ಮಂಗಳೂರು: ಈಡಿಗ , ಬಿಲ್ಲವ, ನಾಮಧಾರಿ ಧೀವರ ಸೇರಿದಂತೆ 26 ಪಂಗಡಗಳ ದೀರ್ಘಕಾಲದ ಬೇಡಿಕೆಗಳ ಈಡೇರಿಕೆಗಾಗಿ 2026ರ ಜನವರಿ 6 ರಂದು ಶಕ್ತಿಪೀಠ ಕರದಾಳದಿಂದ ಫೆಬ್ರವರಿ 12 ಬೆಂಗಳೂರ ತನಕ 41 ದಿನಗಳ 700 ಕಿಲೋ ಮೀಟರ್ ಉದ್ದದ ಐತಿಹಾಸಿಕ ಪಾದಯಾತ್ರೆ ಕೈಗೊಳ್ಳುವುದಾಗಿ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಡಾ. ಶ್ರೀ ಶ್ರೀ ಶ್ರೀ ಪಣವಾನಂದ ಸ್ವಾಮೀಜಿ ತಿಳಿಸಿದ್ದಾರೆ .ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಸಮುದಾಯದ ಹಕ್ಕುಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಿ, ಈಡಿಗ-ಬಿಲ್ಲವ-ನಾಮಧಾರಿ-ಧೀವರ ಸೇರಿದಂತೆ 26 ಪಂಗಡಗಳ ಮಂದಿ ಒಗ್ಗಟ್ಟಿನಿಂದ ಈ ಹೋರಾಟಕ್ಕೆ ಬೆಂಬಲಿಸಬೇಕೆಂದು ಕೋರಿದರು.
ಸಮುದಾಯದ ಏಳಿಗೆ ಮತ್ತು ಸಮಾಜಕೇಂದ್ರಿತ ಯೋಜನೆಗಳ ಜಾರಿಗೆ ಅಗತ್ಯವಿರುವ ಅನೇಕ ವಿಷಯಗಳು ಸರ್ಕಾರದ ಮಟ್ಟದಲ್ಲಿ ಬಾಕಿಯಾಗಿವೆ ಎಂದು ಅವರು ದೂರಿದರು. ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂಪಾಯಿ ಬಿಡುಗಡೆ ಮಾಡುವುದು, ಕಲ್ಯಾಣ-ಕರ್ನಾಟಕ ಭಾಗದಲ್ಲಿ ಕುಲಕಸುಬು ಕಳೆದುಕೊಂಡ ಈಡಿಗರಿಗೆ ಭೂಮಿ ಮಂಜೂರು ಸಮುದಾಯವನ್ನು 2A ಯಿಂದ ST ಮೀಸಲಾತಿಗೆ ವರ್ಗಾವಣೆ ಮಾಡಲು ಶಿಫಾರಸು, ಹಾಗೂ ಬೆಂಗಳೂರಿನ ವಿಧಾನಸೌಧ ಎದುರು ನಾರಾಯಣಗುರುರ ಪುತ್ತಳಿ ಸ್ಥಾಪನೆ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಅವರು ಉಲ್ಲೇಖಿಸಿದರು.
ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನ ವಿರುದ್ಧ ಹೂಡಿರುವ ಮೊಕ್ಕದ್ದಮೆಗಳನ್ನು ಹಿಂತೆಗೆದು ದೇವಸ್ಥಾನಕ್ಕೆ ಭದ್ರತೆ ಒದಗಿಸಬೇಕು ಎಂಬ ಬೇಡಿಕೆಗೂ ಸ್ವಾಮೀಜಿ ಪ್ರಾಮುಖ್ಯತೆ ನೀಡಿದರು. ಕೋಟಿಚೆನ್ನಯ್ಯರ ಜನ್ಮಸ್ಥಳ ಮತ್ತು ಐಕ್ಯಸ್ಥಳ ಅಭಿವೃದ್ಧಿಗೆ ಪ್ರತಿ ಬಜೆಟ್‌ನಲ್ಲಿ ಸಮರ್ಪಕ ಅನುದಾನ ನೀಡುವುದು ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ನಾರಾಯಣಗುರು ಅಧ್ಯಯನ ಪೀಠ ಸ್ಥಾಪನೆ, ಹಾಗೂ ಹೆಂಡದ ಮಾರಯ್ಯ ಜಯಂತಿಯನ್ನು ಅಧಿಕೃತವಾಗಿ ಆಚರಿಸುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಿದ್ದಾರೆ ಈ ರೀತಿ ಒಟ್ಟು 14 ಮನವಿಯನ್ನು ಸಲ್ಲಿಸುವುದಾಗಿ ತಿಳಿಸಿದರು
ಈ ಐತಿಹಾಸಿಕ ಪಾದಯಾತ್ರೆಗೆ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠ, ಆರ್ಯ ಈಡಿಗ ಸಂಘ, ಕಲ್ಯಾಣ-ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ, ರಾಷ್ಟ್ರೀಯ ಈಡಿಗ ಮಹಾಮಂಡಳಿ ಸೇರಿದಂತೆ 26 ಪಂಗಡಗಳ ಮುಖಂಡರು ಮತ್ತು ಸದಸ್ಯರು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ ಎಂದರು .ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಬಿಲ್ಲವ ಈಡಿಗ ಮಹಾಮಂಡಳಿಯ ರಾಜ್ಯ ಉಪಾಧ್ಯಕ್ಷರಾದ ನವೀನ್ ಕುಮಾರ್ ಉಪಸ್ಥಿತರಿದ್ದರು.