ಹೈದರಾಬಾದ್ : ಮಕ್ಕಾದಿಂದ ಮದೀನಾಗೆ ತೆರಳುತ್ತಿದ್ದ ಉಮ್ರಾ ಯಾತ್ರಿಕರ ಬಸ್ ಡೀಸೆಲ್ ಟ್ಯಾಂಕರ್ಗೆ ಡಿಕ್ಕಿ ಹೊಡೆದ ಭೀಕರ ದುರಂತದಲ್ಲಿ 42 ಮಂದಿ ಭಾರತೀಯ ಯಾತ್ರಿಕರು ಮೃತಪಟ್ಟಿದ್ದಾರೆ. ಮುಫ್ರಿಹತ್ ಪ್ರದೇಶದ ಬಳಿ ಭಾರತೀಯ ಕಾಲಮಾನ ಬೆಳಗಿನ 1.30ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ
ದುರಂತಕ್ಕೆ ಬಲಿಯಾದವರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ. ಮೃತಪಟ್ಟವರೆಲ್ಲರೂ ಹೈದರಾಬಾದ್ನವರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದುರಂತದ ವೇಳೆಗೆ ಬಸ್ನಲ್ಲಿ ಸುಮಾರು 20 ಮಹಿಳೆಯರು, 11 ಮಕ್ಕಳು ಇದ್ದರು ಎಂದು ಮೂಲಗಳು ತಿಳಿಸಿವೆ. ಮಕ್ಕಾದಲ್ಲಿ ಉಮ್ರಾ ವಿಧಿಗಳನ್ನು ನೆರವೇರಿಸಿ ಮದೀನಾಕ್ಕೆ ತೆರಳುತ್ತಿದ್ದ ಯಾತ್ರಿಕರಲ್ಲಿ ಅನೇಕರು ಡಿಕ್ಕಿ ಸಂಭವಿಸಿದ ಸಂದರ್ಭ ನಿದ್ರಿಸುತ್ತಿದ್ದರು ಎಂದು ತಿಳಿದುಬಂದಿದೆ. ಡಿಕ್ಕಿಯ ನಂತರ ಬಸ್ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯ ಮೂಲಗಳು ಸೂಚಿಸಿವೆ.