ಅರ್ಕಿನ ಸಂಸ್ಥೆಯ 15ನೇ ವಾರ್ಷಿಕೋತ್ಸವ, ಆರನೇ ತ್ರೈವಾರ್ಷಿಕ ಸಮ್ಮೇಳನ

ಲಾಸ್ ವೇಗಸ್: ಅಸೋಸಿಯೇಷನ್ ಆಫ್ ರಾಮಕ್ಷತ್ರಿಯಾಸ್ ಇನ್ ನಾರ್ತ್ ಅಮೆರಿಕಾ (ಅರ್ಕಿನ) ಸಂಸ್ಥೆಯ 15ನೇ ವಾರ್ಷಿಕೋತ್ಸವ ಹಾಗೂ ಆರನೇ ತ್ರೈವಾರ್ಷಿಕ ಸಮ್ಮೇಳನ ಅಮೆರಿಕದ ನೆವಾಡಾ ರಾಜ್ಯದ ಲಾಸ್ ವೇಗಸ್‌ನ ರಿಯೋ ಹೋಟೆಲ್ ಅಂಡ್ ರೆಸಾರ್ಟ್‌ನಲ್ಲಿ ಸೆ.26ರಂದು ವಿಜೃಂಭಣೆಯಿಂದ ನಡೆಯಿತು.

ಮೂರು ಹಂತಗಳಲ್ಲಿ ನಡೆದ ಕಾರ್ಯಕ್ರಮದ ಮೊದಲ ಹಂತದ ಸಭಾ ಕಾರ್ಯಕ್ರಮವು ಮಾಸ್ಟರ್ ಮಯಾಂಕ್ ರಾವ್ ಅವರ ದೇವರನಾಮ ಗಾಯನ ಹಾಗೂ ಕುಮಾರಿ ಆವ್ಯಾ ಕುಂದಾಪುರ ಅವರ ಗಣೇಶ ಸ್ತುತಿ ನೃತ್ಯದೊಂದಿಗೆ ಆರಂಭವಾಯಿತು. ಬಳಿಕ ಅರ್ಕಿನ ಅಧ್ಯಕ್ಷ ಡಾ. ಮೋಹನಚಂದ್ರ ಕೆ.ಪಿ. ಅವರು ಅತಿಥಿಗಳು ಹಾಗೂ ಸಮಾಜದ ಬಂಧುಗಳನ್ನು ಸ್ವಾಗತಿಸಿದರು.

ಹೋಟೆಲ್ ಉದ್ಯಮಿ ಮಂಜುನಾಥ್ ಶೇರಿಗಾರ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಮಾಲಿನಿ ನೀರಂಬಳ್ಳಿ ಪ್ರಭು, ಹೋಟೆಲ್ ಉದ್ಯಮಿ ಪ್ರಭಾಕರ ಕಂಡೂರ್ ಶೇರೆಗಾರ್ ಹಾಗೂ ಅರ್ಕಿನ ಗೌರವಾಧ್ಯಕ್ಷ ಡಾ. ಕಿಶನ್ ಕುಂಬಳ ಉಪಸ್ಥಿತರಿದ್ದರು.

ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ರಾವ್ ಅವರು ಅರ್ಕಿನ ಸಂಸ್ಥೆಯ ವಿವಿಧ ಕಾರ್ಯಚಟುವಟಿಕೆಗಳು ಹಾಗೂ ಸಾಧನೆಗಳ ಕುರಿತು ಮಾಹಿತಿ ನೀಡಿದರು. ಮುಖ್ಯ ಅತಿಥಿ ಡಾ. ಮಾಲಿನಿ ನೀರಂಬಳ್ಳಿ ಪ್ರಭು ಸಭೆಯನ್ನುದ್ದೇಶಿಸಿ ಮಾತನಾಡಿದರು. ಬಳಿಕ ಪ್ರಭಾಕರ ಕಂಡೂರ್ ಶೇರೆಗಾರ್ ಅವರು ಸಂಸ್ಥೆಯ ಸ್ಮರಣ ಸಂಚಿಕೆ ‘ಸ್ಪಂದನ–26’ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಡಾ. ಕಿಶನ್ ಕುಂಬಳ ಅವರು ಅತಿಥಿಗಳು ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಮೊದಲ ಹಂತದ ಕಾರ್ಯಕ್ರಮವನ್ನು ಡಾ. ಇಂದುಮತಿ ಮೋಹನಚಂದ್ರ ನಿರ್ವಹಿಸಿದರು.

