ಮಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೇ ಮಂಗಳೂರಿನ ನವ ಮಂಗಳೂರು ಬಂದರಿಗೆ ರಷ್ಯಾದ ತೈಲ ಟ್ಯಾಂಕರ್ ಹಾಗೂ ಅಮೆರಿಕದ ಅನಿಲ ಸಾಗಣೆ ನೌಕೆ ಆಗಮಿಸಿರುವುದು ಗಮನ ಸೆಳೆಯುತ್ತಿದೆ.
ರಷ್ಯಾದ “ಆಕ್ವಾ ಟೈಟಾನ್” (Aqua Titan) ಹೆಸರಿನ ಬೃಹತ್ ತೈಲ ಸಾಗಣೆ ಹಡಗು ಭಾನುವಾರ ಮಂಗಳೂರು ತಲುಪಿದೆ. ಮೂಲತಃ ಚೀನಾಕ್ಕೆ ತೆರಳಬೇಕಿದ್ದ ಈ ಹಡಗು ದಕ್ಷಿಣ ಚೀನಾ ಸಮುದ್ರದಲ್ಲಿ ಸಂಚರಿಸುತ್ತಿದ್ದ ವೇಳೆ ಕಳೆದ ವಾರದ ಆರಂಭದಲ್ಲಿ ಯು-ಟರ್ನ್ ಪಡೆದು ಭಾರತದತ್ತ ಮುಖ ಮಾಡಿತ್ತು ಎಂದು ತಿಳಿದುಬಂದಿದೆ.
ಇದರ ಜೊತೆಗೆ ಅಮೆರಿಕದ ಟೆಕ್ಸಾಸ್ ರಾಜ್ಯದಿಂದ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಸಾಗಿಸುತ್ತಿದ್ದ “ಪಿಕ್ಸಿಸ್ ಪಯೋನೀರ್” (Pyxis Pioneer) ಎಂಬ ಸರಕು ನೌಕೆಯೂ ನವ ಮಂಗಳೂರು ಬಂದರಿಗೆ ಆಗಮಿಸಿದೆ.
ಅಮೆರಿಕ–ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದಿದೆ. ಇರಾನ್ ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದರಿಂದ ಭಾರತ ಸೇರಿದಂತೆ ಜಗತ್ತಿನಾದ್ಯಂತ ಇಂಧನ ಪೂರೈಕೆಗೆ ಭಾರೀ ಪರಿಣಾಮ ಉಂಟಾಗಿದೆ.
ಈ ಹಿನ್ನೆಲೆ, ರಷ್ಯಾ ಮತ್ತು ಅಮೆರಿಕದಿಂದ ಬಂದಿರುವ ಈ ಎರಡು ಹಡಗುಗಳ ಆಗಮನದಿಂದ ಇಂಧನ ಪೂರೈಕೆ ಸ್ವಲ್ಪ ಮಟ್ಟಿಗೆ ಸುಧಾರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.