ಮಂಗಳೂರು: ಅಖಿಲ ಭಾರತ ಬಿಲ್ಲವರ ಯೂನಿಯನ್, ಬ್ರಹ್ಮಶ್ರೀ ನಾರಾಯಣ ಮಾರ್ಗದರ್ಶನದೊಂದಿಗೆ ಗುರುಗಳ ಆಶೀರ್ವಾದದೊಂದಿದೆ 1912 ರಲ್ಲಿ ಕುದ್ರೋಳಿಯಲ್ಲಿ ಸ್ಥಾಪನೆಯಾಗಿರುವ ಸಮಾಜದ ಅತ್ಯಂತ ಹಿರಿತನದ ಮತ್ತು ಮಾತೃ ಸಂಸ್ಥೆಯು ಕಳೆದ 113 ವರ್ಷಗಳಿಂದ ಅನೇಕ ಕಾರ್ಯಚಟುವಟಿಕೆಯನ್ನು ನಡೆಸುಕೊಂಡು ಬರುತ್ತಿದೆ . ಈಗಾಗಲೇ ಸಮಾಜಕ್ಕೆ ಶಕ್ತಿ ತುಂಬುವಂತಹ ಪ್ರಥಮ ಬಿಲ್ಲವ ಸಮ್ಮೇಳನ, ಪ್ರಥಮ ಬಿಲ್ಲವ ಮಹಿಳಾ ಸಮ್ಮೇಳನ, ಪ್ರಥಮ ಬಿಲ್ಲವ ಮಹಿಳಾ ಹಾಸ್ಟೆಲ್ ಗಳ ಮೂಲಕ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಸಂಘವು ಈ ಭಾರಿ ಪ್ರಪ್ರಥಮ ಜಾಗತಿಕ ಬಿಲ್ಲವರ ಕ್ರೀಡೋತ್ಸವ ಕಾರ್ಯಕ್ರಮವನ್ನು 2026ರ ಜನವರಿ 18 ರಂದು ಸರ್ವ ಬಿಲ್ಲವ ಸಂಘಗಳ ಸಹಕಾರದೊಂದಿಗೆ ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಈಗಾಗಲೇ ಕ್ರೀಡಾಕೂಟದ ಪೂರ್ವಭಾವಿಯಾಗಿ ಬಿಲ್ಲವ ಸಂಘಗಳ ಪ್ರತಿನಿಧಿಗಳ, ಸಮಾಜದ ಪ್ರಮುಖರ ಸಭೆಯು ನಡೆದಿದ್ದು ಅವರ ಸಲಹೆ ಸೂಚನೆಗಳನ್ನು ಪಡೆಯಲಾಗಿದೆ. ಕ್ರೀಡೋತ್ಸವದ ಲೋಗೋ ಬಿಡುಗಡೆ ಕಾರ್ಯಕ್ರಮವು ಕನ್ನಡದ ಖ್ಯಾತ ನಟ, ಕರುನಾಡ ಚಕ್ರವರ್ತಿ ಬಿರುದಾಂಕಿತ ಡಾ.ಶಿವರಾಜ್ ಕುಮಾರ್ ರವರ ಹಸ್ತದಲ್ಲಿ ಬೆಂಗಳೂರಿನಲ್ಲಿ ನಡೆದಿರುತ್ತದೆ ಎಂದರು.ಕ್ರೀಡೋತ್ಸವದಲ್ಲಿ ಸಮಾಜದ ಭಾಂಧವರಿಗಾಗಿ ಪುರುಷರಿಗೆ ಕಬ್ಬಡ್ಡಿ ಮತ್ತು ವಾಲಿಬಾಲ್ ಮಹಿಳೆಯರಿಗೆ ಕಬ್ಬಡ್ಡಿ ಮತ್ತು ತ್ರೋಬಾಲ್ ಪಂದ್ಯಾಟವು ನಡೆಯಲಿದೆ. ಪಂದ್ಯಾಟದಲ್ಲಿ ಭಾಗವಹಿಸುವ ಸಮಾಜದ ತಂಡಗಳು ತಮ್ಮ ಹೆಸರನ್ನು ಅಕ್ಟೋಬರ್ 27 ರಿಂದ ನವೆಂಬರ್ 30 ರ ಒಳಗೆ ಆನ್ಲೈನ್ ನಲ್ಲಿ ನಿಯಮ, ನಿಬಂಧನೆಗಳಿಗೆ ಅನುಸಾರವಾಗಿ ನೋಂದಾಯಿಬೇಕೆಂದು ಕೇಳಿಕೊಂಡರು.