ಮಕ್ಕಳಿಂದ ಪ್ರತಿಭಾ ಪ್ರದರ್ಶನ

ಎರಡನೇ ಹಂತದ ಮನರಂಜನಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರ ಮಕ್ಕಳು ವಿವಿಧ ಪ್ರತಿಭಾ ಪ್ರದರ್ಶನ ನೀಡಿದರು. ಕುಮಾರಿ ಸಾನ್ನಿ ಕುಂದಾಪುರ ಅವರು ಗಿಟಾರ್ ವಾದನದ ಮೂಲಕ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಹಾಡುಗಳನ್ನು ಪ್ರಸ್ತುತಪಡಿಸಿದರು. ಕುಮಾರಿ ಮಹಿಕ ರಾವ್ ಅವರ ಭರತನಾಟ್ಯ ಗಮನ ಸೆಳೆಯಿತು.

ಕುಮಾರಿ ರಾ ಉಗ್ರಾಣಿ, ಕುಮಾರಿ ಆವ್ಯಾ ಕುಂದಾಪುರ ಹಾಗೂ ಕುಮಾರಿ ಆರ್ನ ನಾಗರಾಜ ಅವರ ಚೀರ್‌ಲೀಡಿಂಗ್, ಕರಾಟೆ ಮತ್ತು ಜಿಮ್ನಾಸ್ಟಿಕ್ಸ್ ಪ್ರಾತ್ಯಕ್ಷಿಕೆಗಳು ಸಭಿಕರ ಮೆಚ್ಚುಗೆಗೆ ಪಾತ್ರವಾದವು. ಬಳಿಕ ನಡೆದ ಭೋಜನ ಕೂಟದಲ್ಲಿ ವಿವಿಧ ವಿಶೇಷ ಖಾದ್ಯಗಳನ್ನು ಉಣಬಡಿಸಲಾಯಿತು.

ಮಧ್ಯಾಹ್ನದ ಭೋಜನದ ಬಳಿಕ ನಡೆದ ಮೂರನೇ ಹಂತದ ಕಾರ್ಯಕ್ರಮದಲ್ಲಿ ಮಾಸ್ಟರ್ ಮಯಾಂಕ್ ರಾವ್ ಅವರು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಕುರಿತು ಮಾತನಾಡಿದರು.

ಇಂದುಮತಿ ಮೋಹನಚಂದ್ರ, ಕವಿತಾ ರಾವ್, ಸುದೀರ್ ಶಂಕರ್ ಹಾಗೂ ಮೋಹನಚಂದ್ರ ಅಭಿನಯಿಸಿದ ‘ಪರಿವರ್ತನೆ’ ಕಿರು ನಾಟಕ ಪ್ರೇಕ್ಷಕರ ಗಮನ ಸೆಳೆಯಿತು. ಕವನ ಕುಂದಾಪುರ ಹಾಗೂ ಆರ್ನ ನಾಗರಾಜ ಅವರ ತಾಯಿ–ಮಗಳ ಜುಗಲ್ಬಂದಿ ನೃತ್ಯ ಮನಸೂರೆಗೊಂಡಿತು.

ಅರ್ಕಿನ ಪದಾಧಿಕಾರಿಗಳಾದ ರವಿ ಕೋಟೆಕಾರ್ ಹಾಗೂ ರಾಜೇಶ್ ರಾವ್ ಅವರ ಸಂಗೀತ ಕಾರ್ಯಕ್ರಮವೂ ರಂಜಿಸಿತು. ಡಾ. ಮಾಲಿನಿ ಪ್ರಭು ಅವರ ನೇತೃತ್ವದಲ್ಲಿ ಸುಧಿಕ ಶೇರುಗಾರ್, ಅಖಿಲ ಕೋಡಿ, ವಿಜೇತ ಮದ್ದೋಡಿ, ಪದ್ಮಿನಿ ರವಿಕುಮಾರ್ ಹಾಗೂ ಕವನ ಕುಂದಾಪುರ ಅವರನ್ನೊಳಗೊಂಡ ಮಹಿಳಾ ಸದಸ್ಯರ ಸಮೂಹ ನೃತ್ಯ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ಎರಡನೇ ಹಾಗೂ ಮೂರನೇ ಹಂತದ ಕಾರ್ಯಕ್ರಮಗಳನ್ನು ರೇಷ್ಮಾ ಕುಂದಾಪುರ ನಿರ್ವಹಿಸಿದರು.

