ನಾನು ಕುಶ್ವಂತ್ ಸಿಂಗ್, ಅಮೃತ್ಸರ್ ನ ರಾಜಸಾನಿ ಹಳ್ಳಿಯಲ್ಲಿ ಎಲೆಕ್ಟ್ರಿಸಿಟಿ ಆಫೀಸಿನಲ್ಲಿ ಕೆಲಸದಲ್ಲಿದ್ದೇನೆ. ದಿನಾ ಆಫೀಸ್ ಗೆ ಹೋಗ್ಬೇಕಾದ್ರೆ ನಮ್ಮ ಊರಿನ ರೈಲ್ವೆ ಸ್ಟೇಷನ್ ಹತ್ರವೇ ಹೋಗ್ಬೇಕು. ಒಂದು ದಿನ ಒಬ್ಬ ಹುಡುಗನನ್ನು ಸ್ಟೇಷನ್ ಬಳಿ ನೋಡಿದೆ . ವಯಸ್ಸು ಸುಮಾರು 20 ರಿಂದ 25 ಇರಬಹುದೇನೋ. ತನ್ನ ಪಾಡಿಗೆ ತಾನೇ ಕೂತಿದ್ದ , ನೋಡುವಾಗ ಊರಿಗೆ ಹೊಸಬ, ಇಲ್ಲಿ ಅವನಿಗೆ ಯಾರು ಪರಿಚಯ ಇದ್ದಂತೆ ಇರಲಿಲ್ಲ. ಮಾರನೆಯ ದಿನ ನೋಡಬೇಕಾದರೆ ಆ ಹುಡುಗ ಅಲ್ಲಿ ಇದ್ದಾನೆ! ತನ್ನ ಪಾಡಿಗೆ ತಾನೇ ನಗುತ್ತಾ, ಏನೋ ಮಾತನಾಡುತ್ತಾ ಇದ್ದ. ಹೀಗೆ ಮೂರು ನಾಲ್ಕು ದಿನದಿಂದ ನೋಡುತ್ತಾ ಇದ್ದ ನನಗೆ ಕೆಲವೊಮ್ಮೆ ಕೈ ಮೇಲೆ ಕೆಳಗೆ ಮಾಡುತ್ತಾ, ಕೆಲವೊಮ್ಮೆ ಕಾಲು ಅಲ್ಲಾಡಿಸುತ್ತಾ, ಕೆಲವೊಮ್ಮೆ ಚಪ್ಪಾಳೆ ತಟ್ಟುತ್ತಾ ಏನೇನೋ ಮಾಡುತ್ತಿದ್ದ.ನೋಡುತ್ತಿರಬೇಕಾದರೆ ನನಗೆ ಅವನು ಬುದ್ಧಿಮಾಂಧ್ಯ ಇರಬೇಕು ಅನಿಸಿತು. ಏನೋ ಒಂದು ದಿನ ಅವನಲ್ಲಿ ಮಾತನಾಡುವ ಎಂದು ಅನಿಸಿತು . ಹತ್ತಿರ ಹೋಗಿ ಕುಳಿತೆ, ಹೆಗಲು ಮುಟ್ಟಿ ಕೇಳಿದೆ “ ಏನೋ ನಿನ್ನ ಹೆಸರು?”ಅವನು ತಿರುಗಿ ಕೂಡ ನೋಡಲಿಲ್ಲ,ಕಾಲು ಮೇಲೆ ಕೆಳಗೆ ಕುಣಿಸುತ್ತಿದ್ದ. ಪುನ: ಅವನನ್ನು ಕುಲುಕಿ ಅಲ್ಲಾಡಿಸುತ್ತಾ ಕೇಳಿದೆ “ನಿನ್ನ ಹೆಸರೇನು?” ಅವನು ನನ್ನ ಮುಖ ನೋಡಿದ ಸುಮ್ಮನಾಗಿ ಬಿಟ್ಟ. ಮತ್ತೆ ಪುನಃ ಇನ್ನೊಮ್ಮೆ ಅದೇ ಪ್ರಶ್ನೆ ಕೇಳಿದಾಗ ಅವನು “ಗಣೇಶ” ಎಂದ. “ ನೀನು ಯಾರು?ಎಲ್ಲಿಂದ ಬಂದೆ?ಯಾವೂರು ನಿನ್ನದು?” ಯಾವ ಪ್ರಶ್ನೆಗೂ ಅವನು ಉತ್ತರಿಸಲಿಲ್ಲ
“ಮೊನ್ನೆಯಿಂದ ನೋಡುತ್ತಿದ್ದೇನೆ ಇಲ್ಲೇ ಇದ್ದೀಯ, ನೀನು ಊಟ ಮಾಡಿದೆಯಾ?” ಎಂದಾಗ ಅವನು ಮುಖದಲ್ಲಿ ತಾಳಲಾರದ ಹಸಿವನ್ನು ತೋರಿಸುತ್ತಾ ನನ್ನೆಡೆಗೆ ದೈನ್ಯತೆಯಿಂದ ನೋಡಿದ.