ಪುರುಷರ ಕಬ್ಬಡ್ಡಿಯಲ್ಲಿ ಮೊದಲು ನೋಂದಾಯಿಸಿದ 24, ವಾಲಿಬಾಲ್ ನಲ್ಲಿ 16, ಮಹಿಳೆಯರ ಕಬ್ಬಡ್ಡಿ ಯಲ್ಲಿ 16, ತ್ರೋಬಾಲ್ ನಲ್ಲಿ 16 ತಂಡಗಳಿಗೆ ಭಾಗವಹಿಸಲು ಮಾತ್ರ ಅವಕಾಶ ಇರಲಿದೆ . ವಿಜೇತ ತಂಡಗಳಲ್ಲಿ ಪುರುಷರ ಕಬ್ಬಡ್ಡಿಯಲ್ಲಿ ಪ್ರಥಮ: 2 ಲಕ್ಷ ರೂಪಾಯಿ ನಗದು ಮತ್ತು ಟ್ರೋಫಿ, ದ್ವಿತೀಯ: 1 ಲಕ್ಷ ರೂಪಾಯಿ ಮತ್ತು ಟ್ರೋಫಿ, ತೃತೀಯ: 50 ಸಾವಿರ ಮತ್ತು ಟ್ರೋಫಿ ಚತುರ್ಥ 25 ಸಾವಿರ ಮತ್ತು ಟ್ರೋಫಿ, ಮಹಿಳಾ ಕಬ್ಬಡ್ಡಿ. ತ್ರೋಬಾಲ್ ಮತ್ತು ಪುರುಷರ ವಾಲಿಬಾಲ್ ಗೆ ಅನುಕ್ರಮವಾಗಿ ಪ್ರಥಮ: 1 ಲಕ್ಷ ರೂಪಾಯಿ ಮತ್ತು ಟ್ರೋಫಿ, ದ್ವಿತೀಯ: 50 ಸಾವಿರ ರೂಪಾಯಿ ಮತ್ತು ಟ್ರೋಫಿ, ತೃತೀಯ: 25 ಸಾವಿರ ಮತ್ತು ಟ್ರೋಫಿ, ಚತುರ್ಥ: 10 ಸಾವಿರ ರೂಪಾಯಿ ಮತ್ತು ಟ್ರೋಫಿ ಮತ್ತು ವೈಯಕ್ತಿಕ ಸಾಧನೆಗಳಿಗೆ ಬಹುಮಾನವನ್ನು ನೀಡಲಾಗುವುದೆಂದು ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಇದರ ಉಪಾಧ್ಯಕ್ಷರಾದ ಲೋಕನಾಥ್ ಅಮೀನ್ , ಕೆ.ಟಿ.ಸುವರ್ಣ , ಪ್ರಧಾನ ಕಾರ್ಯದರ್ಶಿಗಳಾದ ಜೀವನ್ ಕುಮಾರ್ ತೊಕ್ಕೊಟು , ಕ್ರೀಡಾ ಪ್ರಧಾನ ಸಂಚಾಲಕರಾದ , ಸದಾನಂದ ಪೂಜಾರಿ , ಮಹಿಳಾ ಸಂಘದ ಅಧ್ಯಕ್ಷರಾದ ಸುಮಲತಾ ಎನ್.ಸುವರ್ಣ ಉಪಸ್ಥಿತತರಿದ್ದರು .