142 ಶಾಲೆಗಳ 5 ಸಾವಿರ ವಿದ್ಯಾರ್ಥಿಗಳಿಂದ ವಿವಿಧ ಕಲಾ ಸ್ಪರ್ಧೆ
ಕುಂಬಳೆ: ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವವು ನವೆಂಬರ್ 5, 11, 12 ಮತ್ತು 13ರಂದು ಮೀಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಿಯಪದವಿನಲ್ಲಿ ನಡೆಯಲಿದೆ ಎಂದು ಸಂಘಟನಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಎಸ್.ವಿ.ವಿ.ಎಚ್.ಎಸ್.ಎಸ್. ಮತ್ತು ವಿ.ಎ.ಯು.ಪಿ.ಎಸ್. ಮಿಯಪದವು ಶಾಲೆಗಳ ಜಂಟಿ ಆತಿಥ್ಯದಲ್ಲಿ 65ನೇ ಉಪಜಿಲ್ಲಾ ಶಾಲಾ ಕಲೋತ್ಸವ ಆಯೋಜಿಸಲಾಗಿದೆ.
ಉಪಜಿಲ್ಲೆಯ 142 ಶಾಲೆಗಳಿಂದ ಸುಮಾರು 5 ಸಾವಿರ ವಿದ್ಯಾರ್ಥಿಗಳು ವಿವಿಧ ಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.
ನವೆಂಬರ್ 5ರಂದು ವೇದಿಕೆಯೇತರ ಸ್ಪರ್ಧೆಗಳು ನಡೆಯಲಿದ್ದು, ನವೆಂಬರ್ 11ರಿಂದ 13ರವರೆಗೆ ವೇದಿಕೆ ಸ್ಪರ್ಧೆಗಳು ನಡೆಯಲಿವೆ.
ನವೆಂಬರ್ 5ರಂದು ಬೆಳಗ್ಗೆ 9 ಗಂಟೆಗೆ ಎಸ್.ವಿ.ವಿ.ಎಚ್.ಎಸ್.ಎಸ್. ಶಾಲೆಯ ಮ್ಯಾನೇಜರ್ ಡಾ. ಜಯಪ್ರಕಾಶ್ ನಾರಾಯಣ ಟಿ.ಕೆ. ಧ್ವಜಾರೋಹಣ ನೆರವೇರಿಸಲಿದ್ದಾರೆ.
ನವೆಂಬರ್ 12ರಂದು ಬೆಳಗ್ಗೆ 9.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಉದ್ಘಾಟಿಸಲಿದ್ದಾರೆ. ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಸಂಘಟನಾ ಸಮಿತಿ ಅಧ್ಯಕ್ಷ ಸಿ.ಎ. ತಾಜುದ್ದೀನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ನಾರಾಯಣ ದೇಲಂಪಾಡಿ ಸ್ವಾಗತಿಸಲಿದ್ದಾರೆ.

ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ, ಎಚ್.ಎ.ಎಲ್. ಬೆಂಗಳೂರು ನಿರ್ದೇಶಕ ಎಂ.ಜಿ. ಬಾಲಸುಬ್ರಹ್ಮಣ್ಯ, ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಸತೀಶ್ ಚಂದ್ರ ಎಸ್.ಆರ್., ಮಂಜೇಶ್ವರ ಸಿ.ಐ. ವಿಷ್ಣು ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಮ್ಮರ್ ಬೋರ್ಕಳ, ಬಶೀರ್ ಕನಿಲ, ಗೋಲ್ಡನ್ ರಹ್ಮಾನ್ ಹಾಗೂ ವಿ.ಪಿ. ಅಬ್ದುಲ್ ಖಾದರ್ ಮಾತನಾಡಲಿದ್ದಾರೆ.
ನವೆಂಬರ್ 13ರಂದು ಸಂಜೆ 3.30ಕ್ಕೆ ನಡೆಯುವ ಸಮಾರೋಪ ಸಮಾರಂಭವನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಉದ್ಘಾಟಿಸಲಿದ್ದಾರೆ. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್ ಕೆ. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.
ಕುಂಭಳೆ ಪ್ರೆಸ್ ಫೋರಂನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಮಿತಿ ಅಧ್ಯಕ್ಷ ಹಾಗೂ ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಎ. ತಾಜುದ್ದೀನ್ ಕಡಂಬಾರ್, ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ನಾರಾಯಣ ದೇಲಂಪಾಡಿ, ಪ್ರಧಾನ ಸಂಚಾಲಕ ರಮೇಶ್ ಕೆ.ಎನ್., ಮುಖ್ಯೋಪಾಧ್ಯಾಯಿನಿ ಮೃದೂಲಾ ಕೆ.ಎಂ., ಅರವಿಂದಾಕ್ಷ ಭಂಡಾರಿ, ಹರೀಶ ಸೋಲಯ ಹಾಗೂ ಶಿವಸುಬ್ರಹ್ಮಣ್ಯ ಪ್ರಸಾದ್ ಟಿ. ಉಪಸ್ಥಿತರಿದ್ದರು.