“ಊಟ ಮಾಡುತ್ತೀಯಾ?” ಎಂದು ಪ್ರಶ್ನಿಸಿದೆ.
“ಹೂoo…..” ಎಂದು ಹೇಳಿ ತಲೆ ಕೆಳಗೆ ಮಾಡಿಕೊಂಡ.
ಅಯ್ಯೋ! ಪಾಪ ಎಂದೆನಿಸಿ ನಾನು ಹತ್ತಿರದ ಹೋಟೆಲಿಗೆ ಕರೆದುಕೊಂಡು ಹೋದೆ.ಮಾಣಿಗೆ ಹೇಳಿದೆ “ಇವನಿಗೊಂದು ಊಟ ಕೊಡಿ”
ಅವನು ತಿನ್ನಲು ಕೂತಾಗ ಅವನಿಗೆ ಬೇರೇನೂ ಕಾಣಿಸಲಿಲ್ಲ, ಒಂದೇ ಸಮ ಊಟ ಮಾಡತೊಡಗಿದ . ನೋಡಬೇಕಾದರೆ ಎಷ್ಟೋ ದಿನಗಳಿಂದ ಊಟ ಮಾಡಿಲ್ಲ ಎಂದೆನಿಸುತ್ತಿತ್ತು. ಈ ಊಟ ಕೊಡಿಸುವ ಕೆಲಸದಿಂದಾಗಿ ನನಗೆ ತಡವಾಯಿತೆಂದು ನಾನು ಸೀದಾ ಆಫೀಸಿನ ಕಡೆಗೆ ಹೋದೆ, ಹೋಗುವಾಗ ಹೋಟೆಲ್ ನವನಲ್ಲಿ “ಅವನಿಗೆ ಬೇಕಾದಷ್ಟು ಊಟ ಬಡಿಸಿ” ಎಂದು ಹೇಳಿ ಹೋಗಿದ್ದೆ. ಆ ದಿನ ಆಫೀಸ್ ನಿಂದ ಹೋರಾಡುತ್ತಾ ಕತ್ತಲಾಗಿತ್ತು, ಆದರೂ ಬೆಳಗ್ಗಿನ ದುಡ್ಡು ಕೊಡುವುದು ಬಾಕಿ ಇತ್ತು ಎಂದು ಹೋಟೆಲ್ ಗೆ ಹೋಗಿ ಬಿಲ್ಲು ಪಾವತಿಸುವಾಗ, ಅವನು ಸುಮಾರು ಐದು ಜನ ಊಟ ಮಾಡುವಷ್ಟು ಊಟ ಮಾಡಿದ ಎಂದು ಹೋಟೆಲ್ನವನು ಹೇಳಿದ.ತಡವಾದ್ದರಿಂದ ಅವನ ಬಗ್ಗೆ ವಿಚಾರಿಸದೇ ಹೊರಟಿದ್ದೆ ನಾನು.
ಕೆಲವು ದಿನಗಳ ಬಳಿಕ ಹೋಟೆಲ್ ನ ಹತ್ತಿರ ಹೋದರೆ ಹೋಟೆಲ್ನ ನೋಟವೇ ಬದಲಾಗಿತ್ತು. ಮೊದಲು ಅಲ್ಲಿ ಇಲ್ಲಿ ಸುತ್ತಮುತ್ತ ಕಸ ತುಂಬಿದ್ದವು, ಟೇಬಲ್ ಗಳೆಲ್ಲ ಗಲೀಜಾಗಿದ್ದವು. ಈಗ ನೋಡಬೇಕಾದರೆ, ಎಲ್ಲಾ ಕಡೆ ಛಕ ಛಕ ಹೊಳೆಯುತ್ತಿತ್ತು. ಕಾರಣ ಕೇಳಲು ಹೋದರೆ ಹೋಟೆಲನವನು “ ಊಟ ಮಾಡಲೆಂದು ನಿಮ್ಮೊಂದಿಗೆ ಬಂದ ಆ ಹುಡುಗ ಅಂದು ಕೂತಲ್ಲಿಂದ ಕದಲ್ಲೇ ಇಲ್ಲ, ತುಂಬಾ ಹೊತ್ತು ಸುಮ್ಮನೆ ಕೂತಿದ್ದ ಹುಡುಗನಿಗೆ,ಅದು ಇದು ಅಂತ ಎಲ್ಲರೂ ಕೆಲಸ ಹೇಳಲು ಶುರು ಮಾಡಿದರು. ಅವನು ಎದುರು ಮಾತಾಡದೆ ಎಲ್ಲಾ ಕೆಲಸವನ್ನು ಮಾಡಿ ಮುಗಿಸಿದ . ಕೆಲಸ ಮಾಡಲು ತೊಡಗಿದಂನೆಂದರೆ ಅದು ಪೂರ್ತಿ ಆಗುವಲ್ಲಿವರೆಗೆ ವಿಶ್ರಾಂತಿ ತೆಗೆದುಕೊಳ್ಳದೆ ಮಾಡಿ ಮುಗಿಸುತ್ತಾನೆ . ಚೆನ್ನಾಗಿ ತಿನ್ನುತ್ತಾನೆ , ಆದರೆ ಅದರ 10 ಪಟ್ಟು ಕೆಲಸ ಮಾಡುತ್ತಾನೆ . ಅಲ್ಲದೆ ಸಂಬಳವೂ ಕೇಳುವುದಿಲ್ಲ.ಅದಕ್ಕೆ ಅವನನ್ನು ನಾನು ಕೆಲಸಕ್ಕೆ ಇಟ್ಟುಕೊಂಡೆ. ಯಾರ ಜೊತೆ ಮಾತಿಲ್ಲ ಕಥೆಯಿಲ್ಲ,ಒಂದೇ ಒಂದು ಚಕಾರವಿಲ್ಲ ಎಲ್ಲಾ ಕೆಲಸ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾನೆ. ನೋಡಿ ಹೋಟೆಲ್ ಈಗ ಎಷ್ಟು ಸುಂದರವಾಗಿದೆ, ಇದರಿಂದ ನನಗೆ ಗ್ರಾಹಕರು ಕೂಡ ಹೆಚ್ಚಾಗಿದ್ದಾರೆ.” ಎಂದ.
“ಓ ಹೌದೇ ನಾನು ಅವನನ್ನು ಊಟಕ್ಕೆ ಕರೆತಂದಿದ್ದು ಬಾರಿ ಒಳ್ಳೆದಾಯ್ತು” ಅಂದೆ.
ಹಾಗೆ ಹೋಟೆಲ್ ನಲ್ಲಿ ಕಾಫಿ ಹೀರುತ್ತಿರಬೇಕಾದರೆ, “ನನಗೂ ಸ್ವಲ್ಪ ಹೊಲ-ಗದ್ದೆ ಇದೆ, ಅದರ ಕಳೆ ಕೀಳೋಕೆ ಎಷ್ಟೋ ದಿನಗಳಿಂದ ಕೂಲಿಯವರನ್ನು ಕರೆಯುತ್ತಿದ್ದೆ ಅವರು ಬರಲೇ ಇಲ್ಲ. ಈ ಗಣೇಶನನ್ನು ಕರೆದುಕೊಂಡು ಹೋದರೆ ನನ್ನ ಹೊಲದ ಕೆಲಸವೂ ಮುಗಿದೀತು” ಮನದಲ್ಲೇ ಅಂದುಕೊಂಡು ಹೋಟೆಲ್ ನವನಲ್ಲಿ “ಇವನನ್ನು ಸ್ವಲ್ಪ ದಿವಸಕ್ಕೆ ನಾನು ಕರೆದುಕೊಂಡು ಹೋಗಲಿಯೇ?” ಎಂದು ಕೇಳಿಯೇಬಿಟ್ಟೆ.
“ಹೋ ಅದಕ್ಕೇನು ನಿಮ್ಮಿಂದಾಗೇ ಅವನು ನಮಗೆ ಸಿಕ್ಕಿದ, ಧಾರಾಳವಾಗಿ” ಎಂದ.
ನಾಲ್ಕು ದಿನ ನನ್ನ ಮನೆಯಲ್ಲಿ ಇಟ್ಟುಕೊಂಡು, ಹೊಲದ ಕೆಲಸ ಮನೆ ಸುತ್ತ ಅಚ್ಚು ಕಟ್ಟು ಮಾಡಿಸಿ, ಅವನಿಗೆ ಒಳ್ಳೆಯ ಊಟ ತಿಂಡಿ ಮಾಡಿಸಿ ಬಡಿಸಿದೆ. ಐದನೇಯ ದಿನ ಅವನನ್ನು ಹೋಟೆಲಿನಲ್ಲಿ ಬಿಟ್ಟು ಬಂದೆ.
