ಜೈಲು ವಾರ್ಡನ್‌ಗೆ ಹಲ್ಲೆ, ಜೀವ ಬೆದರಿಕೆ ಹಾಕಿದ ಪ್ರಕರಣ: ಆರೋಪಿಗೆ 5 ವರ್ಷ ಕಠಿಣ ಶಿಕ್ಷೆ

ಉಡುಪಿ: ಜೈಲು ವಾರ್ಡನ್‌ಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಆರೋಪಿಗೆ 5 ವರ್ಷ ಕಠಿಣ ಶಿಕ್ಷೆ ಹಾಗೂ ₹40 ಸಾವಿರ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.


2011ರ ಡಿ.3ರಂದು ಮಧ್ಯಾಹ್ನ 1.20ರ ಸುಮಾರಿಗೆ ಹಿರಿಯಡ್ಕ ಠಾಣಾ ವ್ಯಾಪ್ತಿಯ ಅಂಜಾರು ಗ್ರಾಮದ ಜಿಲ್ಲಾ ಕಾರಾಗೃಹದ ಮೊದಲ ಬ್ಯಾರಕ್‌ ಎದುರಿನ ವರಾಂಡದಲ್ಲಿ ಘಟನೆ ನಡೆದಿತ್ತು. ಜೈಲು ವಾರ್ಡನ್‌ ಕರ್ತವ್ಯಕ್ಕೆ ಹಾಜರಾಗಿ ಬಂಧಿಗಳ ಲೆಕ್ಕ ತೆಗೆದುಕೊಳ್ಳಲು ಅವರವರ ಬ್ಯಾರಕ್‌ಗಳಿಗೆ ತೆರಳುವಂತೆ ಸೂಚಿಸಿದ್ದರು. ಈ ವೇಳೆ ಅಡುಗೆ ಕೋಣೆ ಎದುರಿದ್ದ ವಿಚಾರಣಾ ಖೈದಿ ಸಫಾನ್‌ ಹುಸೇನ್‌ ಅಲಿಯಾಸ್‌ ರಜಾಕ್‌ ಎಂಬಾತ ವಾರ್ಡನ್‌ಗೆ ಜೀವ ಬೆದರಿಕೆ ಹಾಕಿ ಎಡ ಕೆನ್ನೆಗೆ ಹೊಡೆದು ನೋವುಂಟು ಮಾಡಿದ್ದ.


ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ಪ್ರಕರಣವು 2022ರ ಜೂನ್‌ 24ರಂದು ಎಲ್‌ಪಿಸಿ ನಂ.02/2022 ಎಂದು ಆದೇಶವಾಗಿತ್ತು.


ನಂತರ ಎಲ್‌ಪಿಸಿ ಆಸಾಮಿ ಸಫಾನ್‌ ಹುಸೇನ್‌ನನ್ನು 2026ರ ಏಪ್ರಿಲ್‌ 23ರಂದು ಬಾಡಿ ವಾರಂಟ್‌ ಮೂಲಕ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಉಡುಪಿಗೆ ಹಾಜರುಪಡಿಸಲಾಗಿತ್ತು. ಪ್ರಕರಣವು ಎಸ್‌.ಸಿ. ನಂ.21/2026ರಂತೆ ವಿಚಾರಣೆ ನಡೆದು, ಸೆ.28ರಂದು ನ್ಯಾಯಾಲಯವು ಆರೋಪಿಗೆ 5 ವರ್ಷಗಳ ಕಠಿಣ ಶಿಕ್ಷೆ ಹಾಗೂ ₹40,000 ದಂಡ ವಿಧಿಸಿ ತೀರ್ಪು ನೀಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!