ಮಾತೃತ್ವ ಮರೆತವರು

ನಾವು ಆದಿ ಶಂಕರಾಚಾರ್ಯರ ಅನುಯಾಯಿಗಳು. ಸನ್ಯಾಸಿಯಾಗಿದ್ದ ಅವರು ಪೂರ್ತಿ ದೇಶ ಸುತ್ತಿ ಧರ್ಮ ಪ್ರಚಾರ ಮಾಡಿದವರು, ಬೌದ್ಧ, ಜೈನ ಧರ್ಮಗಳ ನಡುವೆ ನಶಿಸಿ ಹೋಗುತ್ತಿದ್ದ ಸನಾತನ ಧರ್ಮವನ್ನು ಉಳಿಸಿದ ಮಹಾನುಭಾವರು. ಅವರು ಸಮಾಜದ ಕಟ್ಟಳೆಗಳನ್ನೂ ಮೀರಿ, ತಾಯಿಯ ಕೊನೆಯ ಕಾಲದಲ್ಲಿ ತಾಯಿಯ ಸೇವೆಗಾಗಿ ಓಡೋಡಿ ಬಂದಿದ್ದರು. ಆದರೆ ಅವರ ಪ್ರತಿಪಾದಕರಾಗಿರುವ ನಮ್ಮ ಸಮಾಜ ಇಂದು ಈ ರೀತಿಯೂ ನೈತಿಕ ಅವನತಿ ಕಂಡಿದೆ ಎಂದರೆ ಇದು ಕಲಿ ಕಾಲದ ಅಂತ್ಯವೇ ಇರಬೇಕು.
ರಮಾಳ ಪರಿವಾರಕ್ಕೆ ಒಂದು ಸಂತೋಷದ ಸುದ್ದಿ ಎಂದರೆ ಕೆಲವು ತಿಂಗಳ ಹಿಂದೆ ಮಗ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದ . ಸಂಸಾರ ಈಗ ಸುಖಾವಾಗಿ ಸಾಗುತ್ತಿತ್ತು . ತಮಗೆ ಅಡಿಕೆ ತೋಟ ಇದ್ದರೂ ಕಾಲಕಾಲಕ್ಕೆ ಅದಕ್ಕೆ ಬೇಕಾದುದನ್ನು ಹಾಕಲು ಸಾಧ್ಯವಾಗದೆ, ಅದು ಸೊರಗಿತ್ತು . ವಯಸ್ಸಾದ ಅತ್ತೆ,ಅನಾರೋಗ್ಯದ ಗಂಡ ಹೀಗೆ ಎಲ್ಲಾ ಖರ್ಚನ್ನು ಖಾಸಗಿ ಶಾಲೆಯಲ್ಲಿ ಟೀಚರಾಗಿದ್ದ ರಮಾ ನಿಭಾಯಿಸುತ್ತಿದ್ದಳು. ಸಮಯವಾದಾಗ ಮಗನ ಬಳಿ ಹೋಗಿ ಕೆಲ ದಿನ ಇದ್ದು ಬರುತ್ತಿದ್ದಳು.
ಆದರೆ ದೇವರ ನಿಯಮ ಬೇರೆ ಇತ್ತೇನೋ .
ಒಳ್ಳೆಯವರನ್ನು ಆ ಭಗವಂತ ಬೇಗ ಕರೆಸಿಕೊಳ್ಳುತ್ತಾನೆ ಎಂಬ ಮಾತಿದೆ. ಕೆಲವು ವರ್ಷಗಳಿಂದ ಅನಾರೋಗ್ಯವಿದ್ದರೂ , ತಮ್ಮ ಕೆಲಸವನ್ನೆಲ್ಲ ಮಾಡಿಕೊಂಡು ಬರುತ್ತಿದ್ದ ರಮಾಳ ಗಂಡ ರಾಜ ಅಚಾನಕ್ಕಾಗಿ ಆ ದಿನ ಕೊನೆ ಉಸಿರೆಳೆದಿದ್ದ.