ಸ್ವಲ್ಪ ದಿನದಲ್ಲಿ ಊರಿನವರಿಗೆಲ್ಲ ಗಣೇಶ ಕೆಲಸ ಮಾಡುವ ವಿಧಾನದ ಬಗ್ಗೆ ತಿಳಿದುಹೋಯ್ತು ಒಬ್ಬರಾದ ಮೇಲೆ ಒಬ್ಬರು ಅವನನ್ನು ತಮ್ಮ ತಮ್ಮ ಮನೆಗೆ ಕರೆದುಕೊಂಡು ಹೋಗಲು ಕಾಯುತ್ತಿದ್ದರು.
ಹೀಗೆ ಗಣೇಶ ಊರಿನವರಿಗೆಲ್ಲ ಪ್ರೀತಿ ಪಾತ್ರನಾದ. ಎಲ್ಲರಿಗೂ ಅವನ ಮೇಲೆ ಅನುಕಂಪ ಆದರೆ ಅವನು ಮಾತ್ರ ಕೆಲಸ ಮಾಡುವುದು ಹೊಟ್ಟೆ ತುಂಬ ಉಣ್ಣುವುದು. ಯಾರ ಮನೆಯಲ್ಲಿ ಇರುತ್ತಾನೋ ಅಲ್ಲೇ ಮಲಗುವುದು, ಯಾರಾದರೂ ಬಟ್ಟೆ ಕೊಟ್ಟರೆ ಅದನ್ನು ಧರಿಸುತ್ತಿದ್ದ. ತನ್ನ ಪಾಡಿಗೆ ಏನು ಯೋಚಿಸುತ್ತಾ ಕೈ ಚಪ್ಪಾಳೆ ಹೊಡೆಯುವುದು ತಲೆ ಮೇಲೆ ಕೆಳಗೆ ಮಾಡುತ್ತಾ ತನ್ನದೇ ಯೋಚನೆಯಲ್ಲಿ ಇರುತ್ತಿದ್ದ. ಯಾರ ಜೊತೆಯೂ ಮಾತನಾಡುತ್ತಿರಲಿಲ್ಲ ಹಾಗಂತ ಯಾರಿಗೂ ಅವನು ತೊಂದರೆ ಕೊಡುತ್ತಿರಲಿಲ್ಲ. ಇದರಿಂದಲೇ ಅವನು ಎಲ್ಲರಿಗೂ ಇಷ್ಟವಾಗಿದ್ದ .
“ಪಾಪ ಎಲ್ಲಿಂದ ಬಂದಿದ್ದನೋ ಏನೋ, ಇವನ ಮನೆಯವರು ಇವನನ್ನು ಹುಡುಕುತ್ತಿರಬಹುದು ಇವನು ಇಲ್ಲಿರುವ ಬಗ್ಗೆ ಮನೆಯವರಿಗೆ ತಿಳಿಸಬೇಕು ” ಎಂದು ಒಂದು ದಿನ ನನಗನಿಸು. ಗಣೇಶನಿಗೆ ಕೇಳಿದರೆ ಅವನಿಗೆ ಏನೂ ಗೊತ್ತಿರಲಿಲ್ಲ. ಹಾಗೆ ನಾನೊಂದು ದಿನ ಆ ಒಂದು ಪುಣ್ಯ ಕಾರ್ಯಕ್ಕೆ ಹೊರಟೆ.
“ಅವನು ರೈಲ್ವೇ ಸ್ಟೇಷನ್ನಲ್ಲಿ ಕಂಡ ಕಾರಣ ರೈಲಿನಲ್ಲಿಯೇ ಎಲ್ಲಿಂದಲೋ ಬಂದಿರಬೇಕು” ಎಂದೆನಿಸುತ್ತದೆ.
ನಮ್ಮ ಊರು ರಾಜಸಾನಿ , ಪತಂಖೂಟ್ ಪಟ್ಟಣದಿಂದ ರೈಲು ಹೊರಡುತ್ತಿತ್ತು. “ಮಧ್ಯದಲ್ಲಿ ಇರುವ ಪುಟ್ಟ ಪುಟ್ಟ ಹಳ್ಳಿಗಳಲ್ಲಿ ವಿಚಾರಿಸಿ ನೋಡೋಣ” ಎಂದು ವಿಚಾರ ಮಾಡಿದೆ.
