ಮಂಜೇಶ್ವರ : ವಿದ್ಯಾಭ್ಯಾಸ ರಂಗದಲ್ಲಿ ತನ್ನದೇ ಆದ ಶೈಲಿಯಲ್ಲಿ ಈಗಾಗಲೇ ಜನಮನ್ನನೆಯನ್ನು ಪಡೆದಿರುವ ಮಣಿಮುಂಡ ಆಂಗ್ಲ ಮಾಧ್ಯಮ ಶಾಲೆಯ 2025-26 ನೇ ಶ್ರೈಕ್ಷಣಿಕ ವರ್ಷದ ಶಾಲಾ ವಾರ್ಷಿಕ ಸ್ನೇಹ ಸಮ್ಮಿಲನ ಸಡಗರ ಸಂಭ್ರಮದೊಂದಿಗೆ ಬೇಕೂರು ಸೀ ಪ್ಯಾಲೇಸ್ ಸಭಾಂಗಣದಲ್ಲಿ ಬಹಳ ಅದ್ದೂರಿಯಾಗಿ ನೆರವೇರಿತು. ತನ್ನದೇ ಆದ ಶೈಲಿಯಲ್ಲಿ ವಿದ್ಯಾರ್ಥಿಗಳನ್ನು ವಿಶ್ವಮಾನವರಾಗಿ ಹಾಗೂ ದೇಶದ ಉತ್ತಮ ಪ್ರಜೆಯನ್ನಾಗಿ ಸಿದ್ಧಪಡಿಸುವ ಗುರಿಯನ್ನು ಇಟ್ಟುಕೊಂಡಿರುವ ಮಹತ್ವಾಕಾಂಕ್ಷಿ ಶಾಲೆಯಲ್ಲೊಂದಾಗಿದೆ ಮಣಿಮುಂಡ ಆಂಗ್ಲ ಮಾಧ್ಯಮ ಶಾಲೆ.
1977ರ ಕಾಲದಲ್ಲಿ ಮಕ್ಕಳಿಗಾಗಿ ನರ್ಸರಿ ಹಾಗೂ ಮಹಿಳೆಯರಿಗಾಗಿ ಹೊಲಿಗೆ ತರಗತಿಗಳೊಂದಿಗೆ ತನ್ನ ಸೇವಾ ಪ್ರಯಾಣವನ್ನು ಆರಂಭಿಸಿದ ಈ ತಂಡ 2007 ರಲ್ಲಿ ಸ್ಥಳೀಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ದೀರ್ಘಕಾಲದ ಕನಸನ್ನು ನನಸುಗೊಳಿಸಲು ಮೂಸ ಹಾಜಿ ಆಲುವಾಯಿ ಹಾಗೂ ಮೊಹಮ್ಮದ್ ಅಝೀಂ ಮಣಿ ಮುಂಡ ರವರ ನೇತೃತ್ವ ಹಾಗೂ ಉದ್ಯಮಿ ಅಬ್ದುಲ್ ಹಮೀದ್ ರವರ ಆತ್ಮಾರ್ಥ ಬೆಂಬಲದೊಂದಿಗೆ ಮಣಿಮುಂಡ ಆಂಗ್ಲ ಮಾಧ್ಯಮ ಶಾಲೆಯನ್ನು ಸ್ಥಾಪಿಸಿದೆ.ಈಗಾಗಲೇ ಈ ಶಾಲೆಯಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಗುರುತಿಸಿಕೊಂಡಿರುವುದು ಈ ಶಾಲೆಯ ವಿಶೇಷತೆಯಾಗಿದೆ.
ಇಂದು ಈ ಶಿಕ್ಷಣ ಕೇಂದ್ರ ಹೆಮ್ಮರವಾಗಿ ಬೆಳೆದು ನಾಡಿನ ಜನತೆಗೆ ನೆರಳಾಗಿದೆ. ಆರ್ಥಿಕ ಅಸಮರ್ಥತೆ ಹಾಗೂ ಸರಿಯಾದ ಸಾರಿಗೆ ಸೌಲಭ್ಯಗಳ ಕೊರತೆಗಳಂತಹ ಸವಾಲುಗಳ ಮಧ್ಯೆ ಕೂಡಾ 2020 ರಲ್ಲಿ ಶಾಲೆಯ ಮೊದಲ ಹತ್ತನೇ ತರಗತಿ ಬ್ಯಾಚ್ ಶ್ಲಾಘನೀಯ ಸಾಧನೆ ಮಾಡಿದೆ. ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಅನೇಕ ವಿದ್ಯಾರ್ಥಿಗಳು ಪದವಿ ಶಿಕ್ಷಣ ಪೂರ್ಣಗೊಳಿಸಿ ಯು ಪಿ ಎಸ್ ಸಿ, ಸಿ ಎ, ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ಪ್ಯಾರಾಮೆಡಿಕಲ್ ಕೋರ್ಸ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಶಾಲೆ ಹಲವು ರೀತಿಯ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಸೂಕ್ತವಾದ ರಸ್ತೆಯ ವ್ಯವಸ್ಥೆ ಕೂಡಾ ಇಲ್ಲದ ಸ್ಥಳದಲ್ಲಿ ತಲೆ ಎತ್ತಿರುವ ಹಿನ್ನೆಲೆಯಲ್ಲಿ ಹಲವು ರೀತಿಯ ವ್ಯವಸ್ಥೆಗಳು ದಾನಿಗಳಿಂದ ಒಲಿದು ಬರಬೇಕಾಗಿದೆ
ಶಾಲಾ ವಾರ್ಷಿಕೋತ್ಸವದ ಸುದಿನದಂದು ಶಾಲಾ ವಿದ್ಯಾರ್ಥಿಗಳು, ರಕ್ಷಕ ಶಿಕ್ಷಕ ಸಂಘ ಆಡಳಿತ ಮಂಡಳಿ ಈ ಆಚರಣೆಯನ್ನು ಉತ್ಸಾಹಭರಿತಗೊಳಿಸಿ ಹಬ್ಬವನ್ನಾಗಿಯೇ ಆಚರಿಸುವ ದೃಶ್ಯ ಕಂಡು ಬಂತು.ಶಾಲಾ ಆಡಳಿತಾಧಿಕಾರಿ ಮೊಹಮ್ಮದ್ ಅಝೀಂ ಮಣಿಮುಂಡ ರವರ ಅಧ್ಯಕ್ಷತೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವವನ್ನು ಪ್ರತಿಷ್ಠಿತ ಬರಹಗಾರ ಇಸ್ಮತ್ ಪಜೀರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ( Byt1) ಇಸ್ಲಾಂ ಧರ್ಮವು ಜ್ಞಾನಕ್ಕೆ ನೀಡಿರುವ ಸ್ಥಾನ ಅಪಾರ. ಇಸ್ಲಾಂನಲ್ಲಿ ಶಿಕ್ಷಣವು ಕೇವಲ ವ್ಯಕ್ತಿಯನ್ನು ಮಾತ್ರವಲ್ಲ, ಸಂಪೂರ್ಣ ಸಮಾಜವನ್ನು ಬೆಳಗಿಸುವ ದೀಪದಂತೆ. ಜ್ಞಾನದಿಂದಲೇ ನಾವು ಅಜ್ಞಾನವನ್ನು ದೂರ ಮಾಡಬಹುದು, ನ್ಯಾಯ ಮತ್ತು ಸಮಾನತೆಯ ಮಾರ್ಗದಲ್ಲಿ ಸಾಗಬಹುದು ಎಂದು ಹೇಳಿ ಸಮಾರಂಭಕ್ಕೆ ಶುಭ ಹಾರೈಸಿದರು.
ಬಳಿಕ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಆಡಳಿತಾಧಿಕಾರಿ ಮೊಹಮ್ಮದ್ ಅಝೀಂ ಮಣಿಮುಂಡ ರವರು ಮಾತನಾಡಿ (byt 2): ಈ ವಿದ್ಯಾಸಂಸ್ಥೆ ಲಾಭದ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆಯಲ್ಲ.ಇದನ್ನು ನಿರ್ಮಿಸಿದವರ ಉದ್ದೇಶ ಹಣಾರ್ಜನೆ ಅಲ್ಲ, ಜ್ಞಾನಾರ್ಜನೆ. ಇಲ್ಲಿ ಶಿಕ್ಷಣ ಸೇವೆ, ಮೌಲ್ಯಗಳು ಮತ್ತು ಸಮಾಜದ ಪ್ರಗತಿಯನ್ನು ಮೊದಲ ಆದ್ಯತೆಯಾಗಿಟ್ಟಿದ್ದೇವೆ. ಪ್ರತಿ ವಿದ್ಯಾರ್ಥಿಯ ಬೆಳವಣಿಗೆ, ಅವರ ಭವಿಷ್ಯದ ನಿರ್ಮಾಣ ಹಾಗೂ ಅವರಲ್ಲಿರುವ ಸಾಮರ್ಥ್ಯವನ್ನು ಅರಳಿಸುವುದು — ಇದೇ ನಮ್ಮ ನಂಬಿಕೆ, ಇದೇ ನಮ್ಮ ಧ್ಯೇಯ. ಎಂದು ಹೇಳಿ ಸಮಾರಂಭಕ್ಕೆ ಆಗಮಿಸಿದ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿದರು.
ಬಳಿಕ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಸರಗೋಡು ಸಾಹಿತ್ಯ ವೇದಿಕೆಯ ಉಪಾಧ್ಯಕ್ಷ ಅಶ್ರಫ್ ಅಲಿ ಚೇರಂಗೈ ಯವರು ಮಾತನಾಡಿ (Byt 3) ವಿದ್ಯಾಭ್ಯಾಸವು ಕೇವಲ ಪುಸ್ತಕದ ಜ್ಞಾನವಲ್ಲ — ಅದು ನಮ್ಮ ಜೀವನದ ದಿಕ್ಕು ತೋರಿಸುವ ದೀಪ. ಇಂದು ನಾವು ಪಡೆಯುವ ಶಿಕ್ಷಣ, ನಾಳೆಯ ನಮ್ಮ ಸಮಾಜದ ಗುಣಮಟ್ಟವನ್ನು ನಿರ್ಧರಿಸುತ್ತದೆ. ಜ್ಞಾನವು ಮಾನವನನ್ನು ಬದಲಿಸುತ್ತದೆ; ಬದಲಾದ ಮನುಷ್ಯ ಸಮಾಜವನ್ನು ಬದಲಿಸುತ್ತಾನೆ. ಎಂದು ಹೇಳಿ ಸಮಾರಂಭಕ್ಕೆ ಶುಭ ಹಾರೈಸಿದರು.ಶಾಲಾ ಮುಖ್ಯೋಪಾಧ್ಯಾಯ ನಿಶಾಂತ್ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು. ನೃತ್ಯ, ನಾಟಕ, ಗೀತೆಯಂತಹ ವೈವಿಧ್ಯಮಯ ಪ್ರದರ್ಶನಗಳು ಮನ್ನಣೆ ಪಡೆಯಿತು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕೂಡಾ ನಡೆಯಿತು. ಇದೇ ಸಂಧರ್ಭ ಶಿಕ್ಷಕರಿಗೂ ಸಿಬ್ಬಂದಿಗಳನ್ನು ಹಾಗೂ ಆಗಮಿಸಿದ ಅತಿಥಿಗಳನ್ನು ಪುರಸ್ಕರಿಸಿ ಅಭಿನಂದನೆಗಳನ್ನು ನೀಡಿ ಅವರ ಸೇವೆಗೆ ಕೃತಜ್ಞತೆ ಸಲ್ಲಿಸಲಾಯಿತು.ಈ ಕಾರ್ಯಕ್ರಮವು ಸೇರಿದವರೆಲ್ಲರಿಗೂ ಉತ್ಸಾಹ ಹಾಗೂ ಸಂಭ್ರಮ ತುಂಬಿದ ಒಂದು ಅದ್ಭುತ ಸ್ಮರಣೀಯ ದಿನವಾಗಿ ಮಾರ್ಪಾಟಾಯಿತು. ವಿದ್ಯಾರ್ಥಿನಿ ರಾಬಿಯಾ ಶೇಖ್ ಸ್ವಾಗತಿಸಿ ವಿದ್ಯಾರ್ಥಿ ಮಾಝ್ ಆದಂ ವಂದಿಸಿದರು.