ಮಂಗಳೂರು, ನ.25: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಅತಿ ಹೆಚ್ಚು ಸಾಲ ವಿತರಣೆ ಮಾಡಿದ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ಬ್ಯಾಂಕ್ ಆಫ್ ಬರೋಡಾ 2026ರ ಪ್ರತಿಷ್ಠಿತ ‘ಸ್ವನಿಧಿ ಸಮ್ಮಾನ್ ಪ್ರಶಸ್ತಿ’ಗೆ ಭಾಜನವಾಗಿದೆ.

ದೇಶಾದ್ಯಂತ ಬೀದಿ ಬದಿ ವ್ಯಾಪಾರಿಗಳಿಗೆ ಔಪಚಾರಿಕ ಸಾಲ ಸೌಲಭ್ಯ ಒದಗಿಸಿ ಹಣಕಾಸು ಸೇರ್ಪಡೆಗೆ ಬ್ಯಾಂಕ್ ನೀಡಿರುವ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ಸಚಿವ ತೋಖನ್ ಸಾಹು, ಕಾರ್ಯದರ್ಶಿ ಸತೇಂದ್ರ ಸಿಂಗ್ ಮತ್ತು ಪಿಎಂ ಸ್ವನಿಧಿ ಮಿಷನ್ ನಿರ್ದೇಶಕಿ ಇಶಾ ಕಾಲಿಯಾ ಉಪಸ್ಥಿತರಿದ್ದರು.

ಬ್ಯಾಂಕ್ ಪರವಾಗಿ ಮಹಾ ಪ್ರಬಂಧಕ ರಾಜ್ ಕುಮಾರ್ ಗೋಯೆಲ್, ಎಜಿಎಂ ರಾಕೇಶ್ ಸಿಂಗ್ ಮತ್ತು ಮುಖ್ಯ ಪ್ರಬಂಧಕ ನ್ಯೂಟನ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದರು.ಈ ಸಾಧನೆಯ ಬಗ್ಗೆ ಮಾತನಾಡಿದ ಬ್ಯಾಂಕ್ನ ಎಂಡಿ ಮತ್ತು ಸಿಇಒ ದೇಬದತ್ತ ಚಾಂದ್ ಅವರು, ತಳಮಟ್ಟದ ಸಮುದಾಯಗಳಿಗೆ ಔಪಚಾರಿಕ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸುವ ಬ್ಯಾಂಕಿನ ಬದ್ಧತೆಗೆ ಈ ಗೌರವ ಸಾಕ್ಷಿಯಾಗಿದೆ ಎಂದರು. ಬೀದಿ ಬದಿ ವ್ಯಾಪಾರಿಗಳು ಭಾರತದ ಉದ್ಯಮಶೀಲತಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರಿಗೆ ಸಕಾಲದಲ್ಲಿ ಕೈಗೆಟುಕುವ ಸಾಲ ದೊರೆತರೆ ಜೀವನೋಪಾಯ ಮತ್ತು ವ್ಯವಹಾರ ಬೆಳವಣಿಗೆಗೆ ನೆರವಾಗುತ್ತದೆ ಎಂದು ಅವರು ಹೇಳಿದರು.

ಪಿಎಂ ಸ್ವನಿಧಿ ಯೋಜನೆಯಡಿ ಬ್ಯಾಂಕ್ ಬೀದಿ ಬದಿ ವ್ಯಾಪಾರಿಗಳಿಗೆ ಮೇಲಾಧಾರ ರಹಿತ ದುಡಿಯುವ ಬಂಡವಾಳ ಸಾಲ ನೀಡುತ್ತಿದ್ದು, ಅವರ ವ್ಯವಹಾರ ವಿಸ್ತರಣೆಗೆ ಮತ್ತು ಔಪಚಾರಿಕ ಸಾಲ ಇತಿಹಾಸ ನಿರ್ಮಿಸಲು ನೆರವಾಗುತ್ತಿದೆ.ಹಣಕಾಸು ಸೇರ್ಪಡೆ ಬಲಪಡಿಸುವುದು, ಸೂಕ್ಷ್ಮ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಮತ್ತು ಸಮಗ್ರ ಆರ್ಥಿಕ ಬೆಳವಣಿಗೆಯ ಸರ್ಕಾರದ ದೂರದೃಷ್ಟಿಗೆ ಬೆಂಬಲ ನೀಡುವುದನ್ನು ಬ್ಯಾಂಕ್ ಮುಂದುವರಿಸಲಿದೆ ಎಂದು ಬ್ಯಾಂಕ್ ತಿಳಿಸಿದೆ.

