ಮಂಜೇಶ್ವರದಲ್ಲಿ ಸಮಗ್ರ ಹೆರಿಗೆ ಚಿಕಿತ್ಸಾ ಸೌಲಭ್ಯ ಕಲ್ಪಿಸಿ; ಆರೋಗ್ಯ ಸಚಿವರಿಗೆ ಎಣ್ಮಕಜೆ ಯುವ ಕಾಂಗ್ರೆಸ್ ಮನವಿ

ಎಣ್ಮಕಜೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಯಂ ಸ್ತ್ರೀರೋಗ ತಜ್ಞರ ಸೇವೆ ಹಾಗೂ ಆಧುನಿಕ ಹೆರಿಗೆ ವಾರ್ಡ್ ಸೇರಿದಂತೆ ಅಗತ್ಯ ಹೆರಿಗೆ ಚಿಕಿತ್ಸಾ ಸೌಲಭ್ಯಗಳನ್ನು ತುರ್ತಾಗಿ ಒದಗಿಸಬೇಕೆಂದು ಆಗ್ರಹಿಸಿ ಭಾರತೀಯ ಯುವ ಕಾಂಗ್ರೆಸ್ ಎಣ್ಮಕಜೆ ಮಂಡಲ ಸಮಿತಿಯು ಆರೋಗ್ಯ ಸಚಿವ ಕೆ. ಮುರಳೀಧರನ್ ಅವರಿಗೆ ಮನವಿ ಸಲ್ಲಿಸಿತು.

ಎಣ್ಮಕಜೆ ಸೇರಿದಂತೆ ಸುಮಾರು ಎಂಟು ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿರುವ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಖಾಯಂ ಸ್ತ್ರೀರೋಗ ತಜ್ಞರು ಹಾಗೂ ಹೆರಿಗೆ ಚಿಕಿತ್ಸೆಗೆ ಅಗತ್ಯವಾದ ಮೂಲಸೌಕರ್ಯಗಳ ಕೊರತೆಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಹೆರಿಗೆ ಸಂಬಂಧಿತ ಚಿಕಿತ್ಸೆ ಹಾಗೂ ತುರ್ತು ವೈದ್ಯಕೀಯ ತಪಾಸಣೆಗಳಿಗಾಗಿ ಗರ್ಭಿಣಿಯರು ಹಲವು ಕಿಲೋಮೀಟರ್ ದೂರ ಪ್ರಯಾಣಿಸಿ ಮಂಗಳೂರು ಅಥವಾ ಕಾಸರಗೋಡು ಜನರಲ್ ಆಸ್ಪತ್ರೆಗಳ ಚಿಕಿತ್ಸಾ ಸೌಲಭ್ಯಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಇದರಿಂದ ಸಾಮಾನ್ಯ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ಹೊರೆ ಹಾಗೂ ಪ್ರಯಾಣದ ತೊಂದರೆ ಉಂಟಾಗುವುದರ ಜೊತೆಗೆ, ತುರ್ತು ಸಂದರ್ಭಗಳಲ್ಲಿ ತಾಯಂದಿರು ಮತ್ತು ನವಜಾತ ಶಿಶುಗಳ ಜೀವಕ್ಕೂ ಅಪಾಯ ಎದುರಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕ್ಷೇತ್ರದ ಪ್ರಮುಖ ಸರ್ಕಾರಿ ಆಸ್ಪತ್ರೆಯಲ್ಲಿ ಖಾಯಂ ಸ್ತ್ರೀರೋಗ ತಜ್ಞರನ್ನು ನೇಮಿಸುವುದು, ಆಧುನಿಕ ಹೆರಿಗೆ ವಾರ್ಡ್ ಹಾಗೂ ಪ್ರಸವ ಕೊಠಡಿಯನ್ನು ಸಜ್ಜುಗೊಳಿಸುವುದು, ತುರ್ತು ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಅಗತ್ಯ ಸೌಲಭ್ಯಗಳು ಮತ್ತು ಅರಿವಳಿಕೆ ತಜ್ಞರ ಸೇವೆಯನ್ನು ಖಚಿತಪಡಿಸುವುದು ಹಾಗೂ ನವಜಾತ ಶಿಶುಗಳ ಆರೈಕೆ ಘಟಕವನ್ನು ಸ್ಥಾಪಿಸುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಮನವಿಯಲ್ಲಿ ಮಂಡಿಸಲಾಗಿದೆ.

ಗಡಿನಾಡು ಪ್ರದೇಶದ ಸಾಮಾನ್ಯ ಕುಟುಂಬಗಳ ತಾಯಂದಿರು ಮತ್ತು ಮಕ್ಕಳ ಆರೋಗ್ಯ ರಕ್ಷಣೆಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಯುವ ಕಾಂಗ್ರೆಸ್ ಒತ್ತಾಯಿಸಿದೆ.

ಭಾರತೀಯ ಯುವ ಕಾಂಗ್ರೆಸ್ ಎಣ್ಮಕಜೆ ಮಂಡಲ ಸಮಿತಿ ಅಧ್ಯಕ್ಷ ಫಾರೂಕ್ ಪಿ. ಎಂ. ಅವರು ಮನವಿ ಸಲ್ಲಿಸಿದರು. ಮನವಿಯ ಪ್ರತಿಯನ್ನು ಕಾಸರಗೋಡು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳಿಗೂ ಸಲ್ಲಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!