ಸಂಡೇ ಬಜಾರ್ ಪುನರಾರಂಭಕ್ಕೆ ಆಗ್ರಹಿಸಿ ಬೀದಿಬದಿ ವ್ಯಾಪಾರಸ್ಥರ ಹೋರಾಟ ತೀವ್ರ

ಪಾಲಿಕೆ ಕಚೇರಿ ಎದುರು ಹಗಲು-ರಾತ್ರಿ ಧರಣಿ; ಆಯುಕ್ತರ ಕಚೇರಿಗೆ ಮುತ್ತಿಗೆ

ಮಂಗಳೂರು, ಜು. 10: ಸಂಡೇ ಬಜಾರ್ (ಭಾನುವಾರದ ಮಾರುಕಟ್ಟೆ) ವ್ಯಾಪಾರಕ್ಕೆ ಮತ್ತೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದೆ.

ನಗರ ಪಾಲಿಕೆ ಕಚೇರಿ ಎದುರು ಆರಂಭಿಸಿರುವ ಹಗಲು-ರಾತ್ರಿ ಧರಣಿ ಸತ್ಯಾಗ್ರಹಕ್ಕೆ 24 ಗಂಟೆ ಕಳೆದರೂ ಅಧಿಕಾರಿಗಳು ಮನವಿಯನ್ನು ಸ್ವೀಕರಿಸಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ಬಳಿಕ ಪಾಲಿಕೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಸಂಡೇ ಬಜಾರ್‌ನಲ್ಲಿ ವ್ಯಾಪಾರ ನಡೆಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ ಬೀದಿಬದಿ ವ್ಯಾಪಾರಿಗಳು, 16 ಅಡಿ ಅಗಲದ ಪಾದಚಾರಿ ಮಾರ್ಗದಲ್ಲಿ ಕೇವಲ 4 ಅಡಿ ಜಾಗವನ್ನು ವ್ಯಾಪಾರಕ್ಕಾಗಿ ಬಳಸಿದರೆ ಪಾದಚಾರಿಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ವಾದಿಸಿದರು.

ಬೀದಿಬದಿ ವ್ಯಾಪಾರಿಗಳ ಜೀವನೋಪಾಯವನ್ನು ಕಸಿದುಕೊಳ್ಳುವ ಬದಲು ಅವರಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಿ ಸಂಡೇ ಬಜಾರ್ ಪುನರಾರಂಭಕ್ಕೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ತಮ್ಮ ಬೇಡಿಕೆ ಈಡೇರುವವರೆಗೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಮುಖಂಡರಾದ ಸುನಿಲ್ ಕುಮಾರ್ ಬಜಾಲ್ ಹಾಗೂ ಬಿ.ಕೆ. ಇಮ್ತಿಯಾಜ್ ಸೇರಿದಂತೆ ಬಹುಸಂಖ್ಯೆಯಲ್ಲಿ ಬೀದಿಬದಿ ವ್ಯಾಪಾರಸ್ಥರು ಭಾಗವಹಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!