ರಾಜ ತೀರಿಕೊಂಡ ಮೇಲೆ ಅತ್ತೆಯ ಜವಾಬ್ದಾರಿ ಯಾರಿಗೆ? ಎಂಬ ಪ್ರಶ್ನೆ ಆಗ ಬಂದಿತ್ತು. ನಾಲ್ಕು ಮಕ್ಕಳಲ್ಲಿ ಹಿರಿಯರಿಬ್ಬರನ್ನು ಅವರು ಕಳೆದುಕೊಂಡಿದ್ದರು. ಕಿರಿ ಮಗ ರವಿ ಹಾಗೂ ಮಗಳು ರಜನಿ ಉಳಿದಿದ್ದರು. ಹಳ್ಳಿಯ ಮೂಲೆಯಲ್ಲಿ ಕಾಡಿನ ನಡುವೆ ಇರುವ ಮನೆಯಲ್ಲಿ ಒಬ್ಬಳೇ ಇದ್ದು ವಯಸ್ಸಾದ ಅತ್ತೆಯನ್ನು ನೋಡಿಕೊಳ್ಳುವುದು ರಮಾಳಿಗೆ ಅಸಾಧ್ಯವಾಗಿತ್ತು, ಕೆಲಸಕ್ಕೆ ಬೇರೆ ಹೋಗಬೇಕು ಅರ್ಧದಲ್ಲಿ ಶಾಲೆಯನ್ನು ಬಿಡುವಂತಿರಲಿಲ್ಲ, ದಿಕ್ಕಿಲ್ಲದ ಮನೆಯನ್ನೂ ಈಗ ಅವಳು ನಡೆಸಬೇಕಲ್ಲವೇ? ಅದೂ ಅಲ್ಲದೇ ಹೆತ್ತ ಮಕ್ಕಳು ಬದುಕಿರುವಾಗ ವಿಧವೆ ಸೊಸೆ ಅವರನ್ನು ನೋಡಿಕೊಳ್ಳುವುದು ಸಮಂಜಸವೂ ಆಗಿರಲಿಲ್ಲ.
ಮೈದುನ ರವಿಗೆ ಕೇಳಿದಾಗ ಅವನು ಹೇಳಿದ “ಅವರ ಆಸ್ತಿ ಪಾಲು ನಿಮ್ಮಲ್ಲಿದೆ ಅಲ್ಲವೇ? ಹಾಗಾಗಿ ಅದು ನನ್ನ ಜವಾಬ್ದಾರಿ ಅಲ್ಲ”
“ಅವರ ಪಾಲನ್ನು ನಾನು ನಿನಗೆ ಕೊಡುತ್ತೇನೆ” ಎಂದಳು ರಮಾ.
ತುಂಬಾ ಚರ್ಚೆ ನಂತರ ಪಾಲು ಎಷ್ಟು ಕೊಡುವುದು ಎಂಬ ವಿಷಯ ಇತ್ಯರ್ಥ ಆಯಿತು.
“ ಅಮ್ಮ ನಮ್ಮ ಮನೆಗೆ ಬರಬಾರದು, ಇದೇ ಮನೆಯಲ್ಲಿ ಕೊನೆವರೆಗೂ ಇರಬೇಕು” ಎಂದು ಇನ್ನೊಂದು ಶರತ್ತು ಇಟ್ಟ ರವಿ.
“ಈ ಮನೆಯನ್ನು ನಿಮಗೆ ಬಿಟ್ಟುಬಿಡುತ್ತೇನೆ, ನಾನು ಬೇರೆ ಬಾಡಿಗೆ ಮನೆಗೆ ಹೋಗುತ್ತೇನೆ. ನನಗೂ ಇನ್ನು ಇದರಲ್ಲಿ ಬಾಳಲು ಸಾಧ್ಯವಿಲ್ಲ, ಅವರ ನೆನಪು ನನ್ನನ್ನು ಇಲ್ಲಿ ತುಂಬಾ ಕಾಡ್ತದೆ ” ಎಂದಳು ರಮಾ.
ಮಗಳು ರಾಜನಿಗೆ ಕೇಳಿದರೆ, ಕಡ್ಡಿ ಮುರಿದಂತೆ ಒಂದೇ ಮಾತಿನಲ್ಲಿ“ಅದೆಲ್ಲ ಗಂಡು ಮಕ್ಕಳ ವಿಲೇವಾರಿ ನನ್ನದಲ್ಲ” ಎಂದಳು .
ಅಮ್ಮನು ಮಗನಲ್ಲಿ “ನಾನು ನಿಮ್ಮ ಜೊತೆ ಬಂದಿರುತ್ತೇನೆ, ನನಗೆ ಬೇಕಾಗಿ ನೀವು ಬೇರೇನೂ ಬೇಯಿಸುವುದು ಬೇಡ, ನಿಮಗೆ ಮಾಡಿದ್ದರಲ್ಲಿ ಸ್ವಲ್ಪ ತಿಂದು ನಾನು ಮೂಲೆಯಲ್ಲಿ ಇದ್ದುಬಿಡುತ್ತೇನೆ” ಎಂದು ಪರಿಪರಿಯಾಗಿ ಬೇಡಿಕೊಂಡರು.
ಮಗಳಲ್ಲಿ ವಿನಂತಿಸಿಕೊಳ್ಳುತ್ತಾ “ಮಗಳೇ ನಿನ್ನ ಮನೆಯಲ್ಲಿ ಒಂದು ಸ್ವಲ್ಪ ಜಾಗವೂ ನನಗೆ ಸಿಗದೇ ?” ಎಂದರೂ,ಇಬ್ಬರು ಮಕ್ಕಳು ಕರುಳ ಬಳ್ಳಿಯ ಸಂಬಂಧ ಕಡಿದು ಹೋದಂತೆ ಅಮ್ಮನನ್ನು ಬಿಟ್ಟು ಹೋದರು.


