ಬಹಾಮಾಸ್‌ನಲ್ಲಿ ಸಣ್ಣ ವಿಮಾನ ಪತನ:10 ಮಂದಿ ದುರ್ಮರಣ

ನಸ್ಸೌ (ಬಹಾಮಾಸ್): ಬಹಾಮಾಸ್ ರಾಜಧಾನಿ ನಸ್ಸೌ ನಗರದ ಪಶ್ಚಿಮ ಭಾಗದಲ್ಲಿರುವ ನಾರ್ತ್ ಆಂಡ್ರೋಸ್ ದ್ವೀಪದಲ್ಲಿ ಫ್ಲೆಮಿಂಗೊ ಏರ್ ಸಂಸ್ಥೆಗೆ ಸೇರಿದ ಸಣ್ಣ ವಿಮಾನ ಶುಕ್ರವಾರ ಸಂಜೆ ಪತನಗೊಂಡು, ಅದರಲ್ಲಿದ್ದ ಎಲ್ಲಾ 10 ಮಂದಿ ಮೃತಪಟ್ಟಿದ್ದಾರೆ.

ಬಹಾಮಾಸ್ ಪೊಲೀಸ್ ಆಯುಕ್ತೆ ಶಾಂತಾ ನೋಲ್ಸ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ವಿಮಾನದಲ್ಲಿ ಒಂಬತ್ತು ಪ್ರಯಾಣಿಕರು ಹಾಗೂ ಒಬ್ಬ ಪೈಲಟ್ ಪ್ರಯಾಣಿಸುತ್ತಿದ್ದರು. ಅಪಘಾತದ ಬಳಿಕ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರೂ, ಯಾರೂ ಜೀವಂತವಾಗಿ ಉಳಿದಿರಲಿಲ್ಲ ಎಂದು ತಿಳಿಸಿದರು.ಘಟನೆಯ ಕುರಿತು ಸಮಗ್ರ ತನಿಖೆ ನಡೆಸಲು ಪೊಲೀಸ್ ತನಿಖಾಧಿಕಾರಿಗಳನ್ನು ಆಂಡ್ರೋಸ್ ದ್ವೀಪಕ್ಕೆ ಕಳುಹಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಅವರು ಹೇಳಿದರು.

ಬಹಾಮಾಸ್ ವಿಮಾನ ಅಪಘಾತ ತನಿಖಾ ಪ್ರಾಧಿಕಾರದ ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನವು ನಸ್ಸೌನ ಲಿಂಡೆನ್ ಪಿಂಡ್ಲಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಯಾನ್ ಆಂಡ್ರೋಸ್ ವಿಮಾನ ನಿಲ್ದಾಣದತ್ತ ತೆರಳುತ್ತಿತ್ತು. ಲ್ಯಾಂಡಿಂಗ್‌ಗೆ ಕೆಲವೇ ಕ್ಷಣಗಳ ಮೊದಲು ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ನಿಯಂತ್ರಣ ತಪ್ಪಿದ ವಿಮಾನ ಪೊದೆಗಳ ಮಧ್ಯೆ ಪತನಗೊಂಡಿದೆ ಎಂದು ತಿಳಿಸಲಾಗಿದೆ.

ಬಹಾಮಾಸ್ ದೇಶವು ಕೆರಿಬಿಯನ್ ಸಮುದ್ರ ಮತ್ತು ಉತ್ತರ ಅಟ್ಲಾಂಟಿಕ್ ಮಹಾಸಾಗರ ಪ್ರದೇಶದಲ್ಲಿ ನೆಲೆಗೊಂಡಿದ್ದು, 700ಕ್ಕೂ ಹೆಚ್ಚು ದ್ವೀಪಗಳು ಹಾಗೂ 2,400ಕ್ಕೂ ಹೆಚ್ಚು ಸಣ್ಣ ದ್ವೀಪಗಳನ್ನು ಹೊಂದಿದೆ. ದ್ವೀಪಗಳ ನಡುವಿನ ಸಂಚಾರಕ್ಕೆ ಸಣ್ಣ ವಿಮಾನಗಳೇ ಪ್ರಮುಖ ಸಾರಿಗೆ ಸಾಧನಗಳಾಗಿವೆ

SHARE
Loading spinner

Leave a Reply

Your email address will not be published. Required fields are marked *

error: Content is protected !!