ಮಂಗಳೂರು: ಡಿಸೆಂಬರ್ 9, 2022 ರಂದು ಉದ್ಘಾಟನೆಗೊಂಡ ಕುಷ್ಮಾ ಸಂಘವು ಕರ್ನಾಟಕ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದೆ . ಪದವಿ ಪೂರ್ವ ಶಿಕ್ಷಣ ವ್ಯವಸ್ಥೆಯಲ್ಲಿ ಕಳೆದ 03 ವರ್ಷಗಳಲ್ಲಿ ಹಲವಾರು ಮಾರ್ಪಾಡುಗಳು ಮತ್ತು ಬದಲಾವಣೆಗಳನ್ನು ಸರಕಾರದೊಂದಿಗೆ ಸೇರಿ ಬಗೆಹರಿಸಿರುತ್ತದೆ . ಅದರಂತೆ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯನ್ನು ರಚಿಸಿ ಅದರ ಪದಗ್ರಹಣ ಕಾರ್ಯಕ್ರಮವು ಅಕ್ಟೋಬರ್ 19 ರಂದು ಬೆಳಿಗ್ಗೆ 11.00 ಗಂಟೆಗೆ ಕೊಡಿಯಾಲ್ ಬೈಲ್‌ನ ಹೋಟೇಲ್ ಓಶಿಯನ್ ಪರ್ಲ್ ನಲ್ಲಿ ನಡೆಯಲಿದೆ ಎಂದು ದ . ಕ ಜಿಲ್ಲಾ ಕುಷ್ಮಾ ನಿಯೋಜಿತ ಅಧ್ಯಕ್ಷರಾದ ಯುವರಾಜ್ ಜೈನ್ ಹೇಳಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕುಷ್ಮಾ ಪದಗ್ರಹಣದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ , ಕುಷ್ಮಾ ರಾಜ್ಯ ಸಮಿತಿಯ ನಿರ್ದೇಶನದಂತೆ ಈಗಾಗಲೇ ಬೆಂಗಳೂರು ಉತ್ತರ , ಬೆಂಗಳೂರು ದಕ್ಷಿಣ , ಮೈಸೂರು , ಹಾವೇರಿ , ದಾವಣಗೆರೆ ಜಿಲ್ಲೆಗಳಲ್ಲಿ ಈಗಗಾಗಲೇ ಕುಷ್ಮಾ ಜಿಲ್ಲಾ ಸಮಿತಿಯನ್ನು ರಚಿಸಿದೆ ಎಂದರು .
ಪದಗ್ರಹಣ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ನ ಮಾನ್ಯ ಶಾಸಕರಾದ ಭೋಜೆ ಗೌಡ, ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೆಶಕರಾದ ರಾಜೇಶ್ವರಿ ಹೆಚ್ ಹೆಚ್ , ರಾಜ್ಯ ಕುಷ್ಮಾ ಸಮಿತಿಯ ಗೌರವ ಅಧ್ಯಕ್ಷರಾದ ಕೆ.ರಾಧಾಕೃಷ್ಣ ಶೆಣೈ, ಡಾ.ಎಂ.ಬಿ ಪುರಾಣಿಕ್, ಡಾ.ಕೆ.ಸಿ. ನಾಯಕ್ , ಕಾರ್ಯದರ್ಶಿಗಳಾದ ಪ್ರೊ.ನರೇಂದ್ರ ಎಲ್.ನಾಯಕ್ ಇವರು ಮುಖ್ಯ ಅಥಿತಿಯಾಗಿ ಭಾಗವಹಿಸಲಿದ್ದು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಷ್ಮಾ ರಾಜ್ಯ ಸಮಿತಿಯ ಅಧ್ಯಕ್ಷರಾದ ಡಾ.ಎಂ ಮೋಹನ್ ಆಳ್ವ ವಹಿಸಿಕೊಳ್ಳಲಿರುವರು ಎಂದರು .ಈ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಕರ್ನಾಟಕ ಅನುದಾನರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಅಧ್ಯಕ್ಷರು, ಸಂಚಾಲಕರು, ಕಾರ್ಯದರ್ಶಿ, ಟ್ರಸ್ಟಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿಕೊಂಡರು .
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಮುಖ್ಯಸ್ಥರಾದ ಡಾ ಮಂಜುನಾಥ್ ಎಸ್ ರೇವಣ್ಕರ್ , ರವೀಂದ್ರ ಪಿ, ರಮೇಶ್ ಕೆ, ಕರುಣಾಕರ ಬಳ್ಳೂರು ಉಪಸ್ಥಿತರಿದ್ದರು .