ಮಂಗಳೂರು:ಪಶ್ಚಿಮ ಕರಾವಳಿಯುದ್ದಕ್ಕೂ ಇಂದಿನಿಂದ 61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಜಾರಿಯಾಗಿದ್ದು, ಇದರೊಂದಿಗೆ ಮೀನುಗಾರಿಕೆ ಚಟುವಟಿಕೆಗಳು ಬಹುತೇಕ ಸ್ಥಗಿತಗೊಳ್ಳಲಿವೆ. ಮೀನುಗಳ ಸಂತಾನೋತ್ಪತ್ತಿ ಅವಧಿಯನ್ನು ರಕ್ಷಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ನಿರ್ಬಂಧವನ್ನು ಜಾರಿಗೊಳಿಸಿದೆ.
ಮಳೆಗಾಲವು ಹೆಚ್ಚಿನ ಕಡಲ ಪ್ರಭೇದಗಳ ಸಂತಾನೋತ್ಪತ್ತಿಯ ಪ್ರಮುಖ ಕಾಲವಾಗಿದ್ದು, ಈ ಅವಧಿಯಲ್ಲಿ ಯಾಂತ್ರೀಕೃತ ಬೋಟ್‌ಗಳ ಕಾರ್ಯಾಚರಣೆಯಿಂದ ಮೀನುಗಳ ಮೊಟ್ಟೆ ಇಡುವಿಕೆ ಹಾಗೂ ಬೆಳವಣಿಗೆಗೆ ತೊಂದರೆಯಾಗುವ ಸಾಧ್ಯತೆ ಇದೆ. ಇದರಿಂದ ಭವಿಷ್ಯದ ಮೀನು ಸಂಪತ್ತಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿವರ್ಷದಂತೆ ಈ ಬಾರಿ ಕೂಡ 61 ದಿನಗಳ ಮೀನುಗಾರಿಕಾ ನಿಷೇಧವನ್ನು ಜಾರಿಗೊಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲೂ ಈ ಆದೇಶ ಅನ್ವಯವಾಗಲಿದ್ದು, ಮುಂದಿನ ಎರಡು ತಿಂಗಳ ಕಾಲ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಹೆಚ್ಚಿನ ಮೀನುಗಾರಿಕೆ ಸಂಬಂಧಿತ ಚಟುವಟಿಕೆಗಳು ಸ್ಥಗಿತಗೊಳ್ಳುವ ನಿರೀಕ್ಷೆಯಿದೆ.
ಆದರೆ ಯಾಂತ್ರೀಕೃತ ಮೀನುಗಾರಿಕೆಗೆ ಮಾತ್ರ ನಿಷೇಧ ವಿಧಿಸಲಾಗಿದ್ದು, ಸಾಂಪ್ರದಾಯಿಕ ನಾಡದೋಣಿಗಳ ಮೂಲಕ ಮೀನುಗಾರಿಕೆ ನಡೆಸಲು ಅವಕಾಶ ನೀಡಲಾಗಿದೆ. ನಾಡದೋಣಿ ಹಾಗೂ ಬಲೆಗಳನ್ನು ಬಳಸುವ ಮೀನುಗಾರರು 10 ಅಶ್ವಶಕ್ತಿಯ ಇಂಜಿನ್‌ಗಳನ್ನು ಬಳಸಿ ಸಮುದ್ರ ತೀರ ಹಾಗೂ ನದಿ ಪ್ರದೇಶಗಳಲ್ಲಿ ಮೀನುಗಾರಿಕೆ ಮುಂದುವರಿಸಬಹುದಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಮಂಗಳೂರು ದಕ್ಕೆಯಲ್ಲಿ ಮೀನು ಉತ್ಪಾದನೆಯಲ್ಲಿ ಏರಿಳಿತ ಕಂಡುಬಂದಿದೆ. ಕಳೆದ ಸಾಲಿನಲ್ಲಿ ಉತ್ಪಾದನೆ ಕುಸಿತ ಕಂಡಿದ್ದರೂ, 2025-26ನೇ ಸಾಲಿನಲ್ಲಿ ಗಮನಾರ್ಹ ಚೇತರಿಕೆ ದಾಖಲಾಗಿದೆ. ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ಇಂಧನ ಪೂರೈಕೆ ವ್ಯತ್ಯಯ ಮತ್ತು ಬೆಲೆ ಏರಿಕೆಯ ಪರಿಣಾಮ ಮೀನು ಮಾರುಕಟ್ಟೆಯ ಮೇಲೂ ಕಂಡುಬಂದಿದ್ದರೂ, ಕಳೆದ ಮೂರು ವರ್ಷಗಳಲ್ಲಿ ಗರಿಷ್ಠ ಪ್ರಮಾಣದ ಮೀನುಗಾರಿಕೆ ಈ ಸಾಲಿನಲ್ಲಿ ನಡೆದಿರುವುದು ವಿಶೇಷವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಕಿಅಂಶಗಳ ಪ್ರಕಾರ, 2023-24ನೇ ಸಾಲಿನಲ್ಲಿ 3,976 ಕೋಟಿ ರೂ. ಮೌಲ್ಯದ 2,39,758 ಟನ್ ಮೀನು ಲಭ್ಯವಾಗಿದ್ದರೆ, 2024-25ರಲ್ಲಿ 2,220 ಕೋಟಿ ರೂ. ಮೌಲ್ಯದ 1,71,795 ಟನ್ ಮೀನು ದೊರೆತಿತ್ತು. 2025-26ನೇ ಸಾಲಿನಲ್ಲಿ 3,856 ಕೋಟಿ ರೂ. ಮೌಲ್ಯದ 1,97,381 ಟನ್ ಮೀನು ಉತ್ಪಾದನೆಯಾಗಿದೆ. ಮಾರ್ಚ್ ತಿಂಗಳ ಉತ್ಪಾದನೆಯೂ ಏರಿಕೆ ಕಂಡಿದ್ದು, 2023-24ರಲ್ಲಿ 6,792 ಮೆಟ್ರಿಕ್ ಟನ್, 2024-25ರಲ್ಲಿ 6,890 ಮೆಟ್ರಿಕ್ ಟನ್ ಹಾಗೂ 2025-26ರಲ್ಲಿ 19,890 ಮೆಟ್ರಿಕ್ ಟನ್ ಮೀನು ಲಭ್ಯವಾಗಿದೆ.
ಇದರ ಮಧ್ಯೆ ಮಂಗಳೂರು ಮೀನುಗಾರಿಕಾ ದಕ್ಕೆಯ ಮೊದಲ ಮತ್ತು ಮೂರನೇ ಹಂತದ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮೀನುಗಾರಿಕಾ ಚಟುವಟಿಕೆ ಮುಗಿಸಿ ಮರಳುವ ಬೋಟ್‌ಗಳಿಗೆ ಲಂಗರು ಹಾಕುವುದು ಸವಾಲಾಗಿ ಪರಿಣಮಿಸಿದೆ. ಅಭಿವೃದ್ಧಿ ಕಾಮಗಾರಿಯಿಂದಾಗಿ 1,400 ಮೀಟರ್ ಉದ್ದದ ದಕ್ಕೆಯಲ್ಲಿ ಪ್ರಸ್ತುತ ಕೇವಲ 250 ಮೀಟರ್ ಪ್ರದೇಶ ಮಾತ್ರ ಬಳಕೆಗೆ ಲಭ್ಯವಿದ್ದು, ಮೀನುಗಾರರು ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ.