ಟೆಹ್ರಾನ್: ಇರಾನ್ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ತಮ್ಮ ರಾಜೀನಾಮೆ ಪತ್ರವನ್ನು ದೇಶದ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಕಚೇರಿಗೆ ಸಲ್ಲಿಸಿದ್ದಾರೆ ಎಂದು ‘ಇರಾನ್ ಇಂಟರ್ನ್ಯಾಷನಲ್’ ವರದಿ ಮಾಡಿದೆ.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಸರ್ಕಾರದ ಪ್ರಮುಖ ನಿರ್ಧಾರಗಳಲ್ಲಿ ಅತಿಯಾದ ಹಸ್ತಕ್ಷೇಪ ನಡೆಸುತ್ತಿರುವುದೇ ರಾಜೀನಾಮೆ ನಿರ್ಧಾರಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಇರಾನ್ನ ಉನ್ನತ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ, ದೇಶದ ಆಡಳಿತ ಮತ್ತು ಮಹತ್ವದ ನೀತಿ ನಿರ್ಧಾರಗಳ ಮೇಲಿನ ನಿಯಂತ್ರಣವನ್ನು ಐಆರ್ಜಿಸಿ ತನ್ನ ಕೈಗೆತ್ತಿಕೊಂಡಿದೆ. ಇದರಿಂದ ಅಧ್ಯಕ್ಷರು ಸೇರಿದಂತೆ ಹಿರಿಯ ನಾಗರಿಕ ಆಡಳಿತಾಧಿಕಾರಿಗಳನ್ನು ಹಲವು ಪ್ರಮುಖ ಚರ್ಚೆಗಳು ಮತ್ತು ನಿರ್ಧಾರ ಪ್ರಕ್ರಿಯೆಗಳಿಂದ ದೂರವಿಡಲಾಗುತ್ತಿದೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ತಮ್ಮ ಸಂವಿಧಾನಬದ್ಧ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಲು ಹಾಗೂ ಪರಿಣಾಮಕಾರಿ ಆಡಳಿತ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಧಿಕಾರ ತ್ಯಜಿಸಲು ಅನುಮತಿ ನೀಡುವಂತೆ ಅಧ್ಯಕ್ಷರು ತಮ್ಮ ಪತ್ರದಲ್ಲಿ ಕೋರಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇತ್ತೀಚೆಗೆ ಇರಾನ್ ಭಾಗಿಯಾಗಿದ್ದ ಪ್ರಾದೇಶಿಕ ಸಂಘರ್ಷಗಳು ಮತ್ತು ಅದರ ಪರಿಣಾಮವಾಗಿ ದೇಶ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ನಿರ್ವಹಣೆ ವಿಷಯದಲ್ಲಿ ಅಧ್ಯಕ್ಷ ಪೆಜೆಶ್ಕಿಯಾನ್ ಹಾಗೂ ಐಆರ್ಜಿಸಿ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ತೀವ್ರಗೊಂಡಿದ್ದವು ಎನ್ನಲಾಗಿದೆ.
ವಿಶೇಷವಾಗಿ ಯುದ್ಧ ನಿರ್ವಹಣೆಯ ವಿಧಾನ, ಅದರ ಪರಿಣಾಮವಾಗಿ ಜನಜೀವನ ಮತ್ತು ದೇಶದ ಆರ್ಥಿಕತೆಯ ಮೇಲೆ ಉಂಟಾದ ಪರಿಣಾಮಗಳ ಕುರಿತಂತೆ ಅಧ್ಯಕ್ಷರು ಮತ್ತು ಸೇನಾ ನಾಯಕರ ನಡುವೆ ಗಂಭೀರ ಮಟ್ಟದ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ಮೂಲಗಳು ತಿಳಿಸಿವೆ.
ಆದಾಗ್ಯೂ, ಅಧ್ಯಕ್ಷರ ರಾಜೀನಾಮೆ ಕುರಿತಾಗಿ ಇರಾನ್ ಸರ್ಕಾರ ಅಥವಾ ಖಮೇನಿ ಕಚೇರಿಯಿಂದ ಯಾವುದೇ ಅಧಿಕೃತ ದೃಢೀಕರಣ ಇದುವರೆಗೆ ಹೊರಬಿದ್ದಿಲ್ಲ.