NITK ಎದುರೇ ಡಂಪಿಂಗ್ ಯಾರ್ಡ್‌ನಂತಾದ ಬಸ್ ನಿಲ್ದಾಣ! ಸ್ವಚ್ಛತಾ ಕಾರ್ಯ ನಡೆಸಿ ಮಾದರಿಯಾದ ‘ಮೀಡಿಯಾ ಮನಸುಗಳು’

ಸುರತ್ಕಲ್: ಅದು ದೇಶದ ನಾನಾ ಭಾಗಗಳ ವಿದ್ಯಾರ್ಥಿಗಳು ಕಲಿಯುವ ದೇಶದ ಪ್ರತಿಷ್ಠಿತ ಎನ್ ಐಟಿಕೆ ತಾಂತ್ರಿಕ ಮಹಾವಿದ್ಯಾಲಯ. ಅದರ ಎದುರಲ್ಲೇ ಪ್ರತಿನಿತ್ಯ ನೂರಾರು ಬಸ್ ಗಳು ಬಂದು ಹೋಗುವ, ಸಾವಿರಾರು ಪ್ರಯಾಣಿಕರು ಬಸ್ ಕಾಯುವ ನಿಲ್ದಾಣ. ಈ ಬಸ್ ನಿಲ್ದಾಣದ ಪರಿಸ್ಥಿತಿ ಮಾತ್ರ ವಾಮಂಜೂರಿನ ಡಂಪಿಂಗ್ ಯಾರ್ಡ್ ನೆನಪಿಸುವಂತಿತ್ತು. ಪ್ಲಾಸ್ಟಿಕ್ ತ್ಯಾಜ್ಯ, ಬೀರ್ ಬಾಟಲಿಗಳು, ಹುಲ್ಲು ಬೆಳೆದು ಅಕ್ಷರಶ: ಬಸ್ ನಿಲ್ದಾಣ ತ್ಯಾಜ್ಯದ ಕೊಂಪೆಯಾಗಿತ್ತು.

ನಿಲ್ದಾಣದ ಅವ್ಯವಸ್ಥೆ ಕಂಡಿದ್ದ ವಿದ್ಯಾರ್ಥಿನಿಯೊಬ್ಬಳ ಕರೆಗೆ ಓಗೊಟ್ಟ “ಮೀಡಿಯಾ ಮನಸುಗಳು” ತಂಡದ ಸದಸ್ಯರು ಗುರುವಾರ ಇನ್ನೂ ಸರಿಯಾಗಿ ಬೆಳಕು ಮೂಡುವ ಮುನ್ನವೇ ಕತ್ತಿ, ಹಾರೆ, ಹಿಡಿಸೂಡಿ ಹಿಡಿದು ಸ್ಥಳಕ್ಕಾಗಮಿಸಿ ನಿರಂತರ ಮೂರು ಗಂಟೆಗಳ ಕಾಲ ಸ್ವಚ್ಛತಾಕಾರ್ಯ ನಡೆಸಿ ಸಮಾಜಕ್ಕೆ ಮಾದರಿಯಾದರು.

ಅಂತರರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸಂಸ್ಥೆಯ ಹೆಬ್ಬಾಗಿಲಿನಲ್ಲೇ ಇಂತಹ ದುಸ್ಥಿತಿಯಿದ್ದರೂ ಮಂಗಳೂರು ಮಹಾನಗರ ಪಾಲಿಕೆ ಮಾತ್ರ ಸಂಪೂರ್ಣ ನಿರ್ಲಕ್ಷ್ಯ ವಹಿಸಿತ್ತು. ದಿನನಿತ್ಯ ಸಾವಿರಾರು ಪ್ರಯಾಣಿಕರು ಅಸಹ್ಯದಿಂದ ಮೂಗು ಮುಚ್ಚಿಕೊಂಡು ನಿಲ್ಲುವ ವಾತಾವರಣವಿದ್ದರೂ, ಪಾಲಿಕೆಯ ಅಧಿಕಾರಿಗಳ ಕಣ್ಣಿಗಿದು ಕಾಣದೇ ಹೋದದ್ದು ದುರಂತ. ಆಡಳಿತ ವ್ಯವಸ್ಥೆಯ ಈ ಬೇಜವಾಬ್ದಾರಿತನದಿಂದಾಗಿ ಸುಂದರವಾಗಬೇಕಿದ್ದ ಬಸ್ ನಿಲ್ದಾಣವು ಕಸದ ತೊಟ್ಟಿಯಾಗಿ ಮಾರ್ಪಟ್ಟಿತ್ತು.

