ಮಂಜೇಶ್ವರ: ಮಾದಕ ವಸ್ತು ವ್ಯಾಪನದ ವಿರುದ್ಧ ರಾಜ್ಯ ಸರ್ಕಾರದ ‘ಆಪರೇಶನ್ ತೂಫಾನ್’ ಅಭಿಯಾನದ ಭಾಗವಾಗಿ ಮಂಜೇಶ್ವರ ಬ್ಲೋಕ್ ಪಂಚಾಯತ್ ಆಯೋಜಿಸಿದ್ದ ಶೂಟೌಟ್ ಸ್ಪರ್ಧೆಯ ವಿಜೇತರಿಗೆ ಬ್ಲೋಕ್ ಪಂಚಾಯತ್ ಸಭಾಂಗಣದಲ್ಲಿ ಬಹುಮಾನ ವಿತರಿಸಲಾಯಿತು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬ್ಲೋಕ್ ಪಂಚಾಯತ್ ಅಧ್ಯಕ್ಷ ಯು.ಕೆ.ಸೈಫುಲ್ಲ ತಂಗಳ್, ಮಾದಕ ವಸ್ತುಗಳ ನಿರ್ಮೂಲನೆಗೆ ಸರ್ಕಾರದ ಪ್ರಯತ್ನದೊಂದಿಗೆ ಸಾರ್ವಜನಿಕರ ಜಾಗೃತಿ ಅತ್ಯಗತ್ಯ ಎಂದರು. ಪ್ರತಿಯೊಬ್ಬರೂ ‘ತೂಫಾನ್ ವಾರಿಯರ್’ ಆಗಿ ಕೈಜೋಡಿಸಬೇಕೆಂದು ಕರೆ ನೀಡಿದ ಅವರು, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಮಾದಕ ವಸ್ತು ವಿರೋಧಿ ಪ್ರತಿಜ್ಞೆ ಬೋಧಿಸಿದರು.

ಉಪಾಧ್ಯಕ್ಷೆ ಕಮಲಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಜುಲೈ 25 ರಂದು ಉಪ್ಪಳದಲ್ಲಿ ನಡೆದ ಶೂಟೌಟ್ ಸ್ಪರ್ಧೆಯಲ್ಲಿ ಮೌಲಾನ ಫ್ರೆಂಡ್ಸ್ ಮಂಜೇಶ್ವರ ಪ್ರಥಮ ಹಾಗೂ ಕಜ ಫ್ರೆಂಡ್ಸ್ ದ್ವಿತೀಯ ಸ್ಥಾನ ಪಡೆದವು. ಇದೇ ವೇಳೆ ವಿಶ್ವಕಪ್ ಭವಿಷ್ಯವಾಣಿ ಸ್ಪರ್ಧೆಯ ವಿಜೇತರಾದ ಹಬೀದ್ (ರೂ.10,001), ಫಜಲ್ ಸಿ.ಎಲ್. ಮತ್ತು ಸತೀಶ್ ಬಿ. (ತಲಾ ರೂ.5001) ಅವರಿಗೆ ನಗದು ಬಹುಮಾನ ವಿತರಿಸಲಾಯಿತು.


ಕಾರ್ಯದರ್ಶಿ ಕೆ. ಹರೀಶ್ ಸ್ವಾಗತಿಸಿ, ಸದಸ್ಯೆ ಬೀಪಾತು ಧನ್ಯವಾದ ಅರ್ಪಿಸಿದರು.