ವಿವಿಧ ರಾಜ್ಯಗಳಿಂದ ಸದಸ್ಯರ ಪಾಲ್ಗೊಳ್ಳುವಿಕೆ

ಲಾಸ್ ವೇಗಸ್‌ನಲ್ಲಿ ನಡೆದ ಸಮ್ಮೇಳನದಲ್ಲಿ ವಾಷಿಂಗ್ಟನ್, ಕ್ಯಾಲಿಫೋರ್ನಿಯಾ, ಫ್ಲೋರಿಡಾ, ಟೆಕ್ಸಾಸ್, ಜಾರ್ಜಿಯಾ, ಮೇರಿಲ್ಯಾಂಡ್, ಇಲಿನಾಯ್ಸ್, ಮ್ಯಾಸಚೂಸೆಟ್ಸ್, ಓಹಿಯೋ ಸೇರಿದಂತೆ ಅಮೆರಿಕದ ವಿವಿಧ ರಾಜ್ಯಗಳಿಂದ ಅರ್ಕಿನ ಸದಸ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದ ಧ್ವನಿವರ್ಧಕ ಹಾಗೂ ಪವರ್‌ಪಾಯಿಂಟ್ ಪ್ರಸ್ತುತಿಗೆ ರಾಜೇಂದ್ರ ಕುಂದಾಪುರ, ವಿಡಿಯೋಗ್ರಫಿಗೆ ಸುಧೀರ್ ಕಾಸರಗೋಡು, ಛಾಯಾಗ್ರಹಣಕ್ಕೆ ಡಾ. ಪ್ರಶಾಂತ್ ಕುಮಾರ್ ಹಾಗೂ ವೇದಿಕೆ ಸಿದ್ಧತೆಗೆ ಮೋಹನ್ ನಾಯಕ್ ಸೇರಿದಂತೆ ಹಲವು ಸದಸ್ಯರು ಸಹಕರಿಸಿದರು.

ಸಮ್ಮೇಳನಕ್ಕೆ ಆಗಮಿಸಿದ ಸಮಾಜದ ಬಂಧುಗಳಿಗೆ ಕಾರ್ಯಕ್ರಮದ ಹಿಂದಿನ ದಿನ ಲಾಸ್ ವೇಗಸ್‌ನಲ್ಲಿ ವಾಸಿಸುತ್ತಿರುವ ವೇಣುಗೋಪಾಲ್ ಶೇರೆಗಾರ್ ಹಾಗೂ ಶ್ರುತಿ ಶೇರೆಗಾರ್ ಕುಟುಂಬದವರು ತಮ್ಮ ಮನೆಯಲ್ಲಿ ಔತಣಕೂಟ ಏರ್ಪಡಿಸಿ ಆತ್ಮೀಯವಾಗಿ ಸತ್ಕರಿಸಿದರು.

ಸಮ್ಮೇಳನಕ್ಕೆ ಆರ್ಥಿಕವಾಗಿ ಸಹಕರಿಸಿದ ಹೋಟೆಲ್ ಉದ್ಯಮಿಗಳಾದ ರಾಘವೇಂದ್ರ ಶೇರೆಗಾರ್, ಮಂಜುನಾಥ್ ಶೇರಿಗಾರ್, ಪ್ರಭಾಕರ ಕಂಡೂರ್ ಹಾಗೂ ಜಯಪ್ರಕಾಶ್ ಗುಲ್ಲಾಡಿ ಮತ್ತು ಅವರ ಕುಟುಂಬಸ್ಥರಿಗೆ ಅರ್ಕಿನ ಸಂಸ್ಥೆ ಕೃತಜ್ಞತೆ ಸಲ್ಲಿಸಿದೆ. ‘ಸ್ಪಂದನ–26’ ಸ್ಮರಣ ಸಂಚಿಕೆಯಲ್ಲಿ ಶುಭಹಾರೈಸಿದ ಸಂಸ್ಥೆಯ ಸದಸ್ಯರು ಹಾಗೂ ಔತಣಕೂಟ ಏರ್ಪಡಿಸಿ ಅತಿಥಿಗಳನ್ನು ಸತ್ಕರಿಸಿದ ವೇಣುಗೋಪಾಲ್ ಶೇರೆಗಾರ್ ಕುಟುಂಬಕ್ಕೂ ಸಂಸ್ಥೆ ಧನ್ಯವಾದ ಅರ್ಪಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!