ಗಣೇಶನ ಮನೆಯ ಹುಡುಕಾಟದಲ್ಲಿ ಒಂದು ರಜಾ ದಿನ ನಾನು ಹೊರಟೇ ಬಿಟ್ಟೆ. ಹುಡುಕುತ್ತಾ ಹೋದಾಗ ದೀನಾನಗರ ಎಂಬ ಹಳ್ಳಿಯಲ್ಲಿ ಗಣೇಶನ ಮನೆಯವರ ಬಗ್ಗೆ ತಿಳಿಯಿತು. ಹುಡುಕುತ್ತಾ ಅವನ ಮನೆಗೆ ಹೋದೆ, ಆಹಾ ಎಂಥಾ ಸುಂದರ ಪ್ರಕೃತಿ! ಎಲ್ಲಿ ನೋಡಿದರಲ್ಲಿ ಸಾಸಿವೆಯ ಗದ್ದೆಗಳು, ಹಸಿರಸಿರಾದ ಗಿಡಗಳಲ್ಲಿ ಹಳದಿ ಬಣ್ಣದ ಹೂವುಗಳು, ಕಣ್ಣು ಹಾಯಿಸಿದಷ್ಟು ಅದುವೇ ಕಂಗೊಳಿಸುತ್ತಿತ್ತು . ಮುಂದೆ ಹೋಗುತ್ತಾ ಗಣೇಶನ ಮನೆ ಸಿಕ್ಕಿತು ಒಂದು ವಿಶಾಲವಾದ ಮನೆ ಹಾಗೂ ಬೇಕಾದಷ್ಟು ಆಸ್ತಿ ಅವರಿಗಿತ್ತು. ಮನೆಯ ಜಗಲಿ ಹತ್ರ ಹೋದವನೇ ನಾನು ನನ್ನ ಪರಿಚಯ ಹೇಳಿದೆ.
“ ಇಲ್ಲಿ ಬಂದ ಉದ್ದೇಶ ಏನು?” ಎಂದು ಮನೆಯವನು ಕೇಳಿದ.
“ ನಮ್ಮ ಊರಿಗೆ ಗಣೇಶನೆಂಬ ಒಬ್ಬ ಹುಡುಗ ಬಂದಿದ್ದಾನೆ, ಅವನು ನಿಮ್ಮ ಮನೆಯವನೆಂದು ವಿಚಾರಿಸಿದಾಗ ತಿಳಿಯಿತು ಅದಕ್ಕಾಗಿ ಬಂದೆ” ಎಂದೆ.
ಮನೆಯವನು ಆಶ್ಚರ್ಯದಲ್ಲಿ ನನ್ನೆಡೆಗೆ ನೋಡಿದ.ಅಸಡ್ಡೆಯ ಮುಖ ಮಾಡಿಕೊಂಡು ಒಳಗೆ ನಡೆದ. ಆದರೆ “ಏನು ಗಣೇಶ ನಿಮ್ಮ ಊರಿನಲ್ಲಿದ್ದಾನೆಯೇ!?” ಮನೆಯ ಒಳಗಿಂದ ಯಾರೋ ಕುತೂಹಲದಿಂದ ಕೇಳಿದಂತೆ ನನಗನಿಸಿತು. ಒಳಗೆ ಇಣುಕಿ ನೋಡಿದ್ರೆ, ಹೌದು ವಯಸ್ಸಾದ ಹಿರಿಯರು ಒಳಗೆ ಕುಳಿತಿದ್ದರು, ಅವರಿಗೆ ಎದ್ದು ಓಡಾಡಲು ಆಗುತ್ತಿರಲಿಲ್ಲ . “ಬಾ ಒಳಗೆ” ಎಂದು ಆ ಹಿರಿಯ ವ್ಯಕ್ತಿ ಕರೆದರು . ನಾನು ಒಳಗೆ ಹೋಗಿ ಕೂರುವ ಮೊದಲೇ ಅವರು ಅಳುವಂತ ಮುಖ ಮಾಡಿಕೊಂಡು ಗಣೇಶನ ಬಗ್ಗೆ ವಿಚಾರಿಸಿದರು. “ಏನು! ನಮ್ಮ ಮಗ ಗಣೇಶ ನಿಮ್ಮ ಊರಲ್ಲಿಯೇ?! ಅಬ್ಬ ನನಗೀಗ ಸಮಾಧಾನವಾಯಿತು, ಅವನು ಬದುಕಿದ್ದರೆ ಸಾಕು ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ.” ಎನ್ನುತ್ತಿದ್ದನಂತೆಯೇ ಅವರ ಕಣ್ಣಿನಲ್ಲಿ ನೀರು ಇಳಿಯಿತು.
