ಮಂಗಳೂರು : ಆರೋಹಣಂ ಸಂಗೀತ ಶಾಲೆಯ ದಶಮಾನೋತ್ಸವದ ಅಂಗವಾಗಿ, ಎರಡು ದಿನಗಳ ಸಂಗೀತಮಹೋತ್ಸವ ‘ದಶಕ ಸಮರ್ಪಣಂ’ ಕಾರ್ಯಕ್ರಮವು ನವೆಂಬರ್ 22 ಮತ್ತು 23 ರಂದು ಕೊಡಿಯಾಲ್ ಬೈಲ್ ನ ಶಾರದಾ ವಿದ್ಯಾಲಯದ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಸಂಘಟನೆಯ ಉಪಾಧ್ಯಕ್ಷರಾದ ಮಂಜುನಾಥ್ ಭಟ್ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ನವೆಂಬರ್ 22 ಶನಿವಾರದ ಕಾರ್ಯಕ್ರಮವು ಮಧ್ಯಾಹ್ನ 1.30ಕ್ಕೆ ಶಾರದಾ ವಿದ್ಯಾಲಯದ ಪ್ರಾಚಾರ್ಯರಾದ ದಯಾನಂದ ಕಟೀಲ್, ಇವರ ದೀಪಪ್ರಜ್ವಲನದೊಂದಿಗೆ ಆರಂಭವಾಗಿ ತದನಂತರ ವಿದ್ಯಾರ್ಥಿಗಳ ಸಂಗೀತ ಪ್ರದರ್ಶನ, ‘ಪಲ್ಲವಿ ಪರ್ವದ ಅಂಗವಾಗಿ ಹಿರಿಯ ವಿದ್ಯಾರ್ಥಿಗಳ ರಾಗಂ-ತಾನಂ -ಪಲ್ಲವಿ ಪ್ರದರ್ಶನಗಳು ನಡೆಯಲಿವೆ. ಸಂಜೆ 6.00ಕ್ಕೆ ವೀಣಾ ವೇಣು ವಯಲಿನ್-ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು .
ನವೆಂಬರ್ 23 ರಂದು ಬೆಳಿಗ್ಗೆ 8.30ಕ್ಕೆ ವಿದ್ಯಾರ್ಥಿಗಳ ಗಾನ ಪ್ರದರ್ಶನಗಳಿಂದ ಕಾರ್ಯಕ್ರಮ ಆರಂಭಗೊಳ್ಳಲಿದ್ದು ನಂತರ ‘ಸ್ವರಾರೋಹಣಂ ಕಾರ್ಯಕ್ರಮವನ್ನು ಕಲೈಮಾಮಣಿ ಡಾ. ಆರ್. ಸೂರ್ಯಪ್ರಕಾಶ್ ಇವರು ನಿರ್ದೇಶಿಸಲಿದ್ದಾರೆ. ಸಂಜೆ ಸಭಾಕಾರ್ಯಕ್ರಮದಲ್ಲಿ ಪದ್ಮಶ್ರೀ ಡಾ. ಗಿರೀಶ್ ಭರದ್ವಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಅತಿಥಿಗಳಾಗಿ ಗಣೇಶ್ ನಾಯಕ್, ಮಂಜುನಾಥ್ ಭಟ್, ಆದಿತ್ಯ ಕಲ್ಲುರಾಯ (CEO, The Web People) ಉಪಸ್ಥಿತರಿರುವರು . ಸಭಾಧ್ಯಕ್ಷತೆಯನ್ನು ಆರೋಹಣಂ ಸಂಗೀತ ಶಾಲೆಯ ನಿರ್ದೇಶಕರಾದ ಡಾ.ಅನೀಶ್ ವಿ. ಭಟ್ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ‘ಸ್ವರಾ-ಸಿಂಕ್’ ಎಂಬ ಹೊಸ ದೇವರನಾಮ ಪ್ರೀ- ರೆಕಾರ್ಡೆಡ್ ಕೋರ್ಸ್ ನ ಅನಾವರಣ ಹಾಗೂ ಸಂಸ್ಥೆಯ ನೂತನ ವೆಬ್‌ಸೈಟ್ ಬಿಡುಗಡೆಗೊಳ್ಳಲಿದೆ. ಸಂಜೆ ಕಲೈಮಾಮಣಿ ಡಾ. ಆರ್. ಸೂರ್ಯಪ್ರಕಾಶ್ ಇವರಿಂದ ಪ್ರಮುಖ ಕಚೇರಿ ನಡೆಯಲಿದೆ ಎಂದರು .
ಈ ಕಾರ್ಯಕ್ರಮವನ್ನು ಆರೋಹಣಂ ಸಂಗೀತ ಶಾಲೆಯ ನಿರ್ದೇಶಕರಾದ ಡಾ.ಅನೀಶ್ ವಿ. ಭಟ್, ದಶಕ ಸಮರ್ಪಣಂ ಸಮಿತಿಯ ಅಧ್ಯಕ್ಷ ಬಿ. ಗಣೇಶ್ ನಾಯಕ್, ಉಪಾಧ್ಯಕ್ಷರಾದ ಶ್ರೀ ಮಂಜುನಾಥ್ ಭಟ್, ವಿಶ್ವನಾಥ ಭಟ್, ಯಮುನಾ ಭಾಗವತ್, ಕಾರ್ಯದರ್ಶಿ ರಕ್ಷಾ ಎ. ಆರ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದೆ ಎಂದರು .ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ಗಣೇಶ್ ನಾಯಕ್ , ಚಿನ್ಮಯ್ ಭಟ್ , ಹವ್ಯಶ್ರಿ , ಸಹನಾ ಭಟ್ ಉಪಸ್ಥಿತತರಿದ್ದರು .