ಉಕ್ರೇನ್‌ನಲ್ಲಿ ರಷ್ಯಾ ಕ್ಷಿಪಣಿ ದಾಳಿ; ಕಾಸರಗೋಡು ಮೂಲದ ಅಖಿಲ್ ಸೇರಿ ನಾಲ್ವರು ಭಾರತೀಯರ ದುರ್ಮರಣ

ಕೀವ್, ಜು. 21: ಉಕ್ರೇನ್‌ನ ಪ್ರಮುಖ ಬಂದರು ನಗರವಾದ ಒಡೆಸಾ ಸಮೀಪ ವಾಣಿಜ್ಯ ಸರಕು ಸಾಗಣೆ ಹಡಗಿನ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕಾಸರಗೋಡು ಮೂಲದ ಯುವಕ ಸೇರಿದಂತೆ ನಾಲ್ವರು ಭಾರತೀಯರು ಸೇರಿ ಒಟ್ಟು 10 ಮಂದಿ ಮೃತಪಟ್ಟಿದ್ದಾರೆ.

ಮೃತ ಭಾರತೀಯರಲ್ಲಿ ಕಾಸರಗೋಡು ಜಿಲ್ಲೆಯ ವೆಲ್ಲರಿಕುಂಡು ಮೂಲದ ವ್ಯಾಪಾರಿ ನೌಕಾಪಡೆಯ ಉದ್ಯೋಗಿ ಅಖಿಲ್ ಜೋಯಾನ್ (26) ಗುರುತಿಸಲ್ಪಟ್ಟಿದ್ದಾರೆ. ಅವರು ಜೋಯಾನ್ ಹಾಗೂ ಸ್ಯಾಲಿ ದಂಪತಿಯ ಪುತ್ರರಾಗಿದ್ದಾರೆ. ಉಳಿದ ಮೂವರು ಭಾರತೀಯರ ಗುರುತು ಇನ್ನೂ ಬಹಿರಂಗವಾಗಿಲ್ಲ. ಮತ್ತೋರ್ವ ಭಾರತೀಯ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ರಷ್ಯಾ–ಉಕ್ರೇನ್ ಯುದ್ಧದ ನಡುವೆಯೇ ನಡೆದ ಈ ದಾಳಿ ಆತಂಕಕ್ಕೆ ಕಾರಣವಾಗಿದೆ. ವಾಣಿಜ್ಯ ಹಡಗಿನ ಮೇಲೆ ನಡೆದ ಕ್ಷಿಪಣಿ ದಾಳಿಯಿಂದ ಭಾರೀ ಪ್ರಮಾಣದ ಪ್ರಾಣಹಾನಿ ಸಂಭವಿಸಿದೆ.

ಈ ಘಟನೆಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದ್ದು, ಭಾರತೀಯರು ಪ್ರಯಾಣಿಸುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆಸಿರುವುದು ಅತ್ಯಂತ ಖಂಡನೀಯ ಹಾಗೂ ವಿಷಾದನೀಯ ಎಂದು ಹೇಳಿದೆ. ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸುವುದು, ನಿರಪರಾಧಿ ನಾಗರಿಕ ಸಿಬ್ಬಂದಿಯನ್ನು ಗುರಿಯಾಗಿಸುವುದು ಹಾಗೂ ಅಂತರರಾಷ್ಟ್ರೀಯ ಸಾಗರ ವ್ಯಾಪಾರದ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಇಂತಹ ದಾಳಿಗಳನ್ನು ತಕ್ಷಣವೇ ನಿಲ್ಲಿಸಿ, ಅಂತರರಾಷ್ಟ್ರೀಯ ಮಾನವೀಯ ಕಾನೂನು ಹಾಗೂ ಸಮುದ್ರ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕೆಂದು ಭಾರತ ಸರ್ಕಾರ ಆಗ್ರಹಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!