ದೇಣಿಗೆ ದುರ್ಬಳಕೆ ಪ್ರಕರಣದ ಬೆನ್ನಲ್ಲೇ ಅಯೋಧ್ಯೆಯ ರಾಮಮಂದಿರದಲ್ಲಿ ಸಾಮೂಹಿಕ ರಾಜೀನಾಮೆ ನಡೆದಿದೆ. ಕಾಣಿಕೆ ಎಣಿಕೆ ವಿಭಾಗದ ಸುಮಾರು 24 ಸಿಬ್ಬಂದಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ದೇಣಿಗೆ ಹಗರಣದ ಕುರಿತು ವಿಶೇಷ ತನಿಖಾ ತಂಡ (SIT) ತನಿಖೆ ನಡೆಸುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.
ಕೆಲಸದ ಸಮಯವನ್ನು ಹೆಚ್ಚಿಸಲಾಗಿದೆ, ವೇತನ ಕಡಿತ ಮಾಡಲಾಗಿದೆ ಹಾಗೂ ರಜೆಗಳನ್ನು ಕಡಿಮೆ ಮಾಡಲಾಗಿದೆ ಎಂಬ ಆರೋಪದೊಂದಿಗೆ ಸಿಬ್ಬಂದಿ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಆಡಳಿತಕ್ಕೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ, ದೇಣಿಗೆ ಹಗರಣದಲ್ಲಿ ಬಂಧಿತರಾಗಿರುವ ಪ್ರಮುಖ ಆರೋಪಿ ಅನುಕಲ್ಪ್ ಮಿಶ್ರ ಕಳವು ಮಾಡಿದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾನೆ ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭ್ಯವಾಗಿದೆ. ಆರೋಪಿಗಳ ಬ್ಯಾಂಕ್ ಖಾತೆಗಳು ಹಾಗೂ ಹಣಕಾಸು ವ್ಯವಹಾರಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಮಾಜಿ ಟ್ರಸ್ಟಿ ಅನಿಲ್ ಮಿಶ್ರ ಹಾಗೂ ವಿಶೇಷ ಆಹ್ವಾನಿತ ಗೋಪಾಲ್ ರಾವ್ ಅವರ ಹೆಸರಿನಲ್ಲಿ ವಿಐಪಿ ದರ್ಶನಕ್ಕೆ ಬಳಸಲಾಗುತ್ತಿದ್ದ ಡಿಜಿಟಲ್ ಐಡಿಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.
ಬಂಧಿತ ಆರೋಪಿಗಳಿಗೆ ಸಂಬಂಧಿಸಿದ ಸುಮಾರು 30 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಡಿಜಿಟಲ್ ಹಣಕಾಸು ವ್ಯವಹಾರಗಳನ್ನೂ ತನಿಖೆ ನಡೆಸಲಾಗುತ್ತಿದೆ. ದೇಣಿಗೆ ಅಕ್ರಮ ಆರೋಪ ಕೇಳಿಬಂದಿರುವ ಉತ್ತರಾಖಂಡದ ಬದ್ರಿನಾಥ ದೇವಸ್ಥಾನ ಹಾಗೂ ಮಧ್ಯಪ್ರದೇಶದ ಬಾಗ್ಲಮುಖಿ ದೇವಸ್ಥಾನಗಳಲ್ಲಿಯೂ ಎಸ್‌ಐಟಿ ತನಿಖೆ ಆರಂಭಿಸಿದೆ