ನಾನು ಅವರನ್ನು ಸಂತೈಸುತ್ತಾ “ಹೌದು ಅವನು ನಮ್ಮ ಊರಿನಲ್ಲಿ ಎಲ್ಲರಿಗೂ ಪ್ರೀತಿ ಪಾತ್ರನಾಗಿದ್ದೇನೆ.” ಎಂದೆ.
“ಅಯ್ಯೋ, ನಾನು ಇಲ್ಲಿವರೆಗೆ ನನಗೆ ನಾನೇ ಶಾಪ ಹಾಕಿಕೊಳ್ಳುತ್ತಿದ್ದೆ. ನಾನು ಯಾಕಾದರೂ ಗಣೇಶನನ್ನು ಕಳುಹಿಸಿಕೊಟ್ಟೆ, ನನ್ನಿಂದಾಗಿ ಅವನು ಯಾವ ಕಷ್ಟದಲ್ಲಿದ್ದಾನೋ? ಜೀವಂತ ಇದ್ದಾನೋ ಇಲ್ಲವೋ? ಅಂದುಕೊಳ್ಳುತ್ತಿದ್ದೆ ಈಗ ನನಗೆ ಹೋದ ಜೀವ ಬಂದಂತಾಯಿತು”. ಧೈರ್ಯ ತೆಗೆದುಕೊಳ್ಳುತ್ತಾ ಹೇಳಿದರು.
“ಇಲ್ಲಿಂದ ಅವನು ಹೋಗಲು ಕಾರಣವಾದರೂ ಏನು?” ಎಂದು ನಾನು ಪ್ರಶ್ನಿಸಿದೆ.
“ಅದು ಒಂದು ದೊಡ್ಡ ಕಥೆ” ಎಂದರು ಗಣೇಶನ ಅಪ್ಪ.
“ಹೇಳಿ ನಾನು ಕೇಳಿಸಿಕೊಳ್ಳುತ್ತೇನೆ” ಎಂದೆ ನಾನು.
ಗಣೇಶ ಚಿಕ್ಕ ವಯಸ್ಸಿನಲ್ಲಿ ಇರಬೇಕಾದರೆ, ಅವನ ಅಮ್ಮ ತೀರಿಕೊಂಡರು. ಗಣೇಶ ಎಲ್ಲರಂತಲ್ಲ, ಹಾಗಾಗಿ ಅವನನ್ನು ನೋಡಿಕೊಳ್ಳುವುದು ಸ್ವಲ್ಪ ಕಷ್ಟವೆಂದು, ಅವನ ಬಗ್ಗೆ ಎಲ್ಲವನ್ನೂ ಜಾನಕಿಗೆ ಹೇಳಿ, ಅವಳನ್ನು ನಾನು ಮದುವೆಯಾದೆ. ಹೊಸದರಲ್ಲಿಎಲ್ಲಾ ಚೆನ್ನಾಗಿತ್ತು , ಆದರೆ ಜಾನಕಿ ತನ್ನ ಸ್ವಂತ ಮಗನಿಗೆ ಜನ್ಮವಿತ್ತ ಮೇಲೆ, ಗಣೇಶನನ್ನು ಕಡೆಗಾಣಿಸಲು ಶುರು ಮಾಡಿದಳು. ಮಗ ಸುರೇಶನೂ ಕೂಡ ಅಮ್ಮನಂತೆ ಆದ.
ಬೆಳಿಗ್ಗೆ ಎದ್ದು ನೀರು ತಂದು ಕೊಡುತ್ತಿದ್ದ, ಅಂಗಳ ಎಲ್ಲ ಗುಡಿಸಿ ಚೆನ್ನಾಗಿಟ್ಟಿರುತ್ತಿದ್ದ, ನಂತರ ಇಡೀ ದಿನ ಹೊಲದಲ್ಲಿ ಕೆಲಸ ಮಾಡುತ್ತಿದ್ದ.ಆದರೂ ಮನೆಗೆ ಬಂದಾಗ ಅವಳು ಕ್ಯಾತೆ ತೆಗೆಯುತ್ತಿದ್ದಳು.