ಆಡಳಿತದ ನಿರ್ಲಕ್ಷ್ಯಕ್ಕೆ ಕಾಯುತ್ತಾ ಕೂರದೆ, ಬದಲಾವಣೆಯ ದಾರಿದೀಪವಾಗಿದ್ದೇ “ಮೀಡಿಯಾ ಮನಸುಗಳು”. ಲೇಖನಿಯ ಮೂಲಕ ಸಮಾಜದ ಲೋಪಗಳನ್ನು ತಿದ್ದುತ್ತಿದ್ದ ಪತ್ರಕರ್ತರ ಕೈಗಳು ಕತ್ತಿ-ಹಾರೆ ಹಿಡಿದು ಅಂಗಳಕ್ಕಿಳಿದಾಗ ನಿಲ್ದಾಣದ ಕಳೆಯೇ ಬದಲಾಯಿತು. ವೃತ್ತಿಪರ ಧಾವಂತದ ನಡುವೆಯೂ ಸಾಮಾಜಿಕ ಹೊಣೆಗಾರಿಕೆ ಮೆರೆದ ಈ ಪಡೆಯ ಬೆವರಿನ ಹನಿಗಳು, ತ್ಯಾಜ್ಯದ ಕೊಂಪೆಯಂತಿದ್ದ ಜಾಗಕ್ಕೆ ಹೊಸ ಜೀವ ನೀಡಿದವು.

ಈ ಮಾದರಿ ಕಾರ್ಯಕ್ಕೆ ಮನಪಾ ನಿಕಟಪೂರ್ವ ಕಾರ್ಪೊರೇಟರ್ ಶ್ವೇತಾ ಪೂಜಾರಿ ಹಾಗೂ ಮನಪಾ ಸ್ವಚ್ಛತಾ ಮೇಲ್ವಿಚಾರಕರಾದ ಯೋಗೀಶ್ ಅವರು ಸಾಥ್ ನೀಡಿದರೆ ಹಳೆಯಂಗಡಿಯ ಪೂಜಾ ಕೇಟರರ್ಸ್ ಮಾಲಕ ಜೈಕೃಷ್ಣ ಕೋಟ್ಯಾನ್ ಅವರು ಅಗತ್ಯ ನೀರನ್ನು ಒದಗಿಸುವ ಮೂಲಕ ಸಾರ್ವಜನಿಕ ಸಹಭಾಗಿತ್ವಕ್ಕೆ ಅತ್ಯುತ್ತಮ ನಿದರ್ಶನವಾದರು.

ಈ ಅಭಿಯಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಹಾಗೂ ಮೀಡಿಯಾ ಮನಸುಗಳು ತಂಡದ ಪ್ರಮುಖರಾದ ಶಶಿ ಬೆಳ್ಳಾಯರು, ಗಿರೀಶ್ ಮಣೇಲ್, ರಜನ್ ಕುಮಾರ್ ಕಾವೂರು ಹಾಗೂ ಸಂದೇಶ್ ಶೆಟ್ಟಿ, ಅನೂಪ್ ಸೂರಿಂಜೆ, ಸಂತೋಷ್ ಹೊಸಬೆಟ್ಟು ಸಕ್ರಿಯವಾಗಿ ಭಾಗವಹಿಸಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿದರು.

ವರದಿ ಮಾಡುವುದಕ್ಕಷ್ಟೇ ತಮ್ಮ ಕಾರ್ಯ ಸೀಮಿತಗೊಳಿಸದೆ, ನೇರ ಕಾರ್ಯಾಚರಣೆಗಿಳಿದು ಸ್ವಚ್ಛತೆಯ ಕ್ರಾಂತಿ ಮಾಡಿದ “ಮೀಡಿಯಾ ಮನಸುಗಳು” ತಂಡದ ಶ್ರಮದಾನಕ್ಕೆ ಸ್ಥಳೀಯರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ವ್ಯವಸ್ಥೆಗೆ ಚಾಟಿ ಬೀಸುತ್ತಲೇ, ತಾವೂ ಮುಂಚೂಣಿಯಲ್ಲಿ ನಿಂತು ಸಮಾಜ ತಿದ್ದಬಲ್ಲೆವು ಎಂಬುದನ್ನು ಈ ಪತ್ರಕರ್ತರ ಬಳಗ ಅರ್ಥಪೂರ್ಣವಾಗಿ ಸಾಬೀತುಪಡಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!