ಮಂಜೇಶ್ವರ : ಕಣ್ವತೀರ್ಥದ ಆಂಜನೇಯ ಫ್ರೆಂಡ್ಸ್ ಕ್ಲಬ್ (ರಿ) ಇದರ 25ನೇ ವರ್ಷದ ರಜತ ಮಹೋತ್ಸವ ಸಂಭ್ರಮವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನೆರವೇರಿತು.

2001ರಲ್ಲಿ ಸ್ಥಾಪನೆಯಾದ ಕ್ಲಬ್ನ 25 ವರ್ಷಗಳ ಯಶಸ್ವಿ ಪಯಣದ ಸವಿನೆನಪಿಗಾಗಿ ರಜತ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ವರ್ಷಪೂರ್ತಿ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದರ ಅಂಗವಾಗಿ ನವೆಂಬರ್ 14 ಮತ್ತು 15ರಂದು ಎರಡು ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳು ನಡೆದವು.

ರಜತ ಮಹೋತ್ಸವದ ಅಂಗವಾಗಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ವೇದಮೂರ್ತಿ ಕೆ.ಎಸ್. ಕೃಷ್ಣ ಭಟ್ ಕಣ್ವತೀರ್ಥ ಅವರು ದೀಪ ಪ್ರಜ್ವಲನೆ ನೆರವೇರಿಸಿದರು. ನರಿಂಗಾನ ಕಂಬಳ ಸಮಿತಿಯ ಅಧ್ಯಕ್ಷ ಪ್ರಶಾಂತ್ ಕಾಜವ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷೆ ಎಂ.ಎಲ್. ಅಶ್ವಿನಿ, ಮುಂಬಯಿ ಬಂಟ್ಸ್ ಅಸೋಸಿಯೇಷನ್ನ ಕ್ರೀಡಾ ಕಾರ್ಯಾಧ್ಯಕ್ಷ ಸುರೇಶ್ ಕುಮಾರ್ ಯೆಯ್ಯಾಡಿ, ಕೊಲ್ಯ ಶಾರದೋತ್ಸವ ಸಮಿತಿಯ ಅಧ್ಯಕ್ಷ ಶ್ರೀಕಾಂತ್ ಅರಸುಹಿತ್ಲು, ಉಡುಪಿ ಮಹಿಳಾ ಹಗ್ಗಜಗ್ಗಾಟದ ವ್ಯವಸ್ಥಾಪಕಿ ರೂಪ ಶೆಟ್ಟಿ ಉಡುಪಿ ಹಾಗೂ ಜಪ್ಪಿನಮೊಗರು ಬಂಟರ ಸಂಘದ ಅಧ್ಯಕ್ಷ ಸತ್ಯರಾಜ್ ಶೆಟ್ಟಿ ಮೊಗೇರ್ ಉಪಸ್ಥಿತರಿದ್ದರು.


ರಜತ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಹಗ್ಗಜಗ್ಗಾಟ ಪಂದ್ಯಾಟದಲ್ಲಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಟೌನ್ ವ್ಯಾಪ್ತಿಯ ಪುರುಷರು ಮತ್ತು ಮಹಿಳೆಯರ ತಂಡಗಳು ಭಾಗವಹಿಸಿದ್ದವು.
500 ಕೆ.ಜಿ. ವಿಭಾಗದಲ್ಲಿ 7+1 ಜನರ ತಂಡಗಳ ನಡುವೆ ನಡೆದ ಹಗ್ಗಜಗ್ಗಾಟ ಸ್ಪರ್ಧೆ ಕ್ರೀಡಾಭಿಮಾನಿಗಳಲ್ಲಿ ಅಪಾರ ಉತ್ಸಾಹ ಮೂಡಿಸಿತು.

ಪುರುಷರ ವಿಭಾಗದಲ್ಲಿ ಚಾಮುಂಡೇಶ್ವರಿ ಪೊಯ್ಯೇ, ಪಾವೂರು ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ, ಬಿಎಫ್ಸಿ ಬಗಂಬಿಲ ತಂಡ ದ್ವಿತೀಯ ಸ್ಥಾನವನ್ನು ಗಳಿಸಿತು.
ಮಹಿಳೆಯರ ವಿಭಾಗದಲ್ಲಿ ಶೆಟ್ಟಿ ಫ್ರೆಂಡ್ಸ್ ಬಂಟ್ವಾಳ ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ, ಧೂಮಾವತಿ ಪಡ್ರೆ, ಸುರತ್ಕಲ್ ತಂಡ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿತು.


ಮೊದಲ ದಿನ ನಡೆದ ಧಾರ್ಮಿಕ ಪ್ರವಚನ, ಸಭಾ ಕಾರ್ಯಕ್ರಮ, ಗಣ್ಯರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮಕ್ಕೆ ಮೆರುಗು ನೀಡಿದವು. ಸ್ವರಾಜ್ ಶೆಟ್ಟಿ ನಿರ್ದೇಶನದ ‘ಕಾಡಗಗ್ಗರ’ ನಾಟಕ ಪ್ರದರ್ಶನಗೊಂಡಿತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿ ವೀಕ್ಷಿಸಿದ ಈ ನಾಟಕವು ಪ್ರೇಕ್ಷಕರಿಂದ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.



ಕಳೆದ 25 ವರ್ಷಗಳಿಂದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಆಂಜನೇಯ ಫ್ರೆಂಡ್ಸ್ ಕ್ಲಬ್ನ ಸೇವಾ ಪಯಣಕ್ಕೆ ರಜತ ಮಹೋತ್ಸವವು ಸಾಕ್ಷಿಯಾಯಿತು.
ಒಟ್ಟಿನಲ್ಲಿ ವಿವಿಧ ಭಾಗಗಳ ಕ್ರೀಡಾಪಟುಗಳು, ಗಣ್ಯರು ಹಾಗೂ ಸಾರ್ವಜನಿಕರ ಭಾಗವಹಿಸುವಿಕೆಯೊಂದಿಗೆ ಆಂಜನೇಯ ಫ್ರೆಂಡ್ಸ್ ಕ್ಲಬ್ನ ರಜತ ಮಹೋತ್ಸವ ಸಂಭ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.


