ಢಾಕಾ:ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದ “ಡೊನಾಲ್ಡ್ ಟ್ರಂಪ್” ಹೆಸರಿನ ಅಪರೂಪದ ಎಮ್ಮೆಯನ್ನು ಬಾಂಗ್ಲಾದೇಶ ಸರ್ಕಾರ ಕೊನೆಯ ಕ್ಷಣದಲ್ಲಿ ಬಕ್ರೀದ್ ಬಲಿಯಿಂದ ರಕ್ಷಿಸಿರುವ ಘಟನೆ ಗಮನ ಸೆಳೆದಿದೆ. ಸಾರ್ವಜನಿಕರ ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಈ ಎಮ್ಮೆ ಇದೀಗ ಢಾಕಾದ ರಾಷ್ಟ್ರೀಯ ಮೃಗಾಲಯದಲ್ಲಿ ಸುರಕ್ಷಿತವಾಗಿದ್ದು, ವಿಶೇಷ ಆರೈಕೆಯಲ್ಲಿದೆ.
4 ವರ್ಷದ ಈ ಆಲ್ಬಿನೋ ತಳಿಯ ಎಮ್ಮೆ ತಿಳಿ ಗುಲಾಬಿ ಬಣ್ಣದ ಚರ್ಮ ಮತ್ತು ಅಮೆರಿಕ ಅಧ್ಯಕ್ಷ Donald Trump ಅವರ ಹೇರ್ಸ್ಟೈಲ್ನ್ನು ಹೋಲುವ ಹೊಂಬಣ್ಣದ ಕೂದಲಿನಿಂದ ವಿಶಿಷ್ಟವಾಗಿ ಕಾಣಿಸುತ್ತಿತ್ತು. ಇದೇ ಕಾರಣಕ್ಕೆ ಫಾರ್ಮ್ ಮಾಲೀಕರು ಇದಕ್ಕೆ “ಡೊನಾಲ್ಡ್ ಟ್ರಂಪ್” ಎಂದು ಹೆಸರು ಇಟ್ಟಿದ್ದರು.
ಬಕ್ರೀದ್ ಹಬ್ಬದ ಕುರ್ಬಾನಿಗಾಗಿ ಢಾಕಾದ ಉದ್ಯಮಿಯೊಬ್ಬರು ಈ ಎಮ್ಮೆಯನ್ನು ಸುಮಾರು 3.85 ಲಕ್ಷ ಬಾಂಗ್ಲಾದೇಶಿ ಟಾಕಾಗೆ, ಅಂದಾಜು 3 ಲಕ್ಷ ಭಾರತೀಯ ರೂಪಾಯಿಗೆ ಖರೀದಿಸಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ, ಎಮ್ಮೆಯನ್ನು ನೋಡಲು ಸಾವಿರಾರು ಜನರು ಉದ್ಯಮಿಯ ಮನೆಯ ಮುಂದೆ ಜಮಾಯಿಸಿದ್ದರು.
ಜನಸಂದಣಿ ಹೆಚ್ಚಾಗುತ್ತಿದ್ದಂತೆ ಭದ್ರತಾ ಸಮಸ್ಯೆ ಎದುರಾದ ಹಿನ್ನೆಲೆ, ಬಾಂಗ್ಲಾದೇಶ ಗೃಹ ಸಚಿವಾಲಯ ತಕ್ಷಣ ಮಧ್ಯಪ್ರವೇಶ ಮಾಡಿತು. ಎಮ್ಮೆಯನ್ನು ಬಲಿ ನೀಡದಂತೆ ಆದೇಶಿಸಿ, ಖರೀದಿದಾರನಿಗೆ ಹಣ ಮರುಪಾವತಿಸಿ, ಸರ್ಕಾರವೇ ತನ್ನ ಸುಪರ್ದಿಗೆ ಪಡೆದುಕೊಂಡಿತು.
ಸದ್ಯ “ಡೊನಾಲ್ಡ್ ಟ್ರಂಪ್” ಎಮ್ಮೆ ಢಾಕಾದಬಾಂಗ್ಲಾದೇಶ ರಾಷ್ಟ್ರೀಯ ಮೃಗಾಲಯದಲ್ಲಿ ಇರಿಸಲಾಗಿದ್ದು, ಪ್ರತ್ಯೇಕ ಶೆಡ್ ಹಾಗೂ ವಿಶೇಷ ಆರೈಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಲಿಯಾಗಬೇಕಿದ್ದ ಪ್ರಾಣಿ ಈಗ ಮೃಗಾಲಯದ ಪ್ರಮುಖ ಆಕರ್ಷಣೆಯಾಗಿ ಬದಲಾಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.