ನನಗೆ ಊರಿನಲ್ಲಿ ದೊಡ್ಡ ಜಮೀನ್ದಾರ ಎಂಬ ಹೆಸರಿದೆ. ಊರಿನವರು ಸೇರಿದಂತೆ ಮನೆಯವರೂ ನನಗೆ ಗೌರವವನ್ನು ಕೊಡುತ್ತಿದ್ದರು. ನಾನು ದುಡಿಯುತ್ತಿರುವಾಗ, ಗಣೇಶನ ಚಿಕ್ಕಮ್ಮ ಹಾಗೂ ಸುರೇಶ ಸ್ವಲ್ಪ ಹೆದರುತ್ತಿದ್ದರು. ನನ್ನ ಎದುರು ಸುಮ್ಮನಿರುತ್ತಿದ್ದರು, ಉಳಿದ ಸಮಯದಲ್ಲಿ ಅವನಿಗೆ ನಿರಂತರ ಕಿರುಕುಳ ಕೊಡುತ್ತಿದ್ದರು. ಅದಕ್ಕಾಗಿ ನಾನು ಅವನನ್ನು ನನ್ನ ಜೊತೆ ಹೊಲಕ್ಕೆ ಕರೆದುಕೊಂಡು ಹೋಗುತ್ತಿದ್ದೆ. ಅದರಿಂದಾಗಿ ಅವನಿಗೆ ಯಾವ ಕೆಲಸವೂ ಗೊತ್ತಿಲ್ಲ ಎಂದಿಲ್ಲ, ಎಲ್ಲಾ ಕೆಲಸ ಮಾತಿಲ್ಲದೆ ಮಾಡಿ ಮುಗಿಸುತ್ತಾನೆ.
ನಮ್ಮ ಹೊಲಗದ್ದೆ ಎಲ್ಲಾ ಇಷ್ಟು ಚೆನ್ನಾಗಿ ಬರಬೇಕಾದರೆ ಅದರ ಹಿಂದಿನ ಕಾರಣ ಗಣೇಶನ ಶ್ರಮ. ಯಾವಾಗ ನನ್ನ ಆರೋಗ್ಯ ಕೈಕೊಟ್ಟಿತು ಜಾನಕಿ ಹಾಗೂ ಸುರೇಶ ಇಬ್ಬರೂ ಅವನು ಕೂತರೂ ತಪ್ಪು ನಿಂತರೂ ತಪ್ಪು ಎಂದು ಜಗಳ ಕಾಯುತ್ತಿದ್ದರೂ ಅವನು ಒಂದು ಚಕಾರ ಎತ್ತುತ್ತಿರಲಿಲ್ಲ.
ಅವನ ಮನಸ್ಸಿನ ಹಿಂಸೆ ಅರಿತು ನಾನು, ಗಣೇಶನ ಸೋದರ ಮಾವ, ದೂರದ ಮುಂಬೈಯಲ್ಲಿದ್ದ. ಅಲ್ಲಿಗೆ ಗಣೇಶನನ್ನು ಕಳುಹಿಸುತ್ತೇನೆ, ಅವನಿಗೆ ಎಲ್ಲಿಯಾದರೂ ಸರಿ ಒಂದು ಸಣ್ಣ ಕೆಲಸ ಕೊಡಿಸು ಎಂದು ವಿನಂತಿಸಿಕೊಂಡೆ . ಅಲ್ಲಿಯಾದರೂ ಗಣೇಶ ಚೆನ್ನಾಗಿ ಬಾಳಲಿ ಎನ್ನುವುದು ನನ್ನ ಉದ್ದೇಶವಾಗಿತ್ತು. ಸೋದರ ಮಾವ ಅದಕ್ಕೆ ಒಪ್ಪಿಕೊಂಡಿದ್ದ, ಹಾಗೂ ಒಂದು ಹೋಟೆಲ್ನಲ್ಲಿ ಕೆಲಸ ಗುರುತಿಸಿದ್ದ.
ಊರಿನಲ್ಲಿ ಯಾರಾದರೂ ನಂಬಿಕಸ್ತರು ದೊರಕಿದರೆ, ಅವರ ಜೊತೆ ಗಣೇಶನನ್ನು ಕಳುಹಿಸಿ ಕೊಡೋಣವೆಂದು ಮಾಹಿತಿ ಸಂಗ್ರಹಿಸುತ್ತಿದ್ದೆ . ಊರಿನ ನಮ್ಮ ಪರಿಚಯಸ್ತರಾದ ಮೋಹನ್ ಗಿಲ್ ಮುಂಬೈಗೆ ಹೋಗುವವರಿದ್ದರು. ನನ್ನ ಕೈಯಲ್ಲಿ ಎಷ್ಟು ಸಾಧ್ಯವೊ ಅಷ್ಟು ಜೋಪಾನದ ಮಾತುಗಳನ್ನು ಹೇಳಿ ಗಣೇಶನನ್ನು ಅವರ ಜವಾಬ್ದಾರಿಯಲ್ಲಿ ಕಳುಹಿಸಿಕೊಟ್ಟಿದ್ದೆ.