ಗಂಡನನ್ನು ಕಳಕೊಂಡ ದುಃಖದ ಜೊತೆ ಇಂತಹ ಪರಿಸ್ಥಿತಿಯಲ್ಲಿ ರಮಾ ಏನು ಮಾಡಬೇಕು? ಇಷ್ಟು ದಿನ ಒಟ್ಟಿಗೆ ಬದುಕಿದ್ದ , ಕೈಲಾಗದ ಅತ್ತೆಯನ್ನು ಬೀದಿಗೆ ಎಸೆಯಲು ಸಾಧ್ಯವಾಗದೆ ಅಳುತ್ತಾ, ಅಳುತ್ತಾ ಸ್ವಲ್ಪ ಅಲ್ಲಿ ಇಲ್ಲಿ ವಿಚಾರಿಸಿ, ಊರಿನಲ್ಲಿದ್ದ ಆಶ್ರಮಕ್ಕೆ ಅತ್ತೆಯನ್ನು ಸೇರಿಸಿದಳು.
ಸುಮಾರು ಒಂದುವರೆ ವರ್ಷಗಳ ಕಾಲ ತನ್ನ ಮಕ್ಕಳು ತನ್ನನ್ನು ನೋಡಲಿಲ್ಲವೆಂಬ ಕೊರಗಿನಲ್ಲೇ ಒಂದು ದಿನ ಅವರ ಅವಸಾನವೂ ಆಯಿತು.
ಆಗ ರಜೆ ಎಂದು ಮಗ ಇರುವಲ್ಲಿಗೆ ಹೋಗಿದ್ದ ರಮಾ ಬರುವುದಕ್ಕೂ ಮುನ್ನ ರವಿಯು ಅವರ ಮೃತ ದೇಹವನ್ನು ಆಶ್ರಮದಿಂದ ತನ್ನ ಮನೆಗೆ ಕೊಂಡು ಹೋಗಿದ್ದ . “ರಮಾಳಿಗೆ ಯಾಕೆ ಆ ವಿಷಯ ಹೇಳಲಿಲ್ಲ” ಎಂದು ಕುಟುಂಬದ ಹಿರಿಯರು ಕೇಳಿದರು. “ನನ್ನ ಅಮ್ಮನ ದೇಹವನ್ನು ನಾನು ತಗೊಂಡು ಹೋಗಬೇಕಾದರೆ ಆಕೆಯನ್ನು ಯಾಕೆ ಕೇಳಬೇಕು” ಎನ್ನುವುದು ಅವನ ಉತ್ತರವಾಗಿತ್ತು.
ಅವರು ಅನಾಥರಂತೆ ಬಿಟ್ಟು ಹೋದ ತಮ್ಮ ಅಮ್ಮನನ್ನು ನೋಡಿಕೊಂಡಂತಹ ಅತ್ತಿಗೆ ಹಾಗೂ ಮಗನ ಮೇಲೆ ಕನಿಷ್ಠ ಗೌರವದ ಭಾವನೆಯೂ ಅವರಿಗಿಲ್ಲ.ಇಂದು ಅಣ್ಣ ತಂಗಿಯರ ದೃಷ್ಟಿಯಲ್ಲಿ ಅತ್ತಿಗೆ, ಮಗ ಇಬ್ಬರೂ ತಪ್ಪಿತಸ್ಥರು ಹಾಗೂ ಅವರ ಜೊತೆ ಅಪರಿಚಿತರಂತೆ ವರ್ತಿಸುತ್ತಾರೆ.
