಗೀಕರಣದತ್ತ ಸರ್ಕಾರ ಸಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು .

ಅಪಘಾತಕ್ಕೊಳಗಾದ ಬಿಪಿಎಲ್ ಕುಟುಂಬಗಳಿಗೆ ಆಯುಷ್ಮಾನ್ ಭಾರತ ಯೋಜನೆಯಡಿ ₹5 ಲಕ್ಷವರೆಗೆ ಚಿಕಿತ್ಸಾ ಸೌಲಭ್ಯ ದೊರೆಯುತ್ತಿದೆಯಾದರೂ, ಸರ್ಕಾರಿ ಆಸ್ಪತ್ರೆಗಳ ದುರ್ಬಲ ವ್ಯವಸ್ಥೆಯಿಂದ ಬಡವರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಆತಂಕವನ್ನು ಅವರು ಹೊರಹಾಕಿದ್ದರು .

ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಎಸ್.ಎಲ್. ಪಿಂಟೊ, ಎಸ್ ಆರ್ ಲೋಬೊ , ಸೀಮಾ ಮಡಿವಾಳ, ವಾಸುದೇವ್ , ಹಬೀಬ್ ಖಾದರ್ , ಶಾಲೆಟ್ ಪಿಂಟೊ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!