ಕೆಲವು ದಿನಗಳ ಬಳಿಕ, ಮೋಹನ್ ಅವರು ಫೋನು ಮಾಡಿ ಹೇಳಿದರು, ಆ ದಿನ ರೈಲಿನಲ್ಲಿ ಹೋಗುತ್ತಿರಬೇಕಾದರೆ, ಗಣೇಶ ಮೂತ್ರ ಬರುತ್ತದೆಂದು ರೈಲಿನಿಂದ ಇಳಿದನಂತೆ, ಬೇಗ ಬಾ ಎಂದು ಅವರು ಹೇಳಿ ಕಳಿಸಿದರೂ, ಗಣೇಶ ಹಿಂತಿರುಗಿ ಬರುವಷ್ಟರಲ್ಲಿ ರೈಲು ಹೊರಟಿತ್ತಂತೆ .ಇಲ್ಲಿವರೆಗೆ ರೈಲಿನಲ್ಲಿ ಪ್ರಯಾಣಿಸದ ಗಣೇಶನಿಗೆ ಅದು ಹೇಗೆ ತಿಳಿಯಬೇಕು? ಹೇಳಿ ಕೇಳಿ ಅವನು ವಿಶಿಷ್ಟ ಚೇತನ ಹುಡುಗ.
ನನಗೆ ಆಘಾತವಾದುದರಿಂದ, ಅಂದು ಯಾವ ಊರಿನಲ್ಲಿ ಗಣೇಶ ಇಳಿದ? ಎಂದು ಕೇಳಿಕೊಳ್ಳಲು ಆಗಲಿಲ್ಲ. ನನಗಂತೂ ಕೈಲಾಗುವುದಿಲ್ಲ, ಊರ ಹೆಸರು ಗೊತ್ತಾಗಿದ್ದರೆ ಯಾರನ್ನಾದರೂ ಕಳುಹಿಸಿ ವಿಚಾರಿಸಬಹುದಿತ್ತೇನೋ! ಮನೆಯವರಿಗೆ ಯಾರಿಗೂ ಅವನ ಚಿಂತೆ ಇರಲಿಲ್ಲ. ಅವನು ಹೋದದ್ದೇ ತುಂಬಾ ಸಂತೋಷವಾಗಿತ್ತು ಅವರಿಗೆ . ನಾನೊಬ್ಬನೇ ಅವನಿಗೋಸ್ಕರ ಕೊರಗಿ ಕೊರಗಿ, ನನಗೆ ನಾನೇ ಬೈದುಕೊಳ್ಳುತ್ತಿದ್ದೆ.
ಈಗ ನಿಮ್ಮ ಊರಿನಲ್ಲಿ ಅವನಿದ್ದಾನೆ ಎಂದು ಕೇಳಿ ತುಂಬಾ ಸಂತೋಷವಾಯಿತು. ಹೇಗೆ ಆಗಲಿ ಅವನು ನಿಮಗೆಲ್ಲ ಹಿಡಿಸಿದ್ದಾನಲ್ಲವೇ? ನಿಮ್ಮ ಊರಲ್ಲಿ ಎಲ್ಲರಿಗೂ ಅವನು ಪ್ರೀತಿ ಪಾತ್ರನಾದವನು ಎಂದಿರಿ, ಹಾಗಾಗಿ ಅವನನ್ನು ನಿಮ್ಮ ಊರಿನಲ್ಲಿ ಇಟ್ಟುಕೊಳ್ಳಿ. ಇನ್ನಾದರೂ ನಾನು ನೆಮ್ಮದಿಯ ಉಸಿರೆಳೆಯಬಹುದು, ನೆಮ್ಮದಿಯಿಂದ ಸಾಯಬಹುದು. ನೀವು ಬಂದು ಈ ವಿಷಯ ತಂದದ್ದು ನನಗೆ ಹೊಸ ಜನ್ಮ ತಂದಂತಾಯಿತು. ನಿಮಗೆ ನಾನು ಎಂದೆಂದೂ ಚಿರಋಣಿ ಎನ್ನುತ್ತಾ ಕಣ್ಣೊರೆಸಿಕೊಂಡರು. ಅವನ ಕತೆ ನನ್ನನ್ನೂ ಘಾಸಿಗೊಳಿಸಿತು, ನಾನು ಮೂಕನಾದೆ.
✍️ಬರಹ : ಭಾರತೀ ನೀರ್ಪಾಜೆ ಹೌಸ್