ಎನ್‌ಐಟಿಕೆ ಮುಖ್ಯದ್ವಾರದ ಎದುರಿನ ಕೊಳಕು ಬಸ್ ನಿಲ್ದಾಣ ಸ್ವಚ್ಛಗೊಳಿಸಿದ ‘ಮೀಡಿಯಾ ಮನಸುಗಳು’ ತಂಡ!

ಮಂಗಳೂರು: ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಎನ್‌ಐಟಿಕೆ (NITK) ಮುಖ್ಯ ದ್ವಾರದ ಎದುರಲ್ಲೇ ಅತ್ಯಂತ ಕೊಳಕಿನಿಂದ ಕೂಡಿದ್ದ ಬಸ್ ನಿಲ್ದಾಣವನ್ನು ನವೆಂಬರ್ 4ರ ಮುಂಜಾನೆ ‘ಮೀಡಿಯಾ ಮನಸುಗಳು’ ತಂಡದ ಸದಸ್ಯರು ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

ಎನ್‌ಐಟಿಕೆ ಶಿಕ್ಷಣ ಸಂಸ್ಥೆಯ ದ್ವಾರದಿಂದ ಮಾರುದೂರಲ್ಲಿರುವ ಬಸ್ ನಿಲ್ದಾಣವನ್ನು ‘ಮೀಡಿಯಾ ಮನಸುಗಳು’ ತಂಡ ಸುಮಾರು 15 ದಿನಗಳ ಹಿಂದೆ ಸ್ವಚ್ಛಗೊಳಿಸಿತ್ತು. ಆದರೆ, ಅದರ ಪಕ್ಕದಲ್ಲೇ ಇದ್ದ ಮತ್ತೊಂದು ಬಸ್ ನಿಲ್ದಾಣದ ದುಃಸ್ಥಿತಿಯ ಬಗ್ಗೆ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಯಾವುದೇ ಗಮನ ಹರಿಸಿರಲಿಲ್ಲ. ಬಸ್ ನಿಲ್ದಾಣ ಸಂಪೂರ್ಣ ಕೊಳಕಿನಿಂದ ಕೂಡಿದ್ದು, ವಿದ್ಯಾರ್ಥಿಗಳು ಕುಳಿತುಕೊಳ್ಳಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಎಲ್ಲೆಂದರಲ್ಲಿ ಕಸ, ಧೂಳು, ಗಿಡಗಂಟಿ ಬೆಳೆದು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಈ ಬಗ್ಗೆ ಸ್ಥಳೀಯ ರಿಕ್ಷಾ ಚಾಲಕರೊಬ್ಬರು ಆಕ್ರೋಶ ವ್ಯಕ್ತಪಡಿಸಿ ‘ಮೀಡಿಯಾ ಮನಸುಗಳು’ ತಂಡದ ಗಮನ ಸೆಳೆದಿದ್ದರು.

ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಿದ ತಂಡದ ಸದಸ್ಯರು ತಮ್ಮ 13ನೇ ಸೇವಾ ಚಟುವಟಿಕೆಯ ಅಂಗವಾಗಿ ಬಸ್ ನಿಲ್ದಾಣವನ್ನು ಮುಂಜಾನೆಯೇ ಸ್ವಚ್ಛಗೊಳಿಸಲು ನಿರ್ಧರಿಸಿ ಕಾರ್ಯರೂಪಕ್ಕೆ ತಂದರು. ಸಾರ್ವಜನಿಕ ಬಳಕೆಯ ಸ್ಥಳವೊಂದು ಇಷ್ಟೊಂದು ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಜಾಹೀರಾತಿನ ಆದಾಯ ಯಾರ ಪಾಲು? ನಿರ್ವಹಣೆಯ ಹೊಣೆ ಯಾರದ್ದು?
ಸಾಮಾನ್ಯವಾಗಿ ಬಸ್ ನಿಲ್ದಾಣಗಳ ನಿರ್ಮಾಣ ಮತ್ತು ನಿರ್ವಹಣೆಗಾಗಿ ಖಾಸಗಿ ಸಂಸ್ಥೆಗಳ ಪ್ರಾಯೋಜಕತ್ವ ಪಡೆಯಲಾಗುತ್ತದೆ. ಪ್ರತಿಯಾಗಿ ಆ ಸಂಸ್ಥೆಗಳಿಗೆ ಜಾಹೀರಾತು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗುತ್ತದೆ. ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ವ್ಯವಸ್ಥೆಗಿಂತಲೂ ಪ್ರಾಯೋಜಕ ಸಂಸ್ಥೆಯ ಜಾಹೀರಾತು ಫಲಕವೇ ದೊಡ್ಡದಾಗಿ ಕಾಣಿಸುತ್ತದೆ. ಆದರೆ ಇಂತಹ ಬಸ್ ನಿಲ್ದಾಣಗಳ ನಿರ್ವಹಣೆಯ ಹೊಣೆ ಯಾರದ್ದು ಎಂಬುದು ಈಗ ಗಂಭೀರ ಪ್ರಶ್ನೆಯಾಗಿದೆ. ಜಾಹೀರಾತು ನೀಡುವ ಖಾಸಗಿ ಕಂಪನಿಯದ್ದೋ ಅಥವಾ ಮಹಾನಗರ ಪಾಲಿಕೆಯದ್ದೋ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟಪಡಿಸಬೇಕಿದೆ.

ಖಾಸಗಿ ಸಂಸ್ಥೆಗಳು ಜಾಹೀರಾತಿಗಾಗಿ ನೀಡುವ ಹಣ ಯಾರ ಪಾಲಾಗುತ್ತಿದೆ? ಬಸ್ ನಿಲ್ದಾಣಗಳ ನಿರ್ವಹಣೆಗಾಗಿ ಮೀಸಲಿಟ್ಟ ಹಣವನ್ನು ಯಾರು ಪಡೆಯುತ್ತಿದ್ದಾರೆ? ಈವರೆಗೆ ನಿರ್ವಹಣೆಯ ಹೆಸರಿನಲ್ಲಿ ಎಷ್ಟು ಹಣ ಬಿಡುಗಡೆಯಾಗಿದೆ ಮತ್ತು ಎಷ್ಟು ಹಣ ಖರ್ಚಾಗಿದೆ ಎಂಬುದರ ಕುರಿತು ಸಮಗ್ರ ಮಾಹಿತಿ ಬಹಿರಂಗವಾಗಬೇಕಿದೆ. ನಿರ್ವಹಣೆಗೆ ಹಣ ಬಿಡುಗಡೆಯಾಗುತ್ತಿದ್ದರೂ ಬಸ್ ನಿಲ್ದಾಣಗಳು ಇಂತಹ ದುಃಸ್ಥಿತಿಗೆ ತಲುಪಿರುವುದರ ಹಿಂದೆ ಏನಾದರೂ ಅವ್ಯವಹಾರ ನಡೆದಿದೆಯೇ ಎಂಬ ಅನುಮಾನಗಳೂ ಮೂಡುತ್ತಿವೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತರು ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ, ಜಾಹೀರಾತು ಒಪ್ಪಂದಗಳು, ಹಣಕಾಸಿನ ವ್ಯವಹಾರಗಳು ಹಾಗೂ ನಿರ್ವಹಣಾ ಜವಾಬ್ದಾರಿಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಸ್ವಚ್ಛತಾ ಅಭಿಯಾನಕ್ಕೆ ನಿಕಟಪೂರ್ವ ಪಾಲಿಕೆ ಸದಸ್ಯರಾದ ಶ್ವೇತಾ ಪೂಜಾರಿ ಸಹಕರಿಸಿದರು‌. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಹಾಗೂ ‘ಮೀಡಿಯಾ ಮನಸುಗಳು’ ತಂಡದ ಪ್ರಮುಖರಾದ ಶಶಿ ಬೆಳ್ಳಾಯರು, ಗಿರೀಶ್ ಮಣೇಲ್, ಶಿವು ಕುಲಾಲ್, ರಜನ್ ಕುಮಾರ್ ಕಾವೂರು, ರಾಕೇಶ್ ಎಕ್ಕಾರ್ ಹಾಗೂ ಗಣೇಶ್ ದೇವಾಡಿಗ ಪಂಜ ಪಾಲ್ಗೊಂಡು ಕಾರ್ಯನಿರ್ವಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!