ಕರಾವಳಿಯ ಹಾಸ್ಯ ಕಲಾವಿದರ ದಂಡು: ‘ವಾದಿರಾಜ ವಾಲಗ ಮಂಡಳಿ’ ಚಿತ್ರದ ಪೋಸ್ಟರ್ ನ.7ರಂದು ಬಿಡುಗಡೆ

ಡಾ. ಎಂ.ಎನ್. ರಾಜೇಂದ್ರ ಕುಮಾರ್ ನಿರ್ಮಾಣ; ಶಶಿರಾಜ್ ಕಾವೂರು ನಿರ್ದೇಶನದ ಚಿತ್ರ ಡಿಸೆಂಬರ್ ಅಂತ್ಯಕ್ಕೆ ತೆರೆಗೆ

ಮಂಗಳೂರು: ಕರಾವಳಿಯ ಜನಪ್ರಿಯ ಹಾಸ್ಯ ಕಲಾವಿದರ ದಂಡೇ ಸೇರಿಕೊಂಡಿರುವ ‘ವಾದಿರಾಜ ವಾಲಗ ಮಂಡಳಿ’ ಕನ್ನಡ ಚಲನಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭ ನ.7ರಂದು ಸಂಜೆ 5 ಗಂಟೆಗೆ ನಗರದ ಓಶಿಯನ್ ಪರ್ಲ್ ಹೋಟೆಲ್‌ನಲ್ಲಿ ನಡೆಯಲಿದೆ. ಚಿತ್ರದ ನಿರ್ಮಾಪಕ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಪೋಸ್ಟರ್ ಬಿಡುಗಡೆ ಮಾಡಲಿದ್ದಾರೆ.

ಬ್ರಹ್ಮಾವರ, ಮಂಗಳೂರು, ಮುಲ್ಕಿ ಹಾಗೂ ಕಾಸರಗೋಡು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಎರಡು ಹಂತಗಳಲ್ಲಿ ಸುಮಾರು 55 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆದಿದೆ. ಕರಾವಳಿಯ ಕನ್ನಡದ ಸೊಗಡಿನೊಂದಿಗೆ ಸಂಪೂರ್ಣ ಹಾಸ್ಯ ಹಾಗೂ ಕುತೂಹಲಭರಿತ ಕಥಾಹಂದರ ಹೊಂದಿರುವ ಈ ಚಿತ್ರ ಕುಟುಂಬ ಸಮೇತ ವೀಕ್ಷಿಸಬಹುದಾದ ಮನರಂಜನಾತ್ಮಕ ಚಿತ್ರವಾಗಿ ಮೂಡಿಬಂದಿದೆ.

‘ಗಲಾಟೆ’ ಸಿನಿಮಾ ಹಾಗೂ ‘ಜೋಗುಳ’ ಧಾರಾವಾಹಿ ನಿರ್ಮಿಸಿರುವ ಎಂ.ಎನ್.ಆರ್. ಪ್ರೊಡಕ್ಷನ್ ಬ್ಯಾನರ್‌ನಡಿ ಸಹಕಾರಿ ಧುರೀಣ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಚಿತ್ರ ನಿರ್ಮಿಸಿದ್ದಾರೆ. ‘ಗುಂಡುಮಾಮ’ ಖ್ಯಾತಿಯ ನವೀನ್ ಡಿ. ಪಡೀಲ್, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರು, ಮೈಮ್ ರಾಮದಾಸ್, ಗೋಪಿನಾಥ್ ಭಟ್, ಲಕ್ಷ್ಮಣ ಮಲ್ಲೂರು ಹಾಗೂ ಶೋಭರಾಜ್ ಪಾವೂರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅರ್ಜುನ್ ವೇದಾಂತ್, ಅಥರ್ವ ಪ್ರಕಾಶ್, ತನ್ನಿ ರಾವ್ ಹಾಗೂ ವೇನ್ ರೈ ನಾಯಕ-ನಾಯಕಿಯರಾಗಿ ಅಭಿನಯಿಸಿದ್ದಾರೆ.

‘ವರಾಹ ರೂಪಂ’ ಹಾಡಿನ ಮೂಲಕ ಖ್ಯಾತಿ ಪಡೆದ ನಟ, ನಿರ್ದೇಶಕ ಹಾಗೂ ಸಾಹಿತಿ ಶಶಿರಾಜ್ ಕಾವೂರು ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿ ನಿರ್ದೇಶನ ಮಾಡಿದ್ದಾರೆ. ಛಾಯಾಗ್ರಹಣವನ್ನು ಎಸ್. ಚಂದ್ರಶೇಖರನ್ ನಿರ್ವಹಿಸಿದ್ದು, ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ಸೈಂಟ್ ಟೈಗರ್ ಶಿವು ಸಾಹಸ ನಿರ್ದೇಶನ, ವಿನಾಯಕ ಆಚಾರ್ಯ ನೃತ್ಯ ನಿರ್ದೇಶನ ಮಾಡಿದ್ದಾರೆ. ಜಯಪ್ರಕಾಶ್ ತುಂಬೆ ಸಹ ನಿರ್ಮಾಪಕರಾಗಿ, ಸಂತೋಷ್ ಶೆಟ್ಟಿ ಹಾಗೂ ಲಕ್ಷ್ಮಣ ಕುಮಾರ್ ಮಲ್ಲೂರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಚಿತ್ರದಲ್ಲಿ ಒಟ್ಟು ಎಂಟು ಹಾಡುಗಳಿದ್ದು, ನಾಲ್ಕು ಪೂರ್ಣ ಪ್ರಮಾಣದ ಹಾಡುಗಳು ಹಾಗೂ ನಾಲ್ಕು ತುಣುಕು ಹಾಡುಗಳಿವೆ. ಕೆನಡಾ ಮೂಲದ ಆಭಿ, ‘ವರಾಹ ರೂಪಂ’ ಖ್ಯಾತಿಯ ಸಾಯಿ ವಿಘ್ನೇಶ್, ಮೈಮ್ ರಾಮದಾಸ್, ಪ್ರಕಾಶ್ ಮಹಾದೇವನ್, ರವೀಂದ್ರ ಪ್ರಭು ಹಾಗೂ ಮಣಿಕಾಂತ್ ಕದ್ರಿ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಕರಾವಳಿಯ ಸಂಭಾಷಣಾ ಶೈಲಿ ಮತ್ತು ಹಾಸ್ಯದ ನಿರೂಪಣೆ ಚಿತ್ರದ ವಿಶೇಷತೆಯಾಗಿದ್ದು, ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಗಳಿಗೂ ಡಬ್ಬಿಂಗ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಚಿತ್ರದ ಗುಣಮಟ್ಟ ಹಾಗೂ ಹಾಸ್ಯ ಎಲ್ಲ ಭಾಷೆಯ ಪ್ರೇಕ್ಷಕರನ್ನೂ ತಲುಪಲಿದೆ ಎಂಬ ವಿಶ್ವಾಸವಿದೆ ಎಂದು ಸಹ ನಿರ್ಮಾಪಕ ಜಯಪ್ರಕಾಶ್ ತುಂಬೆ ತಿಳಿಸಿದ್ದಾರೆ.

ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದರೂ, ಇತರ ಸಿನಿಮಾಗಳ ಬಿಡುಗಡೆಯೊಂದಿಗೆ ಸ್ಪರ್ಧೆ ಉಂಟಾಗದಂತೆ ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ನಿರ್ಮಾಪಕ ಡಾ. ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!