ಮಂಗಳೂರು: ಬಾಕಿ ಉಳಿಸಿದ ಕನಿಷ್ಟ ಕೂಲಿ ಪಾವತಿಗೆ ಆಗ್ರಹಿಸಿ ಬೀಡಿ ಡಿಪೋ ಗೆ ಮುತ್ತಿಗೆ ಹಾಕಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.2018 ರಿಂದ 2024 ರ ವರಗಿನ ಬಾಕಿ ಉಳಿಸಿರುವ ಕನಿಷ್ಟ ವೇತನ, 2024 ರಲ್ಲಿ ಹೆಚ್ಚಳಗೊಂಡಿರುವ ತುಟ್ಟಿಭತ್ತೆ ಪಾವತಿಗೆ ಒತ್ತಾಯಿಸಿ “ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ” ಆಶ್ರಯದಲ್ಲಿ ಈ ಪ್ರತಿಭಟನೆ ನಡೆಯಿತು.
ಕುಪ್ಪೆಪದವು ಪ್ರದೇಶ ಬೀಡಿ ಕೆಲಸಗಾರರ ಸಂಘ, ಗುರುಪುರ, ಸುರತ್ಕಲ್ ಬೀಡಿ ಲೇಬರ್ ಯೂನಿಯನ್, ವಾಮಂಜೂರು ಪ್ರದೇಶ ಬೀಡಿ ಕೆಲಸಗಾರರ ಸಂಘ ಜಂಟಿಯಾಗಿ ಇದನ್ನು ಆಯೋಜಿಸಿದ್ದವು. ಕೈಕಂಬದಲ್ಲಿರುವ ಬೀಡಿ ಡಿಪೋ ಗೆ ಮುತ್ತಿಗೆ ಹಾಕಲಾಯಿತು. ಬೆಳಿಗ್ಗೆ 10 ಗಂಟೆಗೆ ಆರಂಭಗೊಂಡ ಮುತ್ತಿಗೆ ಪ್ರತಿಭಟನೆ ಸುಮಾರು ಮೂರು ತಾಸು ಮುಂದುವರಿಯಿತು. ಐನೂರಕ್ಕೂ ಹೆಚ್ಚು ಮಹಿಳಾ ಬೀಡಿ ಕಾರ್ಮಿಕರು ಉರಿ ಬಿಸಿಲನ್ನೂ ಲೆಕ್ಕಿಸದೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
2018 ರಲ್ಲಿ ತ್ರಿಪಕ್ಷೀಯ ಮಾತುಕತೆಯ ಆಧಾರದಲ್ಲಿ ಸರಕಾರ ನಲವತ್ತು ರೂಪಾಯಿ ಹೆಚ್ಚಿಸಿ ಕನಿಷ್ಟ ಕೂಲಿ ನಿಗದಿಗೊಳಿಸಿ ಆದೇಶ ಹೊರಡಿಸಿತ್ತು. ಮಾಲಕರು ಈ ಆದೇಶವನ್ನು ಜಾರಿಗೊಳಿಸದೆ ಕಾರ್ಮಿಕರನ್ನು ವಂಚಿಸುತ್ತಾ ಬಂದಿದ್ದಾರೆ ಎಂದು ಪ್ರತಿಭಟನಾನಿರತರು ಆಪಾದಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರಾದ ವಸಂತ ಆಚಾರಿ, ಬಿ ಶೇಖರ್, ಮುನೀರ್ ಕಾಟಿಪಳ್ಳ, ಬಾಲಕೃಷ್ಣ ಶೆಟ್ಟಿ, ಸದಾಶಿವ ದಾಸ್, ಸೀತಾರಾಮ ಬೇರಿಂಜೆ ಮಾತನಾಡಿದರು. ಪ್ರತಿಭಟನೆಯ ನೇತೃತ್ವವನ್ನು ಸ್ಥಳೀಯ ಬೀಡಿ ಮಜೂರರ ಸಂಘದ ಪದಾಧಿಕಾರಿಗಳಾದ ವಸಂತಿ ಕುಪ್ಪೆಪದವು, ನೋಣಯ್ಯ ಗೌಡ, ಯಶೋಧ ಮಳಲಿ, ಭವಾನಿ ವಾಮಂಜೂರು, ಹೊನ್ನಯ್ಯ ಅಮೀನ್ ವಾಮಂಜೂರು, ಕುಸುಮ ಕುಪ್ಪೆಪದವು, ವಾರಿಜ ಕುಪ್ಪೆಪದವು, ಅಶೋಕ ವಾಮಂಜೂರು ಮತ್ತಿತರರು ವಹಿಸಿದ್ದರು.