ನವದೆಹಲಿ, ಜುಲೈ 14: ಹಾರ್ಮುಝ್ ಜಲಸಂಧಿಯಲ್ಲಿ ಯುಎಇ ಧ್ವಜ ಹೊಂದಿದ್ದ ಎರಡು ತೈಲ ಟ್ಯಾಂಕರ್‌ಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಪರಿಣಾಮ ಓರ್ವ ಭಾರತೀಯ ನಾವಿಕ ಮೃತಪಟ್ಟಿದ್ದು, ಆರು ಭಾರತೀಯರು ಸೇರಿದಂತೆ ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ. ಅಮೆರಿಕ–ಇರಾನ್ ನಡುವಿನ ಉದ್ವಿಗ್ನತೆ ಹಾಗೂ ಹಾರ್ಮುಝ್ ಜಲಸಂಧಿಯ ನಿಯಂತ್ರಣ ಕುರಿತ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆಯೇ ಈ ದಾಳಿ ನಡೆದಿದೆ.

ಯುಎಇ ರಕ್ಷಣಾ ಸಚಿವಾಲಯದ ಪ್ರಕಾರ, ಒಮಾನ್ ಸಮುದ್ರ ವ್ಯಾಪ್ತಿಯ ಹಾರ್ಮುಝ್ ಜಲಸಂಧಿಯ ದಕ್ಷಿಣ ಮಾರ್ಗದಲ್ಲಿ ಸಂಚರಿಸುತ್ತಿದ್ದ ‘ಮೊಂಬಾಸಾ’ ಮತ್ತು ‘ಬಹಿಯಾ’ ಹೆಸರಿನ ಟ್ಯಾಂಕರ್‌ಗಳ ಮೇಲೆ ಎರಡು ಕ್ಷಿಪಣಿಗಳು ಅಪ್ಪಳಿಸಿದ್ದು, ಎರಡೂ ಹಡಗುಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಗಾಯಗೊಂಡವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಲಾಗಿದೆ.

ಘಟನೆಯನ್ನು ಯುಎಇ ತೀವ್ರವಾಗಿ ಖಂಡಿಸಿದ್ದು, ಇದು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ದೇಶದ ಭದ್ರತೆ, ನಾಗರಿಕರು ಹಾಗೂ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳುವ ಹಕ್ಕು ಯುಎಇಗೆ ಇದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಇದೇ ವೇಳೆ, ಹಾರ್ಮುಝ್ ಜಲಸಂಧಿಯಲ್ಲಿ ನಿಯಮ ಉಲ್ಲಂಘಿಸಿದ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇರಾನ್ ಹೇಳಿಕೊಂಡಿದೆ.

ಇದರ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಝ್ ಜಲಸಂಧಿಯಲ್ಲಿ ಹಡಗು ಸಂಚಾರದ ಮೇಲಿನ ನಿಯಂತ್ರಣವನ್ನು ಬಲಪಡಿಸುವುದಾಗಿ ಹಾಗೂ ಭದ್ರತಾ ವೆಚ್ಚ ಭರಿಸಲು ಜಲಸಂಧಿ ಮೂಲಕ ಸಾಗುವ ವಾಣಿಜ್ಯ ಹಡಗುಗಳಿಗೆ ಶೇಕಡಾ 20ರಷ್ಟು ಶುಲ್ಕ ವಿಧಿಸುವುದಾಗಿ ಘೋಷಿಸಿದ್ದಾರೆ. ಈ ಬೆಳವಣಿಗೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಜಾಗತಿಕ ತೈಲ ಪೂರೈಕೆ ಮತ್ತು ನೌಕಾಸಂಚಾರದ ಮೇಲೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.

