ಕಾಸರಗೋಡು: ಪನಯಾಲ್ ಪೆರಿಯಾಟಡ್ಕ ನೀರಾಟ್ಟಿಯಲ್ಲಿ ನಡೆದ ಚಿನ್ನಾಭರಣ ಮತ್ತು ಹಣ ಕಳವು ಪ್ರಕರಣದ ತನಿಖೆ ವೇಳೆ ಪೊಲೀಸರು ವಿಚಾರಣೆಗೆ ಬರುವಂತೆ ಸೂಚಿಸಿದ್ದ ನೆರೆಮನೆ ನಿವಾಸಿ ಬಾಲಕೃಷ್ಣ ಎಂಬಾತ (58) ನೇಣುಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ.

ಮೂಲತಃ ಮೈಸೂರು ವಿರಾಜಪೇಟೆಯವರಾದ ಇವರು ಪ್ರಸ್ತುತ ನೀರಾಟ್ಟಿ ಕೊಟ್ಟಿಯಿಲ್ನಲ್ಲಿ ವಾಸಿಸುತ್ತಿದ್ದರು.
ಶುಕ್ರವಾರ ಮುಂಜಾನೆ ಧನ್ಯ ಎಂಬುವವರು ವಾಯುವಿಹಾರಕ್ಕೆ ತೆರಳಿದ್ದ ವೇಳೆ ಮನೆಯಿಂದ ಚಿನ್ನಾಭರಣ ಹಾಗೂ 3,000 ರೂಪಾಯಿ ಕಳವಾಗಿತ್ತು.
ಮೀಟರ್ ಬಾಕ್ಸ್ ಮೇಲಿರಿಸಿದ್ದ ಕೀ ಬಳಸಿ ಕಳ್ಳರು ಕೃತ್ಯ ಎಸಗಿದ್ದರು. ಬೇಕಲ ಪೊಲೀಸರು ಶ್ವಾನದಳ ಮತ್ತು ಬೆರಳಚ್ಚು ತಜ್ಞರೊಂದಿಗೆ ತನಿಖೆ ನಡೆಸಿದಾಗ ಶ್ವಾನವು ಬಾಲಕೃಷ್ಣ ಮನೆಯತ್ತ ಸಾಗಿತ್ತು.

ವಿಚಾರಣೆಗೆ ಠಾಣೆಗೆ ಬರುವಂತೆ ಪೊಲೀಸರು ನಿರ್ದೇಶಿಸಿದ್ದರು. ಇದರ ಬೆನ್ನಲ್ಲೇ ಹಿತ್ತಿಲ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವು ಸಂಭವಿಸಿದೆ. ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

