ನೂತನ ತುಳು ಸಿನಿಮಾ ‘ಪಟ್ ಪಟ್ ಪಟಾಕಿ’ ಶೀರ್ಷಿಕೆ ಅನಾವರಣತುಳು ಚಿತ್ರರಂಗದಿಂದ ಕಲೆ, ಕಲಾವಿದರಿಗೆ ಪ್ರೋತ್ಸಾಹ: ಅನಿಲ್ ಲೋಬೋ

ಮಂಗಳೂರು: ತುಳು ಚಿತ್ರರಂಗದ ಬೆಳವಣಿಗೆಗೆ ಉದ್ಯಮಿಗಳು ಹಾಗೂ ಸಮಾಜಸೇವಕರು ನೀಡುವ ಪ್ರೋತ್ಸಾಹ ಮಹತ್ವದ್ದಾಗಿದೆ. ಉದ್ಯಮದ ಜತೆಗೆ ಸಮಾಜಸೇವೆಯ ಮನೋಭಾವನೆಯೊಂದಿಗೆ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿರುವ ಜಾನ್ ವಿಲ್ಸನ್ ಲೋಬೋ ಅವರಂತಹ ವ್ಯಕ್ತಿಗಳಿಂದ ತುಳುನಾಡಿನ ಕಲೆ ಮತ್ತು ಕಲಾವಿದರಿಗೆ ವಿಶೇಷ ಪ್ರೋತ್ಸಾಹ ದೊರೆಯುತ್ತಿದೆ. ಇಂತಹ ಮನೋಭಾವನೆಯುಳ್ಳವರು ಹೆಚ್ಚಾಗಬೇಕು ಹಾಗೂ ಸಮಾಜವೂ ಅವರ ಪ್ರಯತ್ನಗಳಿಗೆ ಬೆಂಬಲ ನೀಡಬೇಕು ಎಂದು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ ಹೇಳಿದರು.

ಮಂಗಳೂರಿನ ಡಾನ್ ಬಾಸ್ಕೋ ಹಾಲ್‌ನಲ್ಲಿ ಲೋಬೋ ಪ್ರೊಡಕ್ಷನ್ ಹಾಗೂ ಸೋನುಲವಿ ಸಿನೆ ಕ್ರಿಯೇಶನ್ಸ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ನೂತನ ತುಳು ಸಿನಿಮಾ ‘ಪಟ್ ಪಟ್ ಪಟಾಕಿ’ಯ ಶೀರ್ಷಿಕೆಯನ್ನು ಪಟಾಕಿ ಸಿಡಿಸುವ ಮೂಲಕ ವಿಶಿಷ್ಟವಾಗಿ ಅನಾವರಣಗೊಳಿಸಿ ಅವರು ಮಾತನಾಡಿದರು.

ಪೆರ್ಮನ್ನೂರು, ತೊಕ್ಕೊಟ್ಟುವಿನ ಸಂತ ಸೆಬಾಸ್ಟಿಯನ್ ಚರ್ಚ್‌ನ ಧರ್ಮಗುರು ರೆ. ಫಾ. ಆಂಡ್ರೋ ಲಿಯೋ ಡಿಸೋಜ ಆಶೀರ್ವಚನ ನೀಡಿ, ತುಳು ಸಿನಿಮಾ ತುಳುನಾಡಿನ ಜನಜೀವನದ ಅವಿಭಾಜ್ಯ ಭಾಗವಾಗಿದ್ದು, ಸ್ಥಳೀಯ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ಲೋಬೋ ಪ್ರೊಡಕ್ಷನ್‌ನ ಮಾಲೀಕ ಹಾಗೂ ಚಿತ್ರದ ನಿರ್ಮಾಪಕ ಜಾನ್ ವಿಲ್ಸನ್ ಲೋಬೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಚಿತ್ರದ ಶೂಟಿಂಗ್ ಕ್ಲಾಪ್‌ ಅನ್ನು ನಿರ್ದೇಶಕ ದೇವಿಪ್ರಕಾಶ್ ಎಸ್. ಅವರಿಗೆ ಹಸ್ತಾಂತರಿಸಿದ ತುಳು ರಂಗಭೂಮಿಯ ಹಿರಿಯ ಕಲಾವಿದ, ‘ತೆಲಿಕೆದ ಬೊಳ್ಳಿ’ ದೇವದಾಸ್ ಕಾಪಿಕಾಡ್ ಮಾತನಾಡಿ, ಚಿತ್ರರಂಗದಲ್ಲಿ ಹೊಸತನದ ಪ್ರಯತ್ನಗಳನ್ನು ಮಾಡಿದಾಗ ಮಾತ್ರ ಪ್ರೇಕ್ಷಕರ ಮೆಚ್ಚುಗೆ ದೊರೆಯುತ್ತದೆ. ನಿಷ್ಠೆ ಮತ್ತು ಬದ್ಧತೆಯಿಂದ ನಿರ್ಮಿಸಿದ ಸಿನಿಮಾಗಳಿಗೆ ಕಲಾವಿದರು ಬಿಡುಗಡೆಯ ನಂತರವೂ ಸಹಕಾರ ನೀಡಿದರೆ, ಚಿತ್ರವು ಹೆಚ್ಚಿನ ಜನರನ್ನು ತಲುಪಲು ಸಾಧ್ಯವಾಗುತ್ತದೆ. ಇಂತಹ ಬದ್ಧತೆಯುಳ್ಳ ಕಲಾವಿದರಿಗೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿದೆ ಎಂದರು.

ಕರ್ನಾಟಕ ಸರ್ಕಾರದ ಪರಿಸರ ಮತ್ತು ಪ್ರವಾಸೋದ್ಯಮ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ ಕ್ಯಾಮರಾ ಚಾಲನೆಗೈದು ಚಿತ್ರತಂಡಕ್ಕೆ ಶುಭ ಹಾರೈಸಿದರು. ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಚ್. ವಸಂತ ಬೆರ್ನಾಡ್ ಚಿತ್ರದ ತಂತ್ರಜ್ಞರನ್ನು ಗೌರವಿಸಿದರು. ನಮ್ಮ ಕುಡ್ಲ ವಾಹಿನಿಯ ಅಧ್ಯಕ್ಷ ಲೀಲಾಕ್ಷ ಕರ್ಕೇರ ಚಿತ್ರದಲ್ಲಿ ಅಭಿನಯಿಸುವ ಕಲಾವಿದರನ್ನು ಸನ್ಮಾನಿಸಿದರು. ಕಿನ್ನಿಗೋಳಿಯ ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಜಾನ್ ವಿಲ್ಸನ್ ಲೋಬೋ ಹಾಗೂ ಹಿರಿಯ ರಂಗಭೂಮಿ ಕಲಾವಿದ ಡೊಲ್ಲಂ ಮಂಗಳೂರು ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಂಗಭೂಮಿ ಮತ್ತು ಚಲನಚಿತ್ರ ನಟ ಉಮೇಶ್ ಮಿಜಾರ್, ಮಂಗಳೂರಿನ ಎಕ್ಸ್‌ಪ್ರೆಶನ್ ಆರ್ಟ್ಸ್‌ನ ಈಶ್ವರ್ ಕೋಡಿಕಲ್, ನೋರಾಸ್ ಹಿಸ್ಟೋಲಾಜಿ ರಿಸರ್ಚ್ ಲ್ಯಾಬ್‌ನ ಮಾಲೀಕ ನವೀನ್ ಲ್ಯಾನ್ಸಿ ಸಾಲ್ಡಾನ, ಡೀನೆಟ್ ಇಂಟರ್‌ನೆಟ್ ಪ್ರೈವೇಟ್ ಲಿಮಿಟೆಡ್‌ನ ಫ್ರಾನ್ಸಿಸ್ ಲೋಬೋ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರದ ನಿರ್ಮಾಣ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ನರೇಂದ್ರ ಕೆರೆಕಾಡು ಸ್ವಾಗತಿಸಿದರು. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಹೊಣೆ ಹೊತ್ತಿರುವ ದೇವಿಪ್ರಕಾಶ್ ಎಸ್. ಪ್ರಸ್ತಾವನೆಗೈದರು. ಸೋನುಲವಿ ಸಿನೆ ಕ್ರಿಯೇಶನ್ಸ್‌ನ ರೋಶನ್ ನೆಲ್ಲಿಗುಡ್ಡೆ ವಂದಿಸಿದರು. ಕಲಾವಿದ ಸುನಿಲ್ ಡಿಸೋಜಾ ಪರಿಚಯಿಸಿದರು. ಶ್ರೀನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಕಾಶ್ ಆಚಾರ್ಯ ಕಿನ್ನಿಗೋಳಿ, ಭಗವಾನ್ ಸುರತ್ಕಲ್, ಲಿಯೋ ರಾಣಿಪುರ, ಚಿತ್ರಲೇಖ ಸುರತ್ಕಲ್ ಹಾಗೂ ಮಂಜುಷಾ ಸುರತ್ಕಲ್ ಅವರಿಂದ ಸಂಗೀತ ರಸಮಂಜರಿ ನಡೆಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!