ಮಂಗಳೂರು, ಅ.6: ಮಂಗಳೂರು ಆರ್ಥೋಡಾಂಟಿಕ್ ಸ್ಟಡಿ ಗ್ರೂಪ್ (MOSG) ವತಿಯಿಂದ ಅ.5ರಿಂದ 11ರವರೆಗೆ ನಗರದ ವಿವಿಧೆಡೆ ಆರ್ಥೋಡಾಂಟಿಕ್ ಜಾಗೃತಿ ಸಪ್ತಾಹ–2026 ಆಯೋಜಿಸಲಾಗಿದೆ ಎಂದು ಮುಖ್ಯ ಸಂಚಾಲಕ ಹಾಗೂ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ನ ಪ್ರಾಧ್ಯಾಪಕ ಡಾ. ಶ್ರವಣ್ ಶೆಟ್ಟಿ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಆರ್ಥೋಡಾಂಟಿಕ್ ಶಿಕ್ಷಣ, ಸಂಶೋಧನೆ ಹಾಗೂ ರೋಗಿಗಳ ಆರೈಕೆಯಲ್ಲಿ 60 ವರ್ಷ ಪೂರೈಸಿರುವ ಇಂಡಿಯನ್ ಆರ್ಥೋಡಾಂಟಿಕ್ ಸೊಸೈಟಿಯ ವಜ್ರಮಹೋತ್ಸವದ ಅಂಗವಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಹಲ್ಲುಗಳು ಮುಂದೆ, ಹಿಂದೆ ಅಥವಾ ಅಡ್ಡಾದಿಡ್ಡಿಯಾಗಿದ್ದರೂ ಅವುಗಳನ್ನು ಸರಿಪಡಿಸಲು ಆರ್ಥೋಡಾಂಟಿಸ್ಟ್ಗಳ ನೆರವು ಪಡೆಯಬಹುದು. ಹಲ್ಲು ಮತ್ತು ದವಡೆಗಳ ಸರಿಯಾದ ಜೋಡಣೆ ಅಗಿಯುವ ಸಾಮರ್ಥ್ಯ, ಬಾಯಿಯ ಆರೋಗ್ಯ ಹಾಗೂ ಆತ್ಮವಿಶ್ವಾಸಕ್ಕೆ ಮಹತ್ವದ್ದಾಗಿದೆ ಎಂದು ಹೇಳಿದರು.

ಸಂಚಾಲಕಿ ಡಾ. ಹರ್ಷಿತಾ ಮಾತನಾಡಿ, ಸಪ್ತಾಹದ ಅಂಗವಾಗಿ ಶಾಲೆಗಳಲ್ಲಿ ಸ್ಮೈಲ್ ಅವೇರ್ನೆಸ್ ಕ್ಯಾಂಪ್, ಆರ್ಥೋಡಾಂಟಿಕ್ ಕ್ವಿಜ್, ಪೋಷಕರಿಗಾಗಿ ಜಾಗೃತಿ ಕಾರ್ಯಕ್ರಮ, ಬೀಚ್ ಕ್ಲೀನಿಂಗ್ ಹಾಗೂ ಆರ್ಥೋಡಾಂಟಿಕ್ ಜಾಗೃತಿ, ಸ್ಮೈಲ್ ಫೋಟೋ ಚಾಲೆಂಜ್, ರೋಲ್ ಪ್ಲೇ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿವಿಧ ಕಾಲೇಜುಗಳು ಮತ್ತು ಕ್ಲಿನಿಕ್ಗಳ ಡಿಜಿಟಲ್ ಪರದೆಗಳಲ್ಲಿ ಜಾಗೃತಿ ವಿಡಿಯೊಗಳನ್ನು ಪ್ರದರ್ಶಿಸಲಾಗುವುದು ಎಂದರು.
ಅ.5ರಂದು ‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ ಆರ್ಥೋಡಾಂಟಿಕ್ಸ್’ ಕುರಿತು ಸಿಡಿಇ ಕಾರ್ಯಕ್ರಮದೊಂದಿಗೆ ಸಪ್ತಾಹಕ್ಕೆ ಚಾಲನೆ ನೀಡಲಾಗಿದ್ದು, ಅ.7ರಂದು ‘ರೀ-ಅಲೈನ್ ಟು ಎ ಸಸ್ಟೇನಬಲ್ ಅಲೈನರ್ ಥೆರಪಿ’, ಅ.9ರಂದು ಆರ್ಥೋಡಾಂಟಿಕ್ ಕ್ವಿಜ್ ಹಾಗೂ ಅ.10ರಂದು ಪೋಷಕರಿಗಾಗಿ ಶಿಕ್ಷಣ ಕಾರ್ಯಕ್ರಮ ನಡೆಯಲಿದೆ. ಅರ್ಹ ಆರ್ಥೋಡಾಂಟಿಸ್ಟ್ರನ್ನು ಸರಿಯಾದ ಸಮಯದಲ್ಲಿ ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಡಾ. ಸಿದ್ಧಾರ್ಥ್ ಶೆಟ್ಟಿ, ಡಾ. ನಿಲ್ಲನ್ ಶೆಟ್ಟಿ, ಡಾ. ಧೀರಜ್ ಶೆಟ್ಟಿ, ಡಾ. ಆಶಿತ್ ಎಂ.ವಿ., ಡಾ. ಅರ್ಜುನ್ ನಾಯಕ್ ಹಾಗೂ ಡಾ. ಮಿಥುನ್ ಕೆ. ಉಪಸ್ಥಿತರಿದ್ದರು.