ಊರಿನಲ್ಲಿ ಪುರೋಹಿತನಾಗಿರುವ ರವಿ ‘ಮಾತೃ ದೇವೋಭವ’ ಎಂದು ಮಂತ್ರ ಘೋಷ ಮಾಡುವಾಗ,ಅವನ ಮನಸ್ಸಿಗೆ ಅದು ಹಿಂಸೆ ತರುವುದಿಲ್ಲವೇ? ಮಗಳು ರಜನಿ, ಎಲ್ಲಾ, ಗಂಡು ಮಕ್ಕಳ ಜವಾಬ್ದಾರಿ ಎಂದವಳಿಗೆ, ಅತ್ತಿಗೆಯೂ ಅವಳಂತೆ ಹೆಣ್ಣು,( ಈಗ ಗಂಡನನ್ನು ಕಳಕೊಂಡಿರುವವಳು ) ಗಂಡು ಮಗ ಅಲ್ಲ ಎಂದು ಅನಿಸಬೇಡವೇ? ಅಮ್ಮ ಜೀವದಲ್ಲಿರುವಾಗ ಕರುಳಿನ ತುಡಿತ ಅವರನ್ನು ಕಾಡಲಿಲ್ಲವೇ? ಅನಾಗರಿಕರು, ಅವಿದ್ಯಾವಂತರು, ಕಡು ಬಡವರು ಕೂಡ ಹೆತ್ತ ತಾಯಿಯನ್ನು ಹೀಗೆ ಬಿಟ್ಟು ಬಿಡುವುದಿಲ್ಲ. ನಮ್ಮದು ಶಂಕರಾಚಾರ್ಯರ ಅವಿಚ್ಛಿನ್ನ ಪರಂಪರೆ ಎಂದು ಪೀಠದ ಹಿಂದೆ ಮುಂದೆ ಓಡಾಡಲು ಇಂತವರು ಅರ್ಹರೇ? ಇಂತಹ ಒಂದು ಮೌಲ್ಯಗಳ ಕೊರತೆ ನಮ್ಮ ಸಭ್ಯ ನಾಗರಿಕರೆಂಬ ಸಮಾಜದಲ್ಲಿ ಕಾಣಲು ಕಾರಣವಾದರೂ ಏನಿರಬಹುದು?ಎನ್ನುವುದೇ ನಿರಂತರ ಕಾಡುವ ಪ್ರಶ್ನೆ

ಬರಹ : ಭಾರತೀ ನೀರ್ಪಾಜೆ ಹೌಸ್

SHARE
Loading spinner

Leave a Reply

Your email address will not be published. Required fields are marked *

error: Content is protected !!