ಒಂದು ಕಾಲವಿತ್ತು, ಆಗ ರೂ. 20 ಉಳಿಸಲು 20 ನಿಮಿಷ ನಡೆಯುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ 20 ನಿಮಿಷ ಉಳಿಸಲು 200 ರೂಪಾಯಿ ಖರ್ಚು ಮಾಡಲು ತಯಾರಿದ್ದಾರೆ. ಪ್ರತಿಯೊಬ್ಬರು ಓಡಾಡಲು ಸ್ವಂತ ಗಾಡಿಯನ್ನು ಇಟ್ಟುಕೊಂಡಿದ್ದಾರೆ.
ಮುಖ್ಯರಸ್ತೆಯಿಂದ ಸುಮಾರು ಎರಡು ಕಿಲೋಮೀಟರ್ಗಳಷ್ಟು ದೂರ ನಮ್ಮ ಮನೆಗೆ ಇದ್ದುದರಿಂದ ನಮಗೂ ಒಂದು ಗಾಡಿ ಅವಶ್ಯವಿದೆ ಎಂದು ನಮಗನಿಸುತ್ತಿತ್ತು. ಬೆರಳೆಣಿಕೆಯಷ್ಟು ಅಡಿಕೆ ಮರಗಳಿದ್ದ ತೋಟ ನಮ್ಮದು, ಮನೆಯಲ್ಲಿ ಅನಾರೋಗ್ಯದಿಂದ ಪೀಡಿತ ವಯಸ್ಸಾದ ಅತ್ತೆ ಮಾವ, ಇವೆಲ್ಲದುದರಿಂದ ಹಣ ಹೊಂದಿಸುವುದು ಕಷ್ಟವಿತ್ತು. ಆದರೆ ದೇವರ ಅನುಗ್ರಹವೋ ಏನೋ ಆ ವರ್ಷ ಕಾಳು ಮೆಣಸಿಗೆ ಒಳ್ಳೆಯ ಬೆಲೆ ಬಂದಿತ್ತು. ಅದು ನಮಗೆ ಬೋನಸ್ ಆಗಿ ಪರಿಣಮಿಸಿತು. ಆ ದುಡ್ಡಿನಲ್ಲಿ ನಾವು ಸೆಕೆಂಡ್ ಹ್ಯಾಂಡ್ ಸ್ಕ್ಯೂಟಿ ಒಂದನ್ನು ಖರೀದಿಸಿದವು. ಮಾವ ಒಂದು ವರ್ಷದಲ್ಲಿ ತೀರಿಕೊಂಡರೆ, ಎರಡೇ ವರ್ಷದಲ್ಲಿ ನನ್ನ ಗಂಡನಿಗೆ ಕಿಡ್ನಿ ಸಮಸ್ಯೆ ಉಂಟಾಯಿತು.
ನನ್ನ ಗಂಡ ಅದನ್ನು ಮುಖ್ಯ ರಸ್ತೆ ವರೆಗೆ ಮಾತ್ರ ಕೊಂಡೊಯ್ಯುತ್ತಿದ್ದರು. ನನ್ನನ್ನು ದಿನಾ ಅದರಲ್ಲಿ ಶಾಲೆಗೆ ಬಿಟ್ಟು ಬರುತ್ತಿದ್ದರೂ, ನನ್ನನ್ನು ರೈಡ್ ಮಾಡಲು ಬಿಡುತ್ತೀರಲಿಲ್ಲ.ಮುಂದೆ ದೇಶ ವ್ಯಾಪಿ ಕರೋನ ಕಾಯಿಲೆ ಹಬ್ಬಿದಾಗ, ನಮ್ಮ ಮಗ ಅದರಲ್ಲಿಯೇ ಅಪ್ಪನನ್ನು ಡಯಲಿಸಿಸ್ಗೆ ಎಂದು ಮಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದ. ಕೆಲವು ವರ್ಷಗಳ ಬಳಿಕ ಒಂದು ದಿನ ಟಿಫಾಯ್ಡ್ ಜ್ವರ ಬಂದು ಅವರು ನಮ್ಮಿಂದ ಅಗಲಿದರು. ನಂತರ ನಾನು ಗಾಡಿಯನ್ನು ರೋಡಿನಲ್ಲಿ ತೆಗೆದುಕೊಂಡು ಹೋಗಲು ಕಲಿತೆ ಹಾಗೂ ಈಗಲೂ ಆ ಗಾಡಿಯನ್ನು ತಗೊಂಡು ಹೋಗುತ್ತೇನೆ, ಹಳೆಯ ಮುದುಕನಂತೆ ಕಾಣುವಂತಹ ಆ ಗಾಡಿಯು ಯಾವುದೇ ಸಮಸ್ಯೆ ಇಲ್ಲದೆ ನಮ್ಮನ್ನ ತುಂಬಾ ಕಡೆ ತೆಗೆದುಕೊಂಡು ಹೋಗಿದೆ, ಈಗಲೂ ಹೋಗುತ್ತಿದೆ. ಒಮ್ಮೆಯೂ ಮಧ್ಯದಾರಿಯಲ್ಲಿ ಕೈ ಕೊಟ್ಟಿರಲಿಲ್ಲ. “ಹಳೆಯ ಗಾಡಿಯನ್ನು ಯಾಕೆ ಇಟ್ಟುಕೊಂಡಿದ್ದೀಯ ಬೇರೆ ಹೊಸದು ತಗೋಳಬಹುದಲ್ಲವೇ?” ಎಂಬ ಪ್ರಶ್ನೆ ನನ್ನತ್ರ ಹಲವರು ಕೇಳುತ್ತಿರುತ್ತಾರೆ. ಮೊದಲ ಗಾಡಿ ಎಂಬ ಪ್ರೀತಿಯೋ ಅಥವಾ ನನ್ನ ಗಂಡನ ನೆನಪೋ ಏನೋ, ಅದು ಭಾವನಾತ್ಮಕವಾಗಿ ನಮ್ಮೊಂದಿಗಿದೆ ಅದನ್ನು ಮಾರಾಟ ಮಾಡಲು ನಮ್ಮ ಮನಸ್ಸು ಒಪ್ಪುವುದಿಲ್ಲ.
✍️ಬರಹ : ಭಾರತೀ ನೀರ್ಪಾಜೆ ಹೌಸ್