ಮಂಗಳೂರು: ಲೋಬೊ ಪ್ರೊಡಕ್ಷನ್ಸ್ ಮತ್ತು ಸೋನುಲವಿ ಸಿನಿ ಕ್ರಿಯೇಷನ್ಸ್ ಸಹಯೋಗದಲ್ಲಿ ನಿರ್ಮಾಣವಾಗಲಿರುವ ನೂತನ ತುಳು ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಅ.26ರಂದು ಸೋಮವಾರ ಸಂಜೆ 5.30ಕ್ಕೆ ಬಲ್ಮಠದ ಡಾನ್ ಬಾಸ್ಕೋ ಹಾಲ್ನಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ಮಾಣ ನಿರ್ವಹಣೆಯ ಜವಾಬ್ದಾರಿ ವಹಿಸಿರುವ ನರೇಂದ್ರ ಕೆರೆಕಾಡು ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಸೇವಕ ಹಾಗೂ ಉದ್ಯಮಿ ಜಾನ್ ವಿಲ್ಸನ್ ಲೋಬೊ ಅವರು ಈಗಾಗಲೇ ‘ವೇಳ್ ಘಡಿ’ ಕೊಂಕಣಿ ಚಿತ್ರವನ್ನು ನಿರ್ಮಿಸುತ್ತಿದ್ದು, ಇದೀಗ ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಮೊದಲ ತುಳು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತುಳುನಾಡಿನ ಕಲಾವಿದರು ಮತ್ತು ತಂತ್ರಜ್ಞರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಸೀಮಿತ ಬಜೆಟ್ನಲ್ಲಿ ಚಿತ್ರ ನಿರ್ಮಾಣವಾಗಲಿದೆ. 2027ರಲ್ಲಿ ತೆರೆಗೆ ಬರಲಿರುವ ಈ ಚಿತ್ರವು ಗ್ರಾಮೀಣ ತುಳು ರಂಗಭೂಮಿಯ ಆಗುಹೋಗುಗಳನ್ನು ಆಧರಿಸಿದ್ದು, ನವಿರಾದ ಹಾಸ್ಯದೊಂದಿಗೆ ಉತ್ತಮ ಸಂದೇಶ ಸಾರುವ ಕೌಟುಂಬಿಕ ಚಿತ್ರವಾಗಿರಲಿದೆ ಎಂದರು.

ಚಿತ್ರದ ಸಹನಿರ್ದೇಶಕ ರೋಶನ್ ನೆಲ್ಲಿಗುಡ್ಡೆ ಮಾತನಾಡಿ, ಅ.26ರಂದು ನಡೆಯುವ ಸಮಾರಂಭದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಲಿದ್ದಾರೆ. ರೆ. ಫಾ. ಆಂಡ್ರೋ ಲಿಯೋ ಡಿಸೋಜ ಆಶೀರ್ವಚನ ನೀಡಲಿದ್ದು, ನಿರ್ಮಾಪಕ ಜಾನ್ ವಿಲ್ಸನ್ ಲೋಬೊ ಅಧ್ಯಕ್ಷತೆ ವಹಿಸಲಿದ್ದಾರೆ. ಮಿಥುನ್ ರೈ ಶೂಟಿಂಗ್ ಕ್ಲಾಪ್ ಹಸ್ತಾಂತರಿಸಲಿದ್ದು, ವಾಲ್ಟರ್ ನಂದಳಿಕೆ ಕ್ಯಾಮರಾ ಚಾಲನೆ ನೀಡಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಚಿತ್ರತಂಡದ ತಂತ್ರಜ್ಞರನ್ನು ಗೌರವಿಸಲಿದ್ದಾರೆ ಎಂದು ತಿಳಿಸಿದರು.

ಚಿತ್ರದ ನಿರ್ದೇಶಕ ದೇವಿಪ್ರಕಾಶ್ ಎಸ್. ಮಾತನಾಡಿ, ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ತಾವು ನಿರ್ವಹಿಸುತ್ತಿದ್ದು, ವಿಜಯಕುಮಾರ್ ಕೊಡಿಯಾಲ್ಬೈಲ್ ಗೀತರಚನೆ ಮಾಡಲಿದ್ದಾರೆ. ರೋಶನ್ ನೆಲ್ಲಿಗುಡ್ಡೆ ಸಹನಿರ್ದೇಶಕರಾಗಿ, ಗಗನ್ ಸುವರ್ಣ ಮೂಲ್ಕಿ ಸಂಗೀತ ನಿರ್ದೇಶಕರಾಗಿ ಹಾಗೂ ಗಜೇಂದ್ರ ಕೋಲಾರ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಚಿತ್ರದಲ್ಲಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಉಮೇಶ್ ಮಿಜಾರ್, ನರೇಂದ್ರ ಕೆರೆಕಾಡು, ರೋಶನ್ ನೆಲ್ಲಿಗುಡ್ಡೆ, ಯುವರಾಜ್, ಸುರೇಶ್ ಶೆಟ್ಟಿಗಾರ್ ಕೆರೆಕಾಡು, ಜೆರೋಂ ಮೋರಸ್, ಸುನಿಲ್ ಡಿಸೋಜ ನೆಲ್ಲಿಗುಡ್ಡೆ, ರಾಧಿಕಾ ಪೂಜಾರಿ ಸೇರಿದಂತೆ ತುಳು ರಂಗಭೂಮಿಯ ಹಲವು ಕಲಾವಿದರು ಅಭಿನಯಿಸಲಿದ್ದಾರೆ. ಮಂಗಳೂರು, ಮೂಲ್ಕಿ, ಕಿನ್ನಿಗೋಳಿ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲು ಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಕಲಾವಿದ ಸುನಿಲ್ ಡಿಸೋಜ ನೆಲ್ಲಿಗುಡ್ಡೆ, ಕಲಾಭಿ ಸಂಸ್ಥೆಯ ಅಧ್ಯಕ್ಷ ಸುರೇಶ್ ಬಿ. ವರ್ಕಾಡಿ ಹಾಗೂ ಪ್ರಚಾರ ಸಂಯೋಜಕ ಆರೀಫ್ ಉಪಸ್ಥಿತರಿದ್ದರು.

