2025ರ ಕರೂರು ದುರಂತಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರೂರಿನಲ್ಲಿ ತಾವು ನಡೆಸಿದ ರ್ಯಾಲಿಯ ವೇಳೆ ಪೊಲೀಸರನ್ನು ನಂಬಿದ್ದು ತಮ್ಮ ದೊಡ್ಡ ತಪ್ಪಾಗಿತ್ತು ಎಂದು ವಿಜಯ್ ಹೇಳಿದ್ದಾರೆ.
ನಾಮಕ್ಕಲ್‌ನಲ್ಲಿ ಸಭೆ ಮುಗಿಸಿ ಕರೂರಿಗೆ ಬರುತ್ತಿದ್ದಾಗ ಅಲ್ಲಿನ ನೈಜ ಪರಿಸ್ಥಿತಿಯನ್ನು ಪೊಲೀಸರು ತಿಳಿಸಲಿಲ್ಲ. ಮುಂಚಿತವಾಗಿ ಮಾಹಿತಿ ನೀಡಿದ್ದರೆ ಕಾರ್ಯಕ್ರಮವನ್ನೇ ರದ್ದುಗೊಳಿಸುತ್ತಿದ್ದೆ. ಈ ವಿಷಯದಲ್ಲಿ ನನಗೆ ಮೋಸವಾಗಿದೆ ಎಂದು ವಿಜಯ್ ಆರೋಪಿಸಿದರು.

ಕರೂರಿನಲ್ಲಿ ವಿಜಯ್ ಮಾಡಿದ ಭಾಷಣ ಭಾವನಾತ್ಮಕವಾಗಿಯೂ, ಉತ್ಸಾಹಭರಿತವಾಗಿಯೂ ಇತ್ತು.
“ಟಿವಿಯಲ್ಲಿ ನನ್ನ ಫೋಟೋ ನೋಡಿ ‘ವಿಜಯ್ ಅಣ್ಣಾ’ ಎಂದು ಹೇಳುತ್ತಾ ಮುತ್ತಿಟ್ಟು ಬಂದಿದ್ದ ಮಕ್ಕಳು ಸಹ ಆ ದುರಂತಕ್ಕೆ ಬಲಿಯಾದರು. ಆ ನೋವು ನನ್ನ ಮನಸಿನಿಂದ ಎಂದಿಗೂ ಮಾಯವಾಗುವುದಿಲ್ಲ. ಆದರೆ, ಅದರ ಸಂಪೂರ್ಣ ಹೊಣೆಯನ್ನು ನನ್ನ ಮೇಲೆ ಹೊರಿಸಲು ಪ್ರಯತ್ನಿಸಿದರು. ಇಷ್ಟು ದೊಡ್ಡ ದುರಂತವನ್ನೂ ರಾಜಕೀಯ ಲಾಭಕ್ಕೆ ಬಳಸಲು ಯತ್ನಿಸಲಿಲ್ಲವೇ?” ಎಂದು ಅವರು ಪ್ರಶ್ನಿಸಿದರು.
“ನಾನು ಓಡಿ ಹೋಗಿದ್ದೇನೆ ಎಂದು ಹೇಳಿದ್ರಲ್ಲ. ‘ಹೊರಗೆ ಬಾ, ಹೊರಗೆ ಬಾ’ ಎಂದು ಸವಾಲು ಹಾಕಿದ್ರಲ್ಲ. ಇಷ್ಟೆಲ್ಲಾ ಹೇಳಿದರೆ ನಾನು ಹೆದರಿ ಓಡಿ ಹೋಗುತ್ತೇನೆ ಎಂದುಕೊಂಡಿರಾ? ನಾನು ಅಂಥವನಲ್ಲ. ಹಣ ಮುಖ್ಯವೇ, ಜನ ಮುಖ್ಯವೇ ಎಂದು ಕೇಳಿದರೆ ನನ್ನ ಉತ್ತರ ಜನರೇ ಮುಖ್ಯ. ಜನರಿಗಾಗಿ ಎಲ್ಲವನ್ನೂ ತ್ಯಜಿಸಿ ರಾಜಕೀಯಕ್ಕೆ ಬಂದಿದ್ದೇನೆ,” ಎಂದು ವಿಜಯ್ ಹೇಳಿದರು.


