ಮಾರ್ಚ್ 26ರಿಂದ 28ರವರೆಗೆ ದಕ್ಷಿಣ ಕನ್ನಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಂಗಳೂರು ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮಾರ್ಚ್ 26ರಿಂದ 28ರವರೆಗೆ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತ್ರಿದಿನ ಸಮ್ಮೇಳನಕ್ಕೆ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಚಿದಂಬರ ಬೈಕಂಪಾಡಿ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ ಎಂದರು.ಸಾಹಿತ್ಯೋತ್ಸವದ ಅಂಗವಾಗಿ ಅಮ್ಮೆಂಬಳ ಬಾಳಪ್ಪ ದ್ವಾರದ ಉದ್ಘಾಟನೆ ನಡೆಯಲಿದ್ದು, “ತಂತ್ರಜ್ಞಾನ–ಸಾಹಿತ್ಯ–ಸಹಬಾಳ್ವೆ” ಎಂಬ ಆಶಯದಲ್ಲಿ ರಾಣಿ ಅಬ್ಬಕ್ಕ ವೇದಿಕೆಯಲ್ಲಿ ಹಾಗೂ ಪಂಜೆ ಮಂಗೇಶರಾಯ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ, ಅಧ್ಯಕ್ಷರಾಗಿ ಬಿ. ರಘುನಾಥ ಸೋಮಯಾಜಿ ಎರಕಳ ಹಾಗೂ ಕಾರ್ಯಾಧ್ಯಕ್ಷರಾಗಿ ಪಿಯೂಸ್ ಎಲ್. ರೋಡ್ರಿಗಸ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ 30ಕ್ಕೂ ಅಧಿಕ ಪುಸ್ತಕ ಮಳಿಗೆಗಳು, ಕರಾವಳಿ ವಸ್ತುಸಂಗ್ರಹ ಪ್ರದರ್ಶನ, ಗುಡಿಕೈಗಾರಿಕೆ, ಕರಕುಶಲ, ಕೈಮಗ್ಗ ಹಾಗೂ ಆಹಾರ ಮಳಿಗೆಗಳು, ಪಟ್ಟಾಂಗಕಟ್ಟೆಯಲ್ಲಿ ಅಜ್ಜಿಕಥೆ, “ಉತ್ತರ ಹೇಳಿ ಪುಸ್ತಕ ಗೆಲ್ಲಿ” ಕಾರ್ಯಕ್ರಮ ಹಾಗೂ ಗ್ರಾಮೀಣ ಪ್ರತಿಭೆಗಳ ನೃತ್ಯ ಪ್ರದರ್ಶನ ನಡೆಯಲಿದೆ. ಮೂರು ದಿನಗಳ ಕಾಲ ಕೃತಿಗಳ ಲೋಕಾರ್ಪಣೆ, ವಿಶೇಷ ಉಪನ್ಯಾಸ, ಗೋಷ್ಠಿಗಳು, ವಾಚನ, ಗಾಯನ ಸೇರಿದಂತೆ ಹಲವು ಸಾಹಿತ್ಯ ಕಾರ್ಯಕ್ರಮಗಳು ನಡೆಯಲಿವೆ.

ಸಮ್ಮೇಳನದ ಕೊನೆಯ ದಿನ ಸನ್ಮಾನ ಹಾಗೂ ಸಮಾರೋಪ ಕಾರ್ಯಕ್ರಮ ಸಂಜೆ 4ರಿಂದ 5.30ರವರೆಗೆ ನಡೆಯಲಿದ್ದು, ಸಮಾರೋಪ ಭಾಷಣವನ್ನು ಡಾ. ಎಂ. ಮೋಹನ ಆಳ್ವ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಡಾ. ಪಿ. ದಯಾನಂದ ಪೈ, ನಾಡೋಜ ಜಿ. ಶಂಕರ್, ಡಾ. ಕೆ. ಪ್ರಕಾಶ್ ಶೆಟ್ಟಿ ಬಂಜಾರ, ಕೆ.ಡಿ. ಶೆಟ್ಟಿ, ರವಿಶಂಕರ ಶೆಟ್ಟಿ ಬಡಾಜೆಗುತ್ತು, ಪಟ್ಲ ಸತೀಶ ಶೆಟ್ಟಿ, ಉದಯ ಸುವರ್ಣ, ವಿನೋದ್ ಶೆಣೈ, ಕಿಶೋರ್ ಆಳ್ವ ಸೇರಿದಂತೆ ಹಲವರನ್ನು ಸನ್ಮಾನಿಸಲಾಗುವುದು.

ಅದೇ ವೇಳೆ ಜಗನ್ನಾಥ ಚೌಟ ಬದಿಗುಡ್ಡೆ, ಎಸ್.ಆರ್. ಸತೀಶ್ಚಂದ್ರ, ಭುವನೇಶ್ ಪಚ್ಚಿನಡ್ಕ, ಜಗನ್ನಾಥ ಬಂಗೇರ ನಿರ್ಮಲ್ ಅವರಿಗೆ ಸಾಧಕಸಿರಿ ಪ್ರಶಸ್ತಿ ಹಾಗೂ ಪದ್ಮನಾಭ ಭಟ್ ಎಕ್ಕಾರು, ಕೆ.ಟಿ. ವಿಶ್ವನಾಥ, ಡಾ. ಈ.ಕೆ.ಎ. ಸಿದ್ದೀಕ್ ಅಡ್ಡೂರು ಸೇರಿದಂತೆ ಹಲವರಿಗೆ ಕನ್ನಡಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಗಡಿನಾಡು ಸೇವೆಗಾಗಿ ಡಾ. ಎಸ್.ಆರ್. ನರಹರಿ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯನ್ನು ವಿಶೇಷವಾಗಿ ಸನ್ಮಾನಿಸಲಾಗುವುದು.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸಂಜೆ 5.30ರಿಂದ ಜೀವನ್ ರಾಮ್ ಸುಳ್ಯ ತಂಡದಿಂದ ಕನ್ನಡ ಗಾನ ಗುಚ್ಛ, 6.30ರಿಂದ ಶ್ರದ್ಧಾ ಕಲ್ಲಡ್ಕ ಬಳಗದ ನೃತ್ಯವೈಭವ ಹಾಗೂ 7.30ರಿಂದ “ಶರಸೇತುಬಂಧನ” ಯಕ್ಷಗಾನ ತಾಳಮದ್ದಳೆ ಪ್ರದರ್ಶನ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿ ಎಚ್. ವಿನಯ್ ಆಚಾರ್ಯ, ಸಂಚಾಲಕ ವಿಶ್ವನಾಥ ಬಂಟ್ವಾಳ, ಕೋಶಾಧಿಕಾರಿ ಸುಭಾಷ್‌ಚಂದ್ರ ಜೈನ್, ಪ್ರಧಾನ ಕಾರ್ಯದರ್ಶಿ ಅಬುಬಕ್ಕರ್ ಹಾಗೂ ಕಾರ್ಯದರ್ಶಿ ದೇವಪ್ಪ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!