594 ಸೇವಾ ಯೋಜನೆಗಳ ಮೂಲಕ ಸಮಾಜಮುಖಿ ಕಾರ್ಯ: ರಾಜಕೇಸರಿ ಸಂಸ್ಥೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗರಿ …. !

ಮಂಗಳೂರು: ಕಳೆದ 14 ವರ್ಷಗಳಿಂದ ಸಾಮಾಜಿಕ, ಆರೋಗ್ಯ, ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ನಿರಂತರ ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ರಾಜಕೇಸರಿ ಸಂಸ್ಥೆಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸಂಸ್ಥೆಗೆ ಈ ಪ್ರತಿಷ್ಠಿತ ಗೌರವ ಪ್ರಧಾನ ಮಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ 120 ಸಾಧಕರು ಹಾಗೂ 53 ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜಕೇಸರಿ ಸಂಸ್ಥೆ ಈವರೆಗೆ ಒಟ್ಟು 594 ಸೇವಾ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಸುಮಾರು 2 ಕೋಟಿಗೂ ಅಧಿಕ ಮೊತ್ತದ ಸಮಾಜಸೇವಾ ಕಾರ್ಯಗಳನ್ನು ಕೈಗೊಂಡಿದ್ದು, 34 ಬಡ ಹಾಗೂ ಅಶಕ್ತ ಕುಟುಂಬಗಳಿಗೆ ಮನೆ ನಿರ್ಮಿಸಿಕೊಟ್ಟಿದೆ. ಅನಾರೋಗ್ಯ ಪೀಡಿತರಿಗೆ ಚಿಕಿತ್ಸಾ ನೆರವು, ಬಡವರಿಗೆ ಆರ್ಥಿಕ ಸಹಾಯ, ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರ, ಶಿಕ್ಷಣಕ್ಕೆ ಪ್ರೋತ್ಸಾಹ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೆಂಬಲ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದೆ.

ಕೊರೋನಾ ಕಾಲದಲ್ಲೂ ಮಾನವೀಯ ಸೇವೆ

ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಸುಮಾರು 7.12 ಲಕ್ಷ ರೂ. ಮೊತ್ತದ ವಿಶೇಷ ಸೇವಾ ಯೋಜನೆಗಳನ್ನು ಕೈಗೊಂಡ ಸಂಸ್ಥೆ, ಕಡುಬಡವರಿಗೆ 640 ಆಹಾರ ಕಿಟ್‌ಗಳನ್ನು ವಿತರಿಸಿದೆ. ಸರ್ಕಾರಿ ಆಸ್ಪತ್ರೆಯ ಗುತ್ತಿಗೆ ನೌಕರರಿಗೆ 93 ಆಹಾರ ಕಿಟ್‌ಗಳನ್ನು ನೀಡಿದ್ದು, ರೋಗಿಗಳಿಗೆ ಉಚಿತ ವಾಹನ ವ್ಯವಸ್ಥೆ ಕಲ್ಪಿಸಿದೆ. ಕೊರೋನಾ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಪತ್ರಕರ್ತರನ್ನು ಸನ್ಮಾನಿಸಿದೆ. ಸೋಂಕಿನಿಂದ ಮೃತಪಟ್ಟ 85 ಮಂದಿಯ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದೆ. ಅಲ್ಲದೆ, ಮುಕ್ತಿಧಾಮಕ್ಕೆ ಕಟ್ಟಿಗೆ ವ್ಯವಸ್ಥೆ ಮಾಡಿಕೊಟ್ಟಿದ್ದು, ಸ್ವಯಂ ಉದ್ಯೋಗ ಆರಂಭಿಸಲು ಆಸಕ್ತಿ ಹೊಂದಿದ್ದ 13 ಬಡ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿದೆ.

ರಕ್ತದಾನ, ನೇತ್ರದಾನದಲ್ಲೂ ಮಹತ್ವದ ಕೊಡುಗೆ

ಎಂಡೋಸಲ್ಫಾನ್ ಪೀಡಿತರು ಹಾಗೂ ಅಂಗವಿಕಲರಿಗೆ 27 ಗಾಲಿಕುರ್ಚಿಗಳನ್ನು ಹಸ್ತಾಂತರಿಸಿದೆ. ಸಂಸ್ಥೆಯ ಮೂಲಕ 543 ಮಂದಿ ನೇತ್ರದಾನಕ್ಕೆ ನೋಂದಣಿ ಮಾಡಿಸಿರುವುದು ಗಮನಾರ್ಹ ಸಾಧನೆಯಾಗಿದೆ. ತುರ್ತು ಸಂದರ್ಭಗಳಲ್ಲಿ ಸಂಸ್ಥೆಯ ಸದಸ್ಯರು ಈವರೆಗೆ 12,894 ಯುನಿಟ್ ರಕ್ತವನ್ನು ನೇರವಾಗಿ ದಾನ ಮಾಡಿದ್ದಾರೆ. ಅನಾಥಾಶ್ರಮಗಳಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ, ಅಂಗವಿಕಲರ ಕಲ್ಯಾಣ ಕಾರ್ಯಕ್ರಮ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಶಿಕ್ಷಣ ಪ್ರೋತ್ಸಾಹ ಹಾಗೂ ಶ್ರಮದಾನ ಕಾರ್ಯಗಳನ್ನೂ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.

ಸ್ವಚ್ಛಾಲಯ ಅಭಿಯಾನಕ್ಕೆ ವಿಶೇಷ ಆದ್ಯತೆ

ಸಂಸ್ಥೆಯ ಪ್ರಮುಖ ವಿನೂತನ ಯೋಜನೆಗಳಲ್ಲಿ ‘ರಾಜಕೇಸರಿ ಸ್ವಚ್ಛಾಲಯ ಅಭಿಯಾನ’ವೂ ಒಂದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳ ಶೌಚಾಲಯಗಳನ್ನು ಸ್ವಯಂಸೇವಕರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ, ನವೀಕರಿಸಿ ಮಕ್ಕಳಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ಅಭಿಯಾನ ಆರಂಭಿಸಲಾಗಿದೆ. ಈವರೆಗೆ 19 ಶಾಲೆಗಳ ಶೌಚಾಲಯಗಳನ್ನು ಸ್ವಚ್ಛಾಲಯಗಳನ್ನಾಗಿ ಪರಿವರ್ತಿಸಲಾಗಿದೆ.

ಸಮಾಜದ ವಿವಿಧ ವೃತ್ತಿಪರರ ನಡುವೆ ಏಕತೆ ಮತ್ತು ಭಾವೈಕ್ಯತೆ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ‘ಏಕತೆಗಾಗಿ ಕ್ರಿಕೆಟ್’ ಎಂಬ ಧ್ಯೇಯವಾಕ್ಯದಡಿ ‘ರಾಜಕೇಸರಿ ರಿಪಬ್ಲಿಕ್ ಕಪ್’ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ.

ಇದರೊಂದಿಗೆ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ಬಸ್ ತಂಗುದಾಣಗಳಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ನೆರವು ನೀಡುವುದು, ಸರ್ಕಾರಿ ಶಾಲೆಗಳ ಉಳಿವಿಗಾಗಿ ಹೋರಾಟ, ಆಶ್ರಮಗಳಿಗೆ ವಿಶೇಷ ಯೋಜನೆಗಳು, ನ್ಯಾಯಬೆಲೆ ಅಂಗಡಿಗಳಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಣೆ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ನೀರಿನ ಬಾಟಲಿ ಮಾರಾಟದಿಂದ ಬಂದ ಲಾಭವನ್ನು ಅಶಕ್ತರಿಗೆ ನೀಡುವಂತಹ ವಿಶಿಷ್ಟ ಸೇವಾ ಕಾರ್ಯಗಳನ್ನೂ ಸಂಸ್ಥೆ ನಡೆಸಿದೆ.

ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಸಹೋದರಿಯರೊಂದಿಗೆ ಪ್ರಥಮ ಬಾರಿಗೆ ರಕ್ಷಾಬಂಧನ ಆಚರಿಸುವ ಮೂಲಕ ಸಾಮಾಜಿಕ ಸಾಮರಸ್ಯ ಮತ್ತು ಸಮಾನತೆಯ ಸಂದೇಶವನ್ನೂ ಸಾರಿದೆ.

ನಿಸ್ವಾರ್ಥ ಸೇವೆ, ಮಾನವೀಯ ಕಾಳಜಿ ಹಾಗೂ ಸಮಾಜದ ವಿವಿಧ ಸ್ತರಗಳ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಗುರುತಿಸಿಕೊಂಡಿರುವ ರಾಜಕೇಸರಿ ಸಂಸ್ಥೆಯ ಸೇವಾ ಕಾರ್ಯಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮತ್ತೊಂದು ಮಹತ್ವದ ಗೌರವವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!