ಮಸ್ಕತ್ (ಓಮನ್): ಒಮಾನ್ ಕರಾವಳಿಯ ಹಾರ್ಮುಜ್ ಜಲಸಂಧಿಯಲ್ಲಿ ಪನಾಮ ಧ್ವಜ ಹೊಂದಿದ್ದ ಎಂ.ಟಿ. ಆನ್ ಪೀಸ್ ವಾಣಿಜ್ಯ ತೈಲ ನೌಕೆಯ ಮೇಲೆ ಅಪರಿಚಿತ ದಿಕ್ಕಿನಿಂದ ಕ್ಷಿಪಣಿ ಅಥವಾ ಶೆಲ್ ಮಾದರಿಯ ವಸ್ತು ಅಪ್ಪಳಿಸಿದ ಪರಿಣಾಮ 11 ಭಾರತೀಯರು ಸೇರಿದಂತೆ 12 ನಾವಿಕರು ಗಾಯಗೊಂಡಿದ್ದಾರೆ.

ಹಡಗಿನಲ್ಲಿದ್ದ 19 ಸಿಬ್ಬಂದಿಯಲ್ಲಿ 17 ಮಂದಿ ಭಾರತೀಯರಾಗಿದ್ದರು. ಗಾಯಾಳುಗಳನ್ನು ಒಮಾನ್ ಅಧಿಕಾರಿಗಳ ನೆರವಿನಿಂದ ಹೆಲಿಕಾಪ್ಟರ್ ಹಾಗೂ ಬೋಟ್‌ಗಳ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸಿ ಖಸಬ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ವಾಣಿಜ್ಯ ಹಡಗುಗಳು ಹಾಗೂ ನಾವಿಕರ ಮೇಲಿನ ದಾಳಿಗಳು ತಕ್ಷಣ ನಿಲ್ಲಬೇಕು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಆಗ್ರಹಿಸಿದ್ದಾರೆ. ಗಾಯಾಳುಗಳ ರಕ್ಷಣೆಗೆ ನೆರವಾದ ಒಮಾನ್ ಅಧಿಕಾರಿಗಳಿಗೆ ಭಾರತ ಸರ್ಕಾರ ಧನ್ಯವಾದ ಸಲ್ಲಿಸಿದೆ.

