ಕುಂಬಳೆ : ಇಲ್ಲಿಗೆ ಸಮೀಪದ ನಾರಾಯಣಮಂಗಲದಲ್ಲಿ ಫ್ಲಾಟ್ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ ಕುಟುಂಬದವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ನಾರಾಯಣಮಂಗಲ ನಿವಾಸಿ ಮಜೀದ್ (38) ಎಂದು ಗುರುತಿಸಲಾಗಿದೆ.
ನವೆಂಬರ್ 9ರ ಸಂಜೆ ಆರೋಪಿ ಫ್ಲಾಟ್ ಆವರಣದೊಳಗೆ ನುಗ್ಗಿ ಚಾಕುವಿನಿಂದ ದೂರುದಾರ ಅನ್ಸಾರ್ (25) ಅವರ ಕೈಗೆ ಇರಿದಿದ್ದಾನೆ ಎಂದು ದೂರಲಾಗಿದೆ. ಇದನ್ನು ತಡೆಯಲು ಬಂದ ಸಹೋದರ ಅಲ್ತಾಫ್ (22) ಹಾಗೂ ತಾಯಿ ಆಯಿಷಾ (40) ಮೇಲೂ ಹಲ್ಲೆ ನಡೆಸಿ, ಚಾಕು ತೋರಿಸಿ ಬೆದರಿಕೆ ಹಾಕಿದ್ದಾಗಿ ಅನ್ಸಾರ್